ತಾಲೂಕಿನ ಉಲ್ಲೇಪುರ ಗ್ರಾಮದ ಧ್ರುವ ಪೌಲ್ಟ್ರಿ ಕೋಳಿ ಸಾಕಾಣಿಕೆ ಫಾರಂಗೆ ತಹಸೀಲ್ದಾರ್ ಚೈತ್ರ, ಪಶುಸಂಗೋಪನ ಇಲಾಖೆ ತಾಲೂಕು ವೈದ್ಯಾಧಿಕಾರಿ ಸಿದ್ದರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು
ಹನೂರು: ತಾಲೂಕಿನ ಉಲ್ಲೇಪುರ ಗ್ರಾಮದ ಧ್ರುವ ಪೌಲ್ಟ್ರಿ ಕೋಳಿ ಸಾಕಾಣಿಕೆ ಫಾರಂಗೆ ತಹಸೀಲ್ದಾರ್ ಚೈತ್ರ, ಪಶುಸಂಗೋಪನ ಇಲಾಖೆ ತಾಲೂಕು ವೈದ್ಯಾಧಿಕಾರಿ ಸಿದ್ದರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಧ್ರುವ ಪೌಲ್ಟ್ರಿ ಕೋಳಿ ಸಾಕಾಣಿಕೆ ಫಾರಂನಲ್ಲಿ ಬೆಂಗಳೂರಿನ ಉದ್ಯಮಿ 50,000 ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ಇದರಿಂದ ರಾಯರ ದೊಡ್ಡಿ, ಮುರಾರ್ಜಿ ದೇಸಾಯಿ ಶಾಲೆ ಸುತ್ತಮುತ್ತಲಿನ ಪ್ರದೇಶದಲ್ಲಿ ನೊಣಗಳ ಕಾಟ ಹೆಚ್ಚಾಗಿದೆ. ಈಗಾಗಲೇ ಪರಿಸರ ಮಾಲಿನ್ಯ ಇಲಾಖೆ, ಪಪಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ತಹಸೀಲ್ದಾರ್ ಚೈತ್ರ ಮಾತನಾಡಿ, ಧ್ರುವ ಪೌಲ್ಟ್ರಿ ಫಾರಂ ಮಾಲೀಕರಿಗೆ ದಾಖಲಾತಿ ಸಲ್ಲಿಸುವಂತೆ ಸೂಚಿಸಲಾಗಿದೆ. ದಾಖಲೆ ಪರಿಶೀಲಿಸಿ ಡಿಸಿಗೆ ವರದಿ ನೀಡಲಾಗುವುದು. ವೈದ್ಯಾಧಿಕಾರಿ ಸಿದ್ದರಾಜುಗೆ ಸೂಚನೆ ನೀಡಲಾಗಿದೆ ಎಂದರು.ವೈದ್ಯಾಧಿಕಾರಿ ಸಿದ್ದರಾಜು ಮಾತನಾಡಿ, ಪೌಲ್ಟ್ರಿ ಫಾರಂಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಲೀಕರಿಗೆ ದಾಖಲಾತಿಗಳನ್ನು ಸಲ್ಲಿಸುವಂತೆ ತಿಳಿಸಲಾಗಿತ್ತು. ಇದುವರೆಗೂ ಯಾವುದೇ ದಾಖಲಾತಿ ನೀಡಿಲ್ಲ. ಹೀಗಾಗಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮೋಘ ಮಾತನಾಡಿ, ಧ್ರುವ ಪೌಲ್ಟ್ರಿ ಫಾರಂನಿಂದ ನೊಣಗಳ ಕಾಟ ಹೆಚ್ಚಾಗಿದೆ. ಬೆಳೆಗಳು ಸಹ ಹಾನಿಯಾಗಿ ನಷ್ಟ ಉಂಟಾಗುತ್ತಿದೆ. ಕೋಳಿ ಸಾಕಾಣಿಕೆ ಕೇಂದ್ರವನ್ನು ಬೇರೆಡೆ ವರ್ಗಾವಣೆ ಮಾಡಬೇಕು ಎಂದರು.