ಸಾರಾಂಶ
ಪರಿಸರ ಸಂರಕ್ಷಣೆ ಜೊತೆಗೆ ಹಸಿರೇ ಉಸಿರು ಎಂಬ ವ್ಯಾಖ್ಯಾನ ಮುಂದಿನ ಪೀಳಿಗೆಗೆ ಅರ್ಥಗರ್ಭಿತವಾಗಿ ತಿಳಿಸುವ ಕೆಲಸವನ್ನು ಯುವ ಸಮುದಾಯ ಜವಾಬ್ದಾರಿಯಿಂದ ನಡೆಸಬೇಕು ಎಂದು ತಹಸೀಲ್ದಾರ್ ಬಿ.ಆರತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಪರಿಸರ ಸಂರಕ್ಷಣೆ ಜೊತೆಗೆ ಹಸಿರೇ ಉಸಿರು ಎಂಬ ವ್ಯಾಖ್ಯಾನ ಮುಂದಿನ ಪೀಳಿಗೆಗೆ ಅರ್ಥಗರ್ಭಿತವಾಗಿ ತಿಳಿಸುವ ಕೆಲಸವನ್ನು ಯುವ ಸಮುದಾಯ ಜವಾಬ್ದಾರಿಯಿಂದ ನಡೆಸಬೇಕು ಎಂದು ತಹಸೀಲ್ದಾರ್ ಬಿ.ಆರತಿ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು. ಈಗಾಗಲೇ ಜಾಗತೀಕರಣಕ್ಕೆ ತಕ್ಕಂತೆ ಕಲುಷಿತ ವಾತಾವರಣ ಎಲ್ಲೆಡೆ ಹರಡಿದೆ. ನೀರು ಗಾಳಿ ಸೇರಿದಂತೆ ಆಹಾರ ವಸ್ತುಗಳು ಸಹ ಕಲಬೆರಕೆ ಆಗಿದೆ. ಈ ನಿಟ್ಟಿನಲ್ಲಿ ಸ್ವಚ್ಛ ವಾತಾವರಣ, ಸ್ವಚ್ಛ ಗಾಳಿ, ನೀರು, ಆಹಾರ ಮುಂದಿನ ಜನರಿಗೆ ಉಳಿಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಜಾಗತಿಕ ಉಷ್ಣಾಂಶ ಕನಿಷ್ಠ ಮಟ್ಟಕ್ಕೆ ಏರಿ ಈಗಾಗಲೇ ಬಿಸಿಲಿನ ಝಳ ಅನುಭವಿಸಿದ್ದೇವೆ. ಈ ಬಾರಿ ಬೇಸಿಗೆ ಸಾಕಷ್ಟು ಅನುಭವ ನೀಡಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವ್ಯಕ್ತಿ ಮೂರು ಸಸಿ ನೆಟ್ಟು ಪೋಷಿಸುವ ಕೆಲಸ ಜವಾಬ್ದಾರಿಯಿಂದ ಮಾಡಬೇಕಿದೆ. ಸರ್ಕಾರ ಕೂಡ ಅರಣ್ಯ ಇಲಾಖೆ ಮೂಲಕ ಕೋಟ್ಯಂತರ ಸಸಿ ನೆಡುವ ಕಾರ್ಯಕ್ರಮ ಮಾಡಿದೆ. ಆದರೆ ಸಸಿಗಳನ್ನು ಪೋಷಿಸುವ ಕೆಲಸಕ್ಕೆ ಅರಣ್ಯ ಇಲಾಖೆ ಜೊತೆ ಸಮುದಾಯ ಸಹಕಾರ ನೀಡಬೇಕು ಎಂದು ತಿಳಿಸಿದರು.ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ ಮಾತನಾಡಿ, ದಿನ ಕಳೆದಂತೆ ಅರಣ್ಯ ಸಂಪತ್ತು ಕ್ಷೀಣಿಸಿದೆ. ಶೇಕಡ 33 ರಷ್ಟು ಇರಬೇಕಾದ ಅರಣ್ಯ ಶೇಕಡ 18ಕ್ಕೆ ಇಳಿದಿದೆ. ಈ ಸಂಪತ್ತು ಉಳಿಸುವ ನಿಟ್ಟಿನಲ್ಲಿ ಇಲಾಖೆ ಪ್ರತಿ ವರ್ಷ ವಿವಿಧ ಸಸಿಗಳು ಬೆಳೆಸಿ ಸರ್ಕಾರಿ ಸ್ಥಳದಲ್ಲಿ ನೆಡಲಾಗುತ್ತಿದೆ. ಈ ಪೈಕಿ ಸಾಂಪ್ರದಾಯಿಕ ಸಸಿಗಳು, ಹಣ್ಣಿನ ಗಿಡಗಳಿಗೆ ಒತ್ತು ನೀಡಲಾಗಿದೆ ಎಂದರು.
ವಿವಿಧ ಜಾತಿಯ ಸಸಿಗಳನ್ನು ಉದ್ಯಾನದಲ್ಲಿ ನೆಡಲಾಯಿತು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಮೇಘನಾ, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಇಂದ್ರೇಶ್, ಉಪ ವಲಯ ಅರಣ್ಯಾಧಿಕಾರಿಗಳಾದ ಸಿದ್ದಲಿಂಗಮೂರ್ತಿ, ದರ್ಶನ್, ಶಿವಪ್ರಸಾದ್, ತಿಮ್ಮರಾಜು, ಜಮೀರ್, ಗಸ್ತು ಅರಣ್ಯ ಪಾಲಕ ಮುನಿಯೋಜಿರಾವ್, ಸಿಬ್ಬಂದಿ ರಘು, ಕಾವ್ಯ, ಶಂಕರ್, ಸಂತೋಷ್ ಇದ್ದರು.