ಮಹನೀಯರ ಬದುಕಿನ ರೋಚಕ ಘಟನೆ ಮಕ್ಕಳಿಗೆ ತಿಳಿಸಿ

| Published : Dec 15 2023, 01:31 AM IST

ಸಾರಾಂಶ

ಮಕ್ಕಳ ಮೇಲೆ ಒತ್ತಡ ಹೇರುವ ಬದಲು ಪ್ರೀತಿ, ವಿಶ್ವಾಸದಿಂದ ವಿಷಯ ತಿಳಿಸಿಕೊಡುವ ಕೆಲಸ ಶಿಕ್ಷಕರು ಮಾಡಬೇಕು. ಪ್ರತಿಭಾವಂತ ಹಾಗೂ ನಿಧಾನಗತಿಯ ವಿದ್ಯಾರ್ಥಿಗಳಿಗೆ ಅವರವರ ಮಾನಸಿಕ ಮಟ್ಟಕ್ಕನುಗುಣವಾಗಿ ಬೋಧನಾ ವಿಧಾನ ಬಳಸಿ ವಿಷಯಾಂಕ ಹೇಳಿಕೊಡಬೇಕು.

ಮುಂಡಗೋಡ:

ಸ್ವಾಮಿ ವಿವೇಕಾನಂದ, ರಾಜಾರಾಮ್ ಮೋಹನರಾಯ್ ಹಾಗೂ ಡಾ. ಬಿ.ಆರ್‌. ಅಂಬೇಡ್ಕರ್‌ ಬದುಕಿನ ರೋಚಕ ಘಟನೆಗಳನ್ನು ಮಕ್ಕಳಿಗೆ ಪರಿಚಯಿಸುವ ಕೆಲಸ ಶಿಕ್ಷಕರು ಮಾಡಬೇಕು ಎಂದು ಪ್ರಾಂಶುಪಾಲ ಮಂಜುನಾಥ ಮರಿತಮ್ಮನವರ ಹೇಳಿದರು.

ಪಟ್ಟಣದ ಹೊರವಲಯ ಕರಗಿನಕೊಪ್ಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಪ್ರೌಢಶಾಲಾ ಸಮಾಜ ವಿಜ್ಞಾನ ಶಿಕ್ಷಕರ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಠ್ಯ ಭಾಗದಲ್ಲಿನ ಪ್ರಮುಖ ಪರಿಕಲ್ಪನೆಗಳನ್ನು ಸ್ಪಷ್ಟವಾಗಿ ಅರ್ಥೈಸಿ ಹೇಳಿ ಮಕ್ಕಳು ಉತ್ತಮ ಫಲಿತಾಂಶ ಪಡೆಯಲು ಶಿಕ್ಷಕರು ನೆರವು ನೀಡಬೇಕು. ಐತಿಹಾಸಿಕ ವಿಷಯಗಳನ್ನು ಕಾಲ, ಸ್ಥಳ, ಪ್ರದೇಶಗಳಿಗೆ ಅನುಗುಣವಾಗಿ ವಿಭಾಗಿಸಿ ಸಮೀಕರಿಸುವ ಮೂಲಕ ಬೋಧಿಸಬೇಕು ಎಂದರು.

ಕಾರ್ಯಾಗಾರ ಉದ್ಘಾಟಿಸಿದ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯಾಧಿಕಾರಿ ಜಿ.ಎನ್. ನಾಯ್ಕ, ಮಕ್ಕಳ ಮೇಲೆ ಒತ್ತಡ ಹೇರುವ ಬದಲು ಪ್ರೀತಿ, ವಿಶ್ವಾಸದಿಂದ ವಿಷಯ ತಿಳಿಸಿಕೊಡುವ ಕೆಲಸ ಶಿಕ್ಷಕರು ಮಾಡಬೇಕು. ಪ್ರತಿಭಾವಂತ ಹಾಗೂ ನಿಧಾನಗತಿಯ ವಿದ್ಯಾರ್ಥಿಗಳಿಗೆ ಅವರವರ ಮಾನಸಿಕ ಮಟ್ಟಕ್ಕನುಗುಣವಾಗಿ ಬೋಧನಾ ವಿಧಾನ ಬಳಸಿ ವಿಷಯಾಂಕ ಹೇಳಿಕೊಡಬೇಕು. ಆ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪರಿಣಾತ್ಮಕ ಹಾಗೂ ಗುಣಾತ್ಮಕ ಫಲಿತಾಂಶ ಪಡೆಯಬಹುದು ಎಂದು ಅಭಿಪ್ರಾಯಪಟ್ಟರು.

ಪ್ರಾಂಶುಪಾಲ ನಾಗರಾಜ ಬಿನ್ನಾಳ, ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ನಾಗರಾಜ ನಾಯ್ಕ, ಸಮಾಜ ವಿಜ್ಞಾನ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಗೀತಾ ದೇವಳ್ಳಿ ಹಾಗೂ ತಾಲೂಕಿನ ಎಲ್ಲ ಪ್ರೌಢಶಾಲೆ ಸಮಾಜ ವಿಜ್ಞಾನ ಶಿಕ್ಷಕರು ಉಪಸ್ಥಿತರಿದ್ದರು. ಪ್ರಶಾಂತ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿನಿ ಶಿಲ್ಪಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಗೌಸ್ ಮುಜಮ್ಮಲ್ ನಿರೂಪಿಸಿದರು. ದೈಹಿಕ ಶಿಕ್ಷಕ ಅರುಣಕುಮಾರ ವಂದಿಸಿದರು.