ಸಾರಾಂಶ
ಪೋಷಕರು ಪರ ಭಾಷಾ ವ್ಯಾಮೋಹ ಬಿಟ್ಟು ಮಕ್ಕಳಿಗೆ ಚಿಕ್ಕಂದಿನಿಂದಲೇ ಕನ್ನಡದಲ್ಲಿ ಮಾತನಾಡುವುದನ್ನು ಕಲಿಸಿಕೊಡುವಂತೆ ಆಕಾಶವಾಣಿ ಕಲಾವಿದ ಹಾಗ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿಕ್ಕಮರೀಗೌಡ ತಿಳಿಸಿದರು.
ಕನಕಪುರ: ಪೋಷಕರು ಪರ ಭಾಷಾ ವ್ಯಾಮೋಹ ಬಿಟ್ಟು ಮಕ್ಕಳಿಗೆ ಚಿಕ್ಕಂದಿನಿಂದಲೇ ಕನ್ನಡದಲ್ಲಿ ಮಾತನಾಡುವುದನ್ನು ಕಲಿಸಿಕೊಡುವಂತೆ ಆಕಾಶವಾಣಿ ಕಲಾವಿದ ಹಾಗ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿಕ್ಕಮರೀಗೌಡ ತಿಳಿಸಿದರು.
ನಗರದ ರೋಟರಿ ಭವನದಲ್ಲಿ ಕಿಡ್ಸ್ ಕ್ಯೂಬ್ ಇಂಟರ್ ನ್ಯಾಷನಲ್ ಫ್ರೀ ಸ್ಕೂಲ್ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ಕನ್ನಡ ಭಾಷೆಯ ಹಿರಿಮೆಯನ್ನು ಹೆಚ್ಚಿಸಿದೆ. ಪೋಷಕರು ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ತೋರದೆ, ಮಮ್ಮಿ ಡ್ಯಾಡಿ ಸಂಸ್ಕೃತಿಯನ್ನ ಬಿಟ್ಟು ಅಪ್ಪ-ಅಮ್ಮ ಎಂದು ಕಲಿಸಿಕೊಟ್ಟಾಗ ಮಾತ್ರ ಕನ್ನಡ ಭಾಷೆ ಉಳಿದು ಬೆಳೆಯಲು ಸಾಧ್ಯ ಎಂದು ಹೇಳಿದರು.
ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ಇಂದು ಸಮಾಜದಲ್ಲಿ ಆಂಗ್ಲ
ಭಾಷೆಯ ವ್ಯಾಮೋಹ ಹೆಚ್ಚಾಗುತ್ತಿದ್ದು, ಕನ್ನಡ ಭಾಷೆ ನಮ್ಮ ನೆಲದಲ್ಲೇ ಕಡೆಗಣಿಸುತ್ತಿರುವುದು ನಮ್ಮ ದುರಂತ. ಅನ್ಯ ಭಾಷೆಯನ್ನು ಪ್ರೀತಿಸಿ ಗೌರವಿಸೋಣ, ಕನ್ನಡ ಭಾಷೆ ಬಳಸಿ ಉಳಿಸಲು ಮುಂದಾಗುವಂತೆ ತಿಳಿಸಿದರು.
ರಾಜ್ಯ ಸರ್ಕಾರ ಖಾಸಗಿ ಉದ್ಯೋಗ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಲು ಮೀನಮೇಷ ಎಣಿಸುತ್ತಿರುವುದು ಹಾಗೂ ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರಲು ಹೊರಟಿರುವುದನ್ನ ಕನ್ನಡ ಜನತೆ ಒಕ್ಕೊರಲಿನಿಂದ ಖಂಡಿಸಬೇಕು ಎಂದು ಆಗ್ರಹಿಸಿದರು.
ಬಹುಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ನೀಲಿ ರಮೇಶ್ ಮಾತನಾಡಿ, ಇಂದಿನ ಮಕ್ಕಳು ಮೊಬೈಲ್‌ನಲ್ಲೇ ಹೆಚ್ಚು ಕಾಲ ಕಳೆಯುತ್ತಾರೆ. ಇದರಿಂದ ಅವರ ಆರೋಗ್ಯದ ದುಷ್ಪರಿಣಾಮ ಬೀರುತ್ತದೆ. ಪೋಷಕರು ಮನೆಯಲ್ಲಿ ಮಕ್ಕಳಿಗೆ ಕನ್ನಡ ಸಾಹಿತ್ಯ, ಭಾಷೆ, ಮಹನೀಯರ ಜೀವನ ಚರಿತ್ರೆ ತಿಳಿಸಿಕೊಡಬೇಕು. ಅವರಲ್ಲಿ ಕನ್ನಡ ಭಾಷೆ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು.
ಶಿಕ್ಷಕರು ಹಾಗೂ ಪುಟಾಣಿ ಮಕ್ಕಳು ನಡೆಸಿಕೊಟ್ಟ ಕನ್ನಡ ಭಾಷೆ ಹಿರಿಮೆ ಸಾರುವ ನೃತ್ಯ ಗಾಯನ ಹಾಗೂ ಪುಟಾಣಿ ಮಕ್ಕಳು ತಯಾರಿಸಿದ್ದ ನಾಡು-ನುಡಿ ಸಾರುವ ವಸ್ತು ಪ್ರದರ್ಶನ ಗಮನ ಸೆಳೆಯಿತು. ಶಿಕ್ಷಣ ಇಲಾಖೆ ಇಸಿಒ ರುದ್ರಮುನಿ, ಶಿಕ್ಷಕ ಮಹದೇವ್ ರಾವ್, ಮಲೈ ಮಹದೇಶ್ವರ ಶಿಕ್ಷಣ ಟ್ರಸ್ಟ್ ಅಧ್ಯಕ್ಷೆ ರತ್ನಮ್ಮ, ಪ್ರಾಂಶುಪಾಲ ಗಿರೀಶ್, ಶಾಲಾ ವ್ಯವಸ್ಥಾಪಕಿ ಮೇಘ ಸೇರಿದಂತೆ ಶಿಕ್ಷಕರು, ಪೋಷಕರು, ಮಕ್ಕಳು ಭಾಗವಹಿಸಿದ್ದರು.