ವಾರಕ್ಕೆರಡು ದಿನ ನಾಡ ಕಚೇರಿಯಲ್ಲೇ ತಹಸೀಲ್ದಾರ್‌ ಕಾರ್ಯ

| Published : Dec 22 2024, 01:33 AM IST

ಸಾರಾಂಶ

ಬಂಗಾರಪೇಟೆ ತಾಲೂಕಿನ ಕಂದಾಯ ಇಲಾಖೆಯ ಎಲ್ಲಾ ಸಿಬ್ಬಂದಿ ಪ್ರಾಮಾಣಿಕವಾಗಿ ಮತ್ತು ಶಿಸ್ತಿನಿಂದ ಕಾರ್ಯ ನಿರ್ವಹಿಸುತ್ತಿರುವ ಪರಿಣಾಮ ಲ್ಯಾಂಡ್ ಬೀಟ್ ಶೇ.100ರ ಪ್ರಗತಿ ಸಾಧಿಸಲು ಕಾರಣವಾಗಿದೆ. ಮುಂಗಾರು ಬೆಳೆ ಸಮೀಕ್ಷೆ ಶೇ. 100ರಷ್ಟು ಪೂರ್ಣಗೊಂಡಿದೆ. ಸಕಾಲದಲ್ಲಿ ಬೂದಿಕೋಟೆ ನಾಡಕಚೇರಿ ರಾಜ್ಯದಲ್ಲಿ 9ನೇ ಸ್ಥಾನವನ್ನು ಕಾಯ್ದುಕೊಂಡಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ದೂರದ ತಾಲೂಕು ಕಚೇರಿಗೆ ಬರುವುದನ್ನು ತಪ್ಪಿಸುವ ಸಲುವಾಗಿ ವಾರಕ್ಕೆ ಎರಡು ದಿನ ನಾಡ ಕಚೇರಿಗಳಲ್ಲೇ ಲಭ್ಯವಿದ್ದು, ಶೀಘ್ರವಾಗಿ ಅಹವಾಲುಗಳನ್ನು ಬಗೆಹರಿಸಲಾಗುತ್ತದೆ ಎಂದು ತಹಸೀಲ್ದಾರ್ ಎಸ್. ವೆಂಕಟೇಶಪ್ಪ ಹೇಳಿದರು.ತಾಲೂಕಿನ ಬೂದಿಕೋಟೆ ಗ್ರಾಮದ ನಾಡಕಚೇರಿಗೆ ಭೇಟಿ ಕಡತಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಕಂದಾಯ ಇಲಾಖೆಯ ಎಲ್ಲಾ ಸಿಬ್ಬಂದಿ ಪ್ರಾಮಾಣಿಕವಾಗಿ ಮತ್ತು ಶಿಸ್ತಿನಿಂದ ಕಾರ್ಯ ನಿರ್ವಹಿಸುತ್ತಿರುವ ಪರಿಣಾಮ ಲ್ಯಾಂಡ್ ಬೀಟ್ ಶೇ.100ರ ಪ್ರಗತಿ ಸಾಧಿಸಲು ಕಾರಣವಾಗಿದೆ. ಮುಂಗಾರು ಬೆಳೆ ಸಮೀಕ್ಷೆ ಶೇ. 100ರಷ್ಟು ಪೂರ್ಣಗೊಂಡಿದೆ ಎಂದರು.

ಪಹಣಿಗೆ ಆಧಾರ್‌ ಸೀಡಿಂಗ್‌

ಪಹಣಿಗೆ ಆಧಾರ್ ಸೀಡಿಂಗ್ ಸಹ ಶೇ. 92.32 ರಷ್ಟು ಮಾಡುವ ಮೂಲಕ ಜಿಲ್ಲೆಯಲ್ಲಿ ತಾಲೂಕನ್ನು 2ನೇ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ಸಕಾಲದಲ್ಲಿ ಬೂದಿಕೋಟೆ ನಾಡಕಚೇರಿ ರಾಜ್ಯದಲ್ಲಿ 9ನೇ ಸ್ಥಾನವನ್ನು ಕಾಯ್ದುಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.

ನಾಡಕಚೇರಿಗೆ ಭೇಟಿ

ಪ್ರತಿ ಬುಧವಾರ ಬೂದಿಕೋಟೆ ನಾಡಕಚೇರಿ ಮತ್ತು ಪ್ರತಿ ಶುಕ್ರವಾರ ಕಾಮಸಮುದ್ರ ನಾಡ ಕಚೇರಿಯಲ್ಲಿ ತಾವು ಲಭ್ಯವಿರುತ್ತೇನೆ. ಅಂದು ಎಲ್ಲಾ ಸಿಬ್ಬಂದಿ ಸಹ ಕಚೇರಿಯಲ್ಲಿ ಲಭ್ಯವಿದ್ದು, ಸಾರ್ವಜನಿಕರ ಅರ್ಜಿಗಳನ್ನು ಸಾಧ್ಯವಾದರೆ ಸ್ಥಳದಲ್ಲೇ ಬಗೆಹರಿಸಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ಕೆಲಸ ಕಾರ್ಯ ಬಿಟ್ಟು ತಾಲೂಕು ಕಚೇರಿಗೆ ಬಾರದೇ ಹತ್ತಿರದ ನಾಡಕಚೇರಿಗೆ ಬಂದು ತಮ್ಮ ಕುಂದುಕೊರತೆಗಳ ಕುರಿತು ಅರ್ಜಿಗಳನ್ನು ಸಲ್ಲಿಸಬಹುದು ಎಂದು ತಹಸೀಲ್ದಾರ್‌ ಹೇಳಿದರು.ಈ ವೇಳೆ ರಾಜಸ್ವ ನಿರೀಕ್ಷಕ ಪವನ್, ಗ್ರಾಮ ಆಡಳಿತ ಆಧಿಕಾರಿಗಳಾದ ವಿನೋದ್, ಸುರೇಶ್, ರವಿ, ಶರಣುಬಸಪ್ಪ, ಚೇತನ್ ಮುಂತಾದವರು ಹಾಜರಿದ್ದರು.