ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ ನಗರದಲ್ಲಿ ನಡೆದ ತಾಲೂಕು ಮಟ್ಟದ ರೈತರ ಕುಂದುಕೊರತೆ ನಿವಾರಣಾ ಸಭೆಯಲ್ಲಿ ಚಾಮರಾಜನಗರ ತಾಲೂಕಿನ ರೈತರ ದೂರು, ಅಹವಾಲುಗಳನ್ನು ತಹಸೀಲ್ದಾರ್ ಬಸವರಾಜು ಆಲಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆಡಿಪಿ. ಸಭಾಂಗಣದಲ್ಲಿ ತಾಲೂಕಿನ ರೈತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಏರ್ಪಡಿಸಲಾಗಿದ್ದ ತಾಲೂಕುಮಟ್ಟದ ರೈತರ ಕುಂದುಕೊರತೆ ನಿವಾರಣಾ ಸಭೆಯ ಅಧ್ಯಕ್ಷತೆಯನ್ನು ತಹಸೀಲ್ದಾರ್ ಬಸವರಾಜು ವಹಿಸಿದ್ದರು. ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ತಹಸೀಲ್ದಾರ್ ಬಸವರಾಜು ರೈತರ ಕುಂದುಕೊರತೆ, ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ತಾಲೂಕು ಮಟ್ಟದಲ್ಲಿ ನಡೆಯುತ್ತಿರುವ ಪ್ರಪ್ರಥಮ ಸಭೆಯಾಗಿದೆ. ರೈತರ ದೂರು, ಸಮಸ್ಯೆಗಳನ್ನು ನೇರವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದ ಮುಂದೆ ತರುವ ಬದಲು ತಾಲೂಕು ಮಟ್ಟದಲ್ಲಿಯೇ ಪರಿಹಾರ ಕಂಡುಕೊಳ್ಳುವುದು ಸಭೆಯು ಉದ್ದೇಶವಾಗಿದೆ ಎಂದರು. ರೈತರೊಂದಿಗೆ ಸಮನ್ವಯ ಸಾಧಿಸಿ ಕಾಲಮಿತಿಯೊಳಗೆ ರೈತರ ಸಮಸ್ಯೆಗಳನ್ನು ಪರಿಹರಿಸಲು ಈ ಸಭೆ ಅಧಿಕೃತ ವೇದಿಕೆಯಾಗಲಿದೆ. ಇದರಿಂದ ರೈತರು ಹಾಗೂ ಅಧಿಕಾರಿಗಳ ಬಾಂಧವ್ಯ ವೃದ್ದಿಸಲಿದೆ. ನ್ಯಾಯ ದೊರಕಿಸುವ ಸದುದ್ದೇಶದಿಂದ ರೈತರಿಂದ ಸ್ವೀಕರಿಸುವ ಕುಂದುಕೊರತೆಗಳನ್ನು ಗಂಭೀರವಾಗಿ ಪರಿಗಣಿಸಿ, ಪಾರದರ್ಶಕವಾಗಿ ಸಮಸ್ಯೆ ಇತ್ಯರ್ಥಕ್ಕೆ ಶ್ರಮಿಸಲಾಗುವುದು ಎಂದು ತಹಸೀಲ್ದಾರ್ ಬಸವರಾಜು ತಿಳಿಸಿದರು. ಬಳಿಕ ರೈತರು ತಮ್ಮ ಅಹವಾಲುಗಳನ್ನು ಸಭೆಯಲ್ಲಿ ಮಂಡಿಸಿದರು. ತಾಲೂಕಿನ ಜನ್ನೂರು ಭಾಗದ ರೈತರೊಬ್ಬರು ಮಾತನಾಡಿ ಬರ ಪರಿಸ್ಥಿತಿಯಲ್ಲಿ ಜನರಿಗೆ ಕುಡಿಯುವ ನೀರು ತುಂಬಾ ಅಗತ್ಯವಾಗಿದ್ದು, ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ. ಕಾಡುಪ್ರಾಣಿಗಳ ಉಪಟಳ ಅತಿಯಾಗಿದೆ. ಪರಿಹಾರ ದೊರೆತಿಲ್ಲ. ಪಶುಗಳಿಗೆ ಮೇವಿನ ಕೊರತೆಯಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರರು ಸಭೆಯಲ್ಲಿ ಹಾಜರಿದ್ದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆ ನಿವಾರಣೆಗೆ ಕ್ರಮ ವಹಿಸುವಂತೆ ತಿಳಿಸಿದರು.ಗ್ರಾಮಗಳಲ್ಲಿನ ಸಣ್ಣ ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಹಾಲು ಮಾರಾಟದಲ್ಲಿ ರೈತರಿಗೆ ಪ್ರೋತ್ಸಾಹಧನ ನೀಡಬೇಕು. ಬ್ಯಾಂಕ್ ಲೇವಾದೇವಿದಾರರು, ಸಣ್ಣ ಹಣಕಾಸು ಸಂಸ್ಥೆಗಳಿಂದ ಜನರ ಸುಲಿಗೆ ನಡೆಯುತ್ತಿದೆ. ಸಂಚಾರಿ ಪಶು ಚಿಕಿತ್ಸಾ ವಾಹನಗಳ ಕಾರ್ಯಚರಣೆ ಚುರುಕುಗೊಳಿಸಬೇಕೆಂದ ರೈತ ಮುಖಂಡ ಭಾಗ್ಯರಾಜ್ ಅವರ ಸಮಸ್ಯೆ ಮುಂದಿಟ್ಟರು. ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸಲಾಗುವುದು ಎಂದರು ಅಲ್ಲದೆ ಹಾಲಿನ ಪ್ರೋತ್ಸಾಹಧನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.ಜಮೀನಿಗೆ ಹೋಗುವ ದಾರಿ ಒತ್ತುವರಿ ತೆರವುಗೊಳಿಸುವ ಸಂಬಂಧ ಕೇಳಿಬಂದ ಮನವಿಗೆ ಉತ್ತರಿಸಿದ ತಹಸೀಲ್ದಾರ ಈ ಸಂಬಂಧ ೮-೧೦ ದೂರುಗಳು ಪ್ರತಿದಿನ ದಾಖಲಾಗುತ್ತಿವೆ. ತಾಲೂಕು ಕಚೇರಿಯಲ್ಲಿ ಈ ವಿಚಾರಕ್ಕಾಗಿ ವಿಷಯ ನಿರ್ವಾಹಕರನ್ನು ನಿಯೋಜಿಸಲಾಗಿದೆ. ಈಗಾಗಲೇ ೪೦೦ಕ್ಕೂ ಹೆಚ್ಚು ಒತ್ತುವರಿ ಅರ್ಜಿಗಳನ್ನು ಪರಿಹರಿಸಲಾಗಿದೆ. ೧೮೦ ಅರ್ಜಿ ಬಾಕಿ ಇವೆ ಎಂದು ತಿಳಿಸಿದರು.ರೈತ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ ಬರ ಪರಿಸ್ಥಿತಿ ಎದುರಿಸಲು ರೈತರಿಗೆ ಮಳೆ ನೀರು ಕೊಯ್ಲು ತರಬೇತಿ ನೀಡಬೇಕು. ಹೆಚ್ಚಿನ ಕೃಷಿಹೊಂಡಗಳಿಗೆ ಸಹಾಯಧನ ನೀಡಬೇಕು. ನಾಟಿ ಹಸುಗಳ ಹಾಲಿನ ದರ ಹೆಚ್ಚಿಸಬೇಕು. ಪಶು ಅಸ್ಪತ್ರೆಗಳಲ್ಲಿ ಔಷಧಿಗಳ ದರಗಳ ಪಟ್ಟಿಯನ್ನು ಪ್ರದರ್ಶಿಸಬೇಕು. ಬ್ಯಾಂಕ್ ಅಧಿಕಾರಿಗಳು ರೈತರನ್ನು ಸೌಜನ್ಯದಿಂದ ನಡೆಸಿಕೊಳ್ಳಬೇಕು. ಬೆಳೆ ಸಮೀಕ್ಷೆ ಕಾರ್ಯ ಸಮರ್ಪಕವಾಗಿ ನಡೆಯಬೇಕು. ರೈತರ ಕುಂದುಕೊರತೆ ನಿವಾರಣಾ ಸಭೆ ಗ್ರಾಪಂ ಮಟ್ಟದಲ್ಲಿ ನಡೆಸಬೇಕು ಎಂದು ತಿಳಿಸಿದರು.ಬೆಳೆ ವಿಮೆ, ಜಮೀನುಗಳಿಗೆ ರಸ್ತೆ, ಮೇವು ಬ್ಯಾಂಕ್, ಜಾನುವಾರುಗಳಿಗೆ ಅನುಗುಣವಾಗಿ ಗೋಮಾಳ-ಗೋಶಾಲೆ, ಮದ್ಯವರ್ತಿಗಳ ಹಾವಳಿ, ರೈತರ ಜಮೀನುಗಳಲ್ಲಿ ನೀರಿನ ಮೋಟಾರ್, ಪಂಪ್‌ಸೆಟ್ ಕಳ್ಳತನ, ಕಾಡುಪ್ರಾಣಿಗಳ ಹಾವಳಿ, ಬೆಳೆಗಳಿಗೆ ಬೆಂಬಲಬೆಲೆ, ವಿದ್ಯುತ್ ಸಮಸ್ಯೆ, ಇನ್ನಿತರ ಕುಂದುಕೊರತೆಗಳು ಸಭೆಯಲ್ಲಿ ಮಂಡನೆಯಾದವು. ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.