ಸಾರಾಂಶ
ಹುಬ್ಬಳ್ಳಿ: ಭಾರತವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಕವಾಗಿ ಪ್ರಗತಿ ಸಾಧಿಸುತ್ತಿದೆ. ದೇಶದ ಪ್ರಗತಿಗೆ ಪ್ರತಿಯೊಬ್ಬರು ಕೊಡುಗೆ ನೀಡಬೇಕು ಎಂದು ಹುಬ್ಬಳ್ಳಿ ನಗರ ತಹಸೀಲ್ದಾರ್ ಕಲಗೌಡ ಪಾಟೀಲ ಹೇಳಿದರು.
ಇಲ್ಲಿನ ನೆಹರು ಮೈದಾನದಲ್ಲಿ ನಡೆದ 75ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ,ಗಾಂಧೀಜಿ ಮತ್ತು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಭಾರತವು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ, ಗಣತಂತ್ರವಾಗಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು.ಎಲ್ಲರಿಗೂ ಸಾಮಾಜಿಕ, ರಾಜಕೀಯ,ಮೂಲಭೂತ ಹಕ್ಕುಗಳು ನ್ಯಾಯ ಮತ್ತು ಸ್ವಾತಂತ್ರ‍್ಯವನ್ನು ಹೊಂದಿರುವ ಹಕ್ಕಿದೆ. ಸಂವಿಧಾನವು ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ಎಂಬ ಅಂಶಗಳನ್ನು ಒಳಗೊಂಡಿದೆ ಎಂದರು.
ಸರ್ಕಾರವೂ ಹಸಿವು ಮುಕ್ತ ರಾಜ್ಯವನ್ನಾಗಿಸಲು 5ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಇದರಿಂದ ಜನರಿಗೆ ಸಹಾಯವಾಗಿದೆ. ಬೆಳೆ ಹಾನಿಯಾದ ರೈತರ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗಿದೆ. ರೈತ ಮಕ್ಕಳಿಗೆ ಉಚಿತ ಶಿಕ್ಷಣ, ಹಾಸ್ಟೆಲ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.ಶಾಸಕ ಮಹೇಶ್ ಟೆಂಗಿನಕಾಯಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆ ಜಾರಿಗೆ ತಂದಿದ್ದಾರೆ. ಪ್ರತಿಯೊಂದು ಕುಟುಂಬವನ್ನು ಹಸಿವು ಮುಕ್ತವಾಗಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳ ಅಡಿಯಲ್ಲಿ ಲಕ್ಷಾಂತರ ಕುಟುಂಬಕ್ಕೆ ಆಹಾರ ಭದ್ರತೆ ಒದಗಿಸಿದ್ದಾರೆ. 80 ಕೋಟಿ ಜನರಿಗೆ 10 ಕೆಜಿ ಅಕ್ಕಿ ವಿತರಣೆ, 54 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಸಾಲದ ನೆರವು, ಪ್ರಧಾನಮಂತ್ರಿ ವಿಶ್ವ ಕರ್ಮ ಯೋಜನೆಯಡಿ ₹ 13 ಸಾವಿರ ಕೋಟಿ ಹಣ ಜನರಿಗೆ ನೀಡಲಾಗಿದೆ ಎಂದರು.
80 ಕೋಟಿ ಭಾರತೀಯರಿಗೆ ಆಹಾರ ಭದ್ರತೆ ಒದಗಿಸಲಾಗಿದೆ. ಬಿಪಿಎಲ್ ಕಾರ್ಡುದಾರರಿಗೆ ಉಜ್ವಲ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ವಿತರಣೆ ಮಾಡಲಾಗಿದೆ. 50 ಕೋಟಿ ಜನಧನ ಖಾತೆಯನ್ನು ಮಹಿಳೆಯರಿಗೆ ತೆರೆಯಲಾಗಿದೆ ಎಂದರು.ನಂತರ ವಿವಿಧ ದಳಗಳು ಆಕರ್ಷಕ ಪಥ ಸಂಚಲನ ನಡೆಸಿದವು. ವಿವಿಧ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆದವು. ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ ಪ್ರಕಾಶ ನಾಶಿ, ಹುಬ್ಬಳ್ಳಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರ ಹೊಸಮನಿ, ಪ್ರೊಬೇಷನರಿ ತಹಸೀಲ್ದಾರ್ ದೀಪಾ, ಅಕ್ಷತಾ, ಹುಬ್ಬಳ್ಳಿ ದಕ್ಷಿಣ ವಿಭಾಗದ ಎಸಿಪಿ ವಿಜಯಕುಮಾರ್. ಟಿ, ಉತ್ತರ ವಿಭಾಗದ ಎಸಿಪಿ ಬಿಲ್ಲಪ್ಪ, ತಹಸೀಲ್ದಾರ್ ಪಟೇಲ್, ಪೊಲೀಸ್ ಇನ್ಸ್‌ಫೆಕ್ಟರ್ ಎಂ.ಎಂ.ತಹಸೀಲ್ದಾರ, ಪೊಲೀಸ್ ಇಲಾಖೆ, ಗೃಹ ರಕ್ಷಕ ದಳ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.