ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮನಷ್ಯರ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ಹಲ್ಲು ಮತ್ತು ಬಾಯಿ ಆರೋಗ್ಯವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶಾಸಕ ಎಚ್.ಟಿ ಮಂಜು ಅಭಿಪ್ರಾಯಪಟ್ಟರು.ತಾಲೂಕಿನ ಸಿಂಧಘಟ್ಟ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಅರೋಗ್ಯಧಿಕಾರಿಗಳ ಕಚೇರಿ, ರಾಷ್ಟ್ರೀಯ ಓರಲ್ ಹೆಲ್ತ್ ಪಾಲಿಸಿ ದಂತ ಭಾಗ್ಯ ರಾಜರಾಜೇಶ್ವರಿ ದಂತ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಬೆಂಗಳೂರು ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಮತ್ತು ಉಚಿತ ದಂತ ಭಾಗ್ಯ ಫಲಾನುಭವಿಗಳ ಆಯ್ಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿವರು.
ಗ್ರಾಮೀಣದ ಜನರು ತಮ್ಮ ಕೃಷಿ ಚಟುವಟಿಕೆ ಒತ್ತಡದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿಲ್ಲ. ಇದರಿಂದಾಗಿ ಅರಿವಿಗೆ ಬರುವ ಮುನ್ನವೇ ವ್ಯಕ್ತಿ ಕಾಯಿಲೆಗಳಿಗೆ ಒಳಗಾಗಿರುತ್ತಾನೆ. ರೋಗ ಬಂದ ಅನಂತರ ಚಿಕಿತ್ಸೆಗೆ ಹೋಗುವ ಬದಲು ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು ಎಂದರು.ಗ್ರಾಮೀಣ ಜನರ ಆರೋಗ್ಯ ರಕ್ಷಣೆಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಶಿಬಿರಗಳಲ್ಲಿ ಪ್ರತಿಯೊಬ್ಬರು ಭಾಗಿಯಾಗಿ ಕಾಯಿಲೆಗಳನ್ನು ಪ್ರಾರಂಭದಲ್ಲೇ ಪತ್ತೆ ಹಚ್ಚಿದರೆ ಸುಲಭವಾಗಿ ರೋಗ ಗುಣಪಡಿಸಬಹುದು ಎಂದರು.
ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಹಾಗೂ ಒತ್ತಡದ ದೈನಂದಿನ ಬದುಕಿನ ದಿನಗಳ ಮಧ್ಯೆ ಜನರಲ್ಲಿ ಆರೋಗ್ಯ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇವುಗಳ ನಿವಾರಣೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಸಹಕಾರಿಯಾಗುತ್ತದೆ ಎಂದರು.ಜಿಲ್ಲಾ ದಂತ ಅರೋಗ್ಯಧಿಕಾರಿ ಅರುಣಾನಂದ್ ಮಾತನಾಡಿ, ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳುವ ಜತೆಗೆ ಸೊಪ್ಪು, ತರಕಾರಿ, ಹಣ್ಣು, ರಾಗಿ ಮುದ್ದೆಯಂತಹ ಖನಿಜಯುಕ್ತ ಆಹಾರ ಸೇವಿಸುವುದರಿಂದ ಹಲ್ಲುಗಳ ರಕ್ಷಣೆ ಆಗುತ್ತದೆ ಎಂದರು.
ಮಕ್ಕಳಿಗೆ, ಪೌಷ್ಟಿಕ ಆಹಾರ ಸೇವನೆ, ರಕ್ತಹೀನತೆ ನಿಯಂತ್ರಣ, ದುಶ್ಚಟಗಳ ನಿಯಂತ್ರಣ, ವೈಯಕ್ತಿಕ ಸ್ವಚ್ಛತೆ, ಆರೋಗ್ಯ ಕಾಪಾಡಿಕೊಳ್ಳುವುದು, ಪ್ರತಿಯೊಬ್ಬರು ಪ್ರತ್ಯೇಕ ಬ್ರಷ್‌ನಲ್ಲಿ ಹಲ್ಲು ಉಜ್ಜುವ ಅಭ್ಯಾಸ ಇಟ್ಟುಕೊಳ್ಳಬೇಕು. ಯಾವುದೇ ಆಹಾರ ಪದಾರ್ಥ ಸೇವಿಸಿದ ಮೇಲೆ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು. ಹಲ್ಲು ಉಜ್ಜುವಾಗ ವಸಡಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದರು.ಈ ವೇಳೆ ಗ್ರಾಪಂ ಅಧ್ಯಕ್ಷೆ ದಿವ್ಯ ಗಿರೀಶ್, ಉಪಾಧ್ಯಕ್ಷ ನಂಜಪ್ಪ, ಸದಸ್ಯರಾದ ಆಶಾ ಸೋಮಶೇಖರ್, ರೂಪ, ತಾಲೂಕು ಅರೋಗ್ಯ ಅಧಿಕಾರಿ ಡಾ.ಅಜಿತ್, ಡಾ.ಪುಟ್ಟಸ್ವಾಮಿ, ಡಾ.ಜಯಚಂದ್ರ, ಡಾ.ಆನಂದ್, ಡಾ.ಮನೋಜ್, ಡಾ.ದಿವಾಕರ್ ಸೇರಿದಂತೆ ಆಶಾ ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.