ಜನರಿಗೆ ಮೋದಿ,ಮಂಜುನಾಥ್ ರ ಸೇವೆಗಳನ್ನು ತಿಳಿಸಿ: ಅನುಸೂಯಾ

| Published : Apr 08 2024, 01:06 AM IST

ಸಾರಾಂಶ

ನನ್ನ ಪತಿ ಮಂಜುನಾಥ್ ರವರು ತಮ್ಮ ಸೇವಾ ಕ್ಷೇತ್ರದಲ್ಲಿ ಎಂದೂ ಬಿಡುವನ್ನು ತೆಗೆದುಕೊಳ್ಳದೇ ಬಡವ, ಶ್ರೀಮಂತ ಎಂಬ ಬೇಧವಿಲ್ಲದೇ ಕಷ್ಟ ಎಂದು ಬಂದವರ ಪ್ರಾಣ ಉಳಿಸಿದ್ದಾರೆ, ಅವರು ರಾಜಕೀಯ ಕುಟುಂಬದವರಾದರೂ ಈ ಕ್ಷೇತ್ರಕ್ಕೆ ಬರದೇ ತಮ್ಮ ವೃತ್ತಿ ಜೀವನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ನನಗೆ ಹೆಮ್ಮೆಯೆನಿಸುತ್ತದೆ.

ಕನ್ನಡಪ್ರಭ ವಾರ್ತೆ ಕನಕಪುರ

ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಎರಡೂ ಪಕ್ಷಗಳ ಕಾರ್ಯಕರ್ತರು ಅಣ್ಣ-ತಮ್ಮಂದಿರಂತೆ ತಮ್ಮ ತಮ್ಮ ಬೂತ್ ಗಳಲ್ಲಿ ಮತದಾರರ ಮನವೊಲಿಸಿ ಮತ ಹಾಕಿಸುವಂತೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಸಿ. ಎನ್. ಮಂಜುನಾಥ್ ರವರ ಧರ್ಮ ಪತ್ನಿ ಅನುಸೂಯ ಮನವಿ ಮಾಡಿದರು.

ಭಾನುವಾರ ತಮ್ಮ ಪತಿಯ ಪರ ಚುನಾವಣಾ ಪ್ರಚಾರ ನಡೆಸುವ ಬಗ್ಗೆ ಎರಡು ಪಕ್ಷದ ಮುಖಂಡರು,ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಲು ನಗರಕ್ಕೆ ಆಗಮಿಸಿದ ಅವರು, ತಾಲೂಕಿನ ಪ್ರಸಿದ್ಧ ಶ್ರೀ ದೇಗುಲಮಠಕ್ಕೆ ಭೇಟಿ ನೀಡಿ, ಪೂಜ್ಯ ಹಿರಿಯ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದು ನಂತರ ಬಿಜೆಪಿ ಪಕ್ಷದ ಕಚೇರಿಗೆ ಆಗಮಿಸಿ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿದರು.

ಬಳಿಕ ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಬಿ. ನಾಗರಾಜು ಮನೆಯಲ್ಲಿ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಈ ಕ್ಷೇತ್ರ ಇಡೀ ದೇಶದಲ್ಲೇ ಹೈ ವೋಲ್ಟೇಜ್ ಕ್ಷೇತ್ರ ಎಂದು ಬಿಂಬಿತವಾಗುತ್ತಿದ್ದು, ನಿಮ್ಮೆಲ್ಲರ ಅಭಿಮಾನ, ಬೆಂಬಲ, ಆಶಯ ಹಾಗೂ ಆತ್ಮಸ್ಥೈರ್ಯವನ್ನು ನೋಡಿದಾಗ ಅಂತಹ ವಾತವರಣ ನನಗೆ ಕಾಣುತ್ತಿಲ್ಲ. ಆದರೆ ನಮ್ಮ ಎದುರಾಳಿಗಳಿಗೆ ಭಯ ಹೆಚ್ಚಾಗಿ ಹೈ ವೋಲ್ಟೇಜ್ ಆಗಿದ್ದರೂ ಆಗಿರಬಹುದು ಎಂದರು.

ನನ್ನ ಪತಿ ಮಂಜುನಾಥ್ ರವರು ತಮ್ಮ ಸೇವಾ ಕ್ಷೇತ್ರದಲ್ಲಿ ಎಂದೂ ಬಿಡುವನ್ನು ತೆಗೆದುಕೊಳ್ಳದೇ ಬಡವ, ಶ್ರೀಮಂತ ಎಂಬ ಬೇಧವಿಲ್ಲದೇ ಕಷ್ಟ ಎಂದು ಬಂದವರ ಪ್ರಾಣ ಉಳಿಸಿದ್ದಾರೆ, ಅವರು ರಾಜಕೀಯ ಕುಟುಂಬದವರಾದರೂ ಈ ಕ್ಷೇತ್ರಕ್ಕೆ ಬರದೇ ತಮ್ಮ ವೃತ್ತಿ ಜೀವನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ನನಗೆ ಹೆಮ್ಮೆಯೆನಿಸುತ್ತದೆ. ಇಂದು ಅನಿವಾರ್ಯ ಹಾಗೂ ದೇಶದ ಜನರ ಆರೋಗ್ಯದ ಸುಧಾರಣೆಗಾಗಿ ಏನಾದರೂ ಮಾಡಬೇಕೆಂಬ ಹಂಬಲದಿಂದ ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಅಮಿತ್ ಶಾ ರವರ ಒತ್ತಾಸೆ, ಅಪ್ಪಾಜಿ ದೇವೇಗೌಡರು ಹಾಗೂ ಕುಮಾರ ಸ್ವಾಮಿಯವರ ಜನಸೇವೆಯ ತುಡಿತಕ್ಕೆ ಕೈಜೋಡಿಸಬೇಕೆಂಬ ಹಂಬಲದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಸಣ್ಣ -ಪುಟ್ಟ ಗೊಂದಲ, ಸಮಸ್ಯೆಗಳಿಗೆ ಆಸ್ಪದ ಕೊಡದೆ ತಮ್ಮ ತಮ್ಮ ಗ್ರಾಮಗಳ ಬೂತ್ ಗಳಲ್ಲಿ ಹೆಚ್ಚಾಗಿ ಮಹಿಳಾ ಮತದಾರರನ್ನು ಸೆಳೆದು ನರೇಂದ್ರ ಮೋದಿಯವರ ಯೋಜನೆಗಳು, ಡಾ.ಮಂಜುನಾಥ್ ರವರ ಸೇವೆಗಳ ಬಗ್ಗೆ ತಿಳಿಸಿ ಅವರಿಗೆ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಪ್ರೇರೇಪಿಸಬೇಕು ಎಂದರು.

ಕಾರ್ಯಕರ್ತರಿಗೆ, ಜನರಿಗೆ ಸ್ಪಂದಿಸಲು ನಮ್ಮ ಮನೆಯ ಬಾಗಿಲು ಸದಾ ತೆರೆದಿದ್ದು, ಮುಂದೆ ಈ ಕ್ಷೇತ್ರದ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳಲಿದ್ದೇನೆ, ಎರಡು ಪಕ್ಷಗಳ ಕಾರ್ಯಕರ್ತರ ಸಮಸ್ಯೆಗಳಿಗೆ ಪರಿಹಾರ ಕೊಡಿಸುತ್ತೇನೆ ಎಂದು ಹೇಳುವ ಮೂಲಕ ಕಾರ್ಯಕರ್ತರಲ್ಲಿ ವಿಶ್ವಾಸ ತುಂಬಿದರು.