ಮಕ್ಕಳಿಗೆ ಮಣ್ಣು ಮತ್ತು ದನಕರುಗಳ ಮಹತ್ವದ ಬಗ್ಗೆ ತಿಳಿಸಿ: ಬಸವರಾಜ ಪಾಟೀಲ್

| Published : Jan 09 2025, 12:45 AM IST

ಮಕ್ಕಳಿಗೆ ಮಣ್ಣು ಮತ್ತು ದನಕರುಗಳ ಮಹತ್ವದ ಬಗ್ಗೆ ತಿಳಿಸಿ: ಬಸವರಾಜ ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಸ್ಥಿರ ಕೃಷಿ ಅನುಕರಣೆ, ಕೃಷಿ ಮಹತ್ವದ ಬಗ್ಗೆ ಯುವಜನರು ಹಾಗೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ 2047ರ ಹೊತ್ತಿಗೆ ರಸಗೊಬ್ಬರ ಮುಕ್ತ ಬೇಸಾಯ ಮಾಡಿ ನಮ್ಮ ನೆಲ, ಜಲ, ವಾಯು, ಅಗ್ನಿ ಹಾಗೂ ಪರಿಸರವನ್ನು ಸಂರಕ್ಷಣೆ ಮಾಡುವ ದಿಕ್ಕಿನತ್ತ ಹೆಜ್ಜೆ ಹಾಕಬೇಕಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಾವಯವ ಪದ್ದತಿಯಲ್ಲಿ ಬೇಸಾಯ ಮಾಡಿ ನಮ್ಮ ಮಕ್ಕಳಿಗೆ ಮಣ್ಣು ಮತ್ತು ದನಕರುಗಳ ಮಹತ್ವದ ಬಗ್ಗೆ ತಿಳಿಸಿಕೊಟ್ಟು ಮುಂದಿನ ತಲೆಮಾರನ್ನು ಸಂರಕ್ಷಿಸುವ ಕೆಲಸ ಮಾಡಬೇಕು ಎಂದು ದೇಶದ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಸಂಘಟನೆ ಅಧ್ಯಕ್ಷ ಮಾಜಿ ಶಾಸಕ ಬಸವರಾಜ ಪಾಟೀಲ್ ಹೇಳಿದರು.

ತಾಲೂಕಿನ ಬೂಕನಕೆರೆ ಹೋಬಳಿಯ ಪೂವನಹಳ್ಳಿಯಲ್ಲಿ ಪ್ರಗತಿಪರ ಚಿಂತಕ ಸುಪ್ರೀತ್ ಅವರು ಆಯೋಜಿಸಿದ್ದ ವಿಶ್ವ ಪರಂಪರೆಯ ಅನುಭವ ಮಂಟಪದ ಪರಂಪರೆ ಪರಿಸರ ಪಾಠಶಾಲೆ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ಕೃಷಿ ಚಟುವಟಿಕೆಗಳಿಂದ ದೂರವಾಗುತ್ತಿರುವ ಜನರನ್ನು ಮರಳಿ ಕೃಷಿಗೆ ಕರೆತರುವ ಜೊತೆಗೆ ದೇಶಿ ತಳಿಯ ಗೋವುಗಳ ಆಧಾರಿತ ಬೇಸಾಯ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದರು.

ಸ್ವಸ್ಥಿರ ಕೃಷಿ ಅನುಕರಣೆ, ಕೃಷಿ ಮಹತ್ವದ ಬಗ್ಗೆ ಯುವಜನರು ಹಾಗೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ 2047ರ ಹೊತ್ತಿಗೆ ರಸಗೊಬ್ಬರ ಮುಕ್ತ ಬೇಸಾಯ ಮಾಡಿ ನಮ್ಮ ನೆಲ, ಜಲ, ವಾಯು, ಅಗ್ನಿ ಹಾಗೂ ಪರಿಸರವನ್ನು ಸಂರಕ್ಷಣೆ ಮಾಡುವ ದಿಕ್ಕಿನತ್ತ ಹೆಜ್ಜೆ ಹಾಕಬೇಕಿದೆ ಎಂದು ತಿಳಿಸಿದರು.

ಫಲವತ್ತಾದ ಭೂಮಿಯನ್ನು ಬಂಜರು ಭೂಮಿಯನ್ನಾಗಿ ಮಾಡಿದ ಪರಿಣಾಮ ಇಂದು ನಾವು ತಿನ್ನುತ್ತಿರುವ ಆಹಾರ ಕಲುಷಿತವಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ರಸಗೊಬ್ಬರ ಹಾಗೂ ಕ್ರಿಮಿನಾಶಕಗಳ ಮುಕ್ತ ಬೇಸಾಯ ಅನುಸರಿಸದಿದ್ದರೆ ನಮಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಡಾ.ಶೋಭಾ ಮಾತನಾಡಿ, ಮಣ್ಣಿನಲ್ಲಿ ಹುಟ್ಟಿ ಮರಳಿ ಮಣ್ಣಿಗೆ ಹೋಗುವ ನಾವು ಹುಟ್ಟು ಸಾವಿನ ನಡುವೆ ನಮ್ಮ ಬದುಕು ಕಟ್ಟಿಕೊಂಡ ಭೂಮಿತಾಯಿ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಇದು ಅನ್ನದಾತ ರೈತರನ್ನು ನಿಕೃಷ್ಠವಾಗಿ ಕಾಣುತ್ತಿದ್ದು, ರೈತರ ಮಕ್ಕಳಿಗೆ ಹೆಣ್ಣು ಕೊಡದಂತಹ ಸ್ಥಿತಿ ನಿರ್ಮಾಣವಾಗಿದೆ. ಯುವ ಜನರಿಗೆ ಪರಿಸರ, ಮಣ್ಣಿನ ಬಗ್ಗೆ ಅರಿವು ಮೂಡಿಸಿ ಕೃಷಿ ಮಹತ್ವ ತಿಳಿಸಿದರೆ ಭವಿಷ್ಯದಲ್ಲಿ ರೈತರೂ ಕೂಡ ಸರ್ಕಾರಿ ನೌಕರರಂತೆ ನೆಮ್ಮದಿ ಜೀವನ ನಡೆಸಲಿದ್ದಾರೆ. ಕೃಷಿಯು ಲಾಭದಾಯಕ ಉದ್ಯಮವಾಗಿ ರೂಪುಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಲನಚಿತ್ರ ಹಾಗೂ ಕಿರುತೆರೆ ನಟಿ ಸುನೇತ್ರಾ ಪಂಡಿತ್ ಮಾತನಾಡಿ, ಇಂದು ನಮ್ಮನ್ನು ಹೆತ್ತುಹೊತ್ತು ಸಾಕಿದ ತಾಯಿ, ಅನ್ನ, ಹಾಲು ನೀಡಿದ ಭೂಮಿ ತಾಯಿ ಹಾಗೂ ಗೋಮಾತೆಯನ್ನು ನಾವು ಮರೆಯುತ್ತಿದ್ದೇವೆ. ಇವುಗಳ ಮಹತ್ವದ ಬಗ್ಗೆ ತಿಳಿಸಿಕೊಡಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಆರ್‌ಟಿಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಗಂಜಿಗೆರೆ ಗ್ರಾಪಂ ಅಧ್ಯಕ್ಷ ಪರಮೇಶ್ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಪ್ರಗತಿಪರ ಕೃಷಿಕರು, ಸಾವಯವ ಬೇಸಾಯ ರೈತರು, ಹಾಗೂ ಪ್ರಗತಿಪರ ಸಂಘಟನೆಗಳ ಮುಖ್ಯಸ್ಥರು ಭಾಗವಹಿಸಿದ್ದರು.