ಸಾರಾಂಶ
ಹಿರೇಕೆರೂರ: ಸಾಂಪ್ರದಾಯಿಕ ದಿನವು ನಮ್ಮ ಪ್ರಾಚೀನ ಸಂಸ್ಕೃತಿಗೆ ಸಲ್ಲಿಸುವ ಗೌರವವಾಗಿದೆ ಹಾಗೂ ಎಲ್ಲ ಸಮೂದಾಯಗಳಲ್ಲಿ ಏಕತೆಯ ಭಾವವನ್ನು ಬೆಳೆಸಿ ಸರ್ವರಲ್ಲಿಯೂ ಆಕರ್ಷಣೆ ಮೂಡಿಸುವ ಒಂದು ಮಹತ್ವದ ಆಚರಣೆಯ ದಿನವಾಗಿದೆ ಎಂದು ಸಿಇಎಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ಹೇಳಿದರು.ಪಟ್ಟಣದ ಸಿಇಎಸ್ ವಿದ್ಯಾಸಂಸ್ಥೆಯ ಬಿ.ಆರ್. ತಂಬಾಕದ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಾಂಪ್ರದಾಯಿಕ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಈ ದಿನವನ್ನು ಕೇವಲ ಉಡುಗೆ ತೊಡುಗೆಗಳ ಸೌಂದರ್ಯದ ದಿನವಾಗಿ ಆರಾಧಿಸದೆ ನಮ್ಮ ಪ್ರಾಚೀನ ಸಂಸ್ಕೃತಿಯ ಬೇರುಗಳನ್ನು ಸಂರಕ್ಷಿಸುವಂತಹ ದಿನವಾಗಿ ಆಚರಿಸುವುದು ನಿಮ್ಮೆಲ್ಲರ ಕರ್ತವ್ಯವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ನಾವು ವಾಸಿಸುವ ಪ್ರಪಂಚದ ಸಾಂಸ್ಕೃತಿಕ ವೈವಿಧ್ಯಮಯ ಸೂಕ್ಷ್ಮ ದರ್ಶಕಗಳನ್ನು ಅರ್ಥ ಮಾಡಿಕೊಂಡು ಪ್ರತಿಯೊಬ್ಬರು ತಮ್ಮ ದೇಶಿಯತೆಯನ್ನು ಅಪ್ಪಿ ಒಪ್ಪಿಕೊಂಡು ದೇಶಿಯ ಧಿರಿಸುಗಳನ್ನು ಧರಿಸಿ ಸಂಭ್ರಮಿಸಿ ಆ ಮೂಲಕ ಮುಂದಿನ ತಲೆ ಮಾರಿಗೆ ನಮ್ಮ ಪ್ರಾಚೀನ ಬೇರುಗಳನ್ನು ಕೊಂಡೊಯ್ಯುವಂತಹ ಕೆಲಸವಾಗಬೇಕಿದೆ. ಆ ನಿಟ್ಟಿನಲ್ಲಿ ಇಂದು ವಿದ್ಯಾರ್ಥಿಗಳೆಲ್ಲರೂ ತಮ್ಮ ತಂದೆ, ತಾಯಿ, ಗುರು ಹಿರಿಯರಿಗೆ ವಿಧೇಯತೆ ವಿನಮ್ರತೆಯಿಂದ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿ ಮಾನವ ಮಾನವರಲ್ಲಿ ನೂತನ ಸಂಬಂಧಗಳನ್ನು ಬೆಸೆದು ಅದನ್ನು ಗಟ್ಟಿಗೊಳಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವಂತಹ ಪವಿತ್ರ ದಿನವಾಗಿ ಆಚರಿಸಬೇಕಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಅಲಂಕರಿಸಿ ಮಾತನಾಡಿದ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎಸ್.ಬಿ. ತಿಪ್ಪಣ್ಣನವರ ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ನೆನಪಿನಲ್ಲಿಟ್ಟುಕೊಂಡು ಸಾವಿರಾರು ವರ್ಷಗಳ ಭವ್ಯ ಇತಿಹಾಸ ಹೊಂದಿದ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಹ ಜವಾಬ್ದಾರಿ ನಿಮ್ಮ ಮೇಲಿದೆ. ಇಂತಹ ಸಾಂಪ್ರದಾಯಿಕ ದಿನಗಳಲ್ಲಿ ನಮ್ಮ ಪ್ರಾಚೀನ ಉತ್ಸವಗಳು, ಹಾಡುಗಾರಿಕೆ, ನೃತ್ಯ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅತ್ಯಾಕರ್ಷಕವಾಗಿ ಸಂಭ್ರಮಿಸುವುದರೊಂದಿಗೆ ತಮ್ಮ ಸುಂದರ ನೆನಪುಗಳನ್ನು ಸೆರೆಹಿಡಿಯುವ ಭವ್ಯ ದಿನವನ್ನಾಗಿಸಬೇಕಾಗಿದೆ ಎಂದರು. ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಸ್. ವೀರಭದ್ರಯ್ಯ, ಪ್ರಾಚಾರ್ಯ ಡಾ. ಎಸ್.ಬಿ. ಚನ್ನಗೌಡ್ರ ಉಪನ್ಯಾಸಕರಾದ ಸಿ.ಆರ್. ದೂದೀಹಳ್ಳಿ, ಪ್ರಿಯಾ ಇಂಡಿ, ನಾಗರಾಜ ಎಚ್.ಪಿ., ಕಿರಣ ಬಾಗಲರ, ಕವಿತಾ ಅಣಜಿ, ಪ್ರಶಾಂತ ಎಂ., ಅಶೋಕ ಬಡಿಗೇರ, ಲಿಂಗರಾಜ ಹಲವಾಲ, ಸಾವಿತ್ರಮ್ಮ ಬಿ., ಸಂತೋಷ ಬಣಕಾರ, ಸೌಮ್ಯ, ಅಂಬಿಕಾ, ಪೂಜಾ, ನಂದಿತಾ, ಸುನಿತಾ, ಶೃಂಗಾ ಸೇರಿದಂತೆ ವಿದ್ಯಾರ್ಥಿಗಳಿದ್ದರು.