ಅರಣ್ಯ ಇಲಾಖೆ ಸಿಬ್ಬಂದಿಗೆ ದಿಗ್ಬಂಧನ ಹಾಕಿ ರೈತರ ಪ್ರತಿಭಟನೆ

| Published : May 18 2025, 01:25 AM IST

ಅರಣ್ಯ ಇಲಾಖೆ ಸಿಬ್ಬಂದಿಗೆ ದಿಗ್ಬಂಧನ ಹಾಕಿ ರೈತರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾನವ-ಕಾಡು ಪ್ರಾಣಿಗಳ ಸಂಘರ್ಷಕ್ಕೆ ಅರಣ್ಯ ಇಲಾಖೆ ಕೂಡಲೇ ಪರಿಹಾರ ನೀಡಬೇಕು. ಕಾಡಾನೆ ಹಾವಳಿ ತಡೆಗೆ ಕ್ರಮವಹಿಸಬೇಕು

ಕನ್ನಡಪ್ರಭ ವಾರ್ತೆ ಸರಗೂರು ತಾಲೂಕಿನ ತೆಲುಗುಮಸಹಳ್ಳಿ ಗ್ರಾಮದಲ್ಲಿ ಶನಿವಾರ ಕಾಡಾನೆ ಹಾವಳಿ ತಡೆಯುವಲ್ಲಿ ವಿಫಲವಾದ ಮೊಳೆಯೂರು ಅರಣ್ಯ ವಲಯದ ಇಲಾಖೆ ಸಿಬ್ಬಂದಿಗೆ ದಿಗ್ಬಂಧನ ವಿಧಿಸಿ, ಸ್ಥಳಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡುವವರೆಗೂ ಬಂಧನದಿಂದ ಬಿಡುಗಡೆಗೊಳಿಸುವುದಿಲ್ಲ ಎಂದು ಆಗ್ರಹಿಸಿ ರೈತರು ಪ್ರತಿಭಟಿಸಿದರು. ಮಾನವ-ಕಾಡು ಪ್ರಾಣಿಗಳ ಸಂಘರ್ಷಕ್ಕೆ ಅರಣ್ಯ ಇಲಾಖೆ ಕೂಡಲೇ ಪರಿಹಾರ ನೀಡಬೇಕು. ಕಾಡಾನೆ ಹಾವಳಿ ತಡೆಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿ ರೈತರು ಮೊಳೆಯೂರು ಅರಣ್ಯ ವಲಯದ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿಭಟನಾ ವೇಳೆ ಅರಣ್ಯ ಇಲಾಖಾಧಿಕಾರಿಗಳು 15 ದಿನದೊಳಗೆ ರೈತರ ಸಭೆ ಕರೆದು ಸಮಸ್ಯೆಗಳನ್ನು ಚರ್ಚಿಸಿ, ಇತ್ಯರ್ಥಪಡಿಸುವುದಾಗಿ ನೀಡಿದ ಭರವಸೆ ಈಡೇರಿಸಿಲ್ಲ. ಕಾಡಾನೆಗಳು ನಿರಂತರವಾಗಿ ರೈತರ ಬೆಳೆಗಳನ್ನು ಹಾವಳಿ ಮಾಡುತ್ತಿದ್ದರೂ ತಡೆಯುವಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಅರಣ್ಯ ಇಲಾಖೆ ವಿರುದ್ಧ ವಿವಿಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ತೆಲುಗುಮಸಹಳ್ಳಿ ಗ್ರಾಮದ ಕೂಸಪ್ಪ ಎಂಬುವರ ಸರ್ವೇ ನಂ.1-7 ರ 6 ಎಕರೆ ಜಮೀನಿನ ಪೈಕಿ ಎರಡು ಎಕರೆ ಬಾಳೆ ತೋಟಕ್ಕೆ ನುಗ್ಗಿದ ಕಾಡಾನೆಗಳು ಹಾನಿ ಮಾಡಿದಲ್ಲದೆ, ಲಕ್ಷಾಂತರ ರು. ಖರ್ಚು ಮಾಡಿ ಅಳವಡಿಸಿದ್ದ ಬೋರ್ ಪೈಪ್‌ಗಳು, ಹೆಡ್ ವಾಲ್, ಸೋಲಾರ್ ಬೇಲಿ ಹಾಗೂ ಶೆಡ್ ನ್ನು ಕಿತ್ತೆಸೆದು ತುಂಬಾ ಹಾನಿ ಮಾಡಿವೆ. ಇದರಿಂದಾಗಿ ಲಕ್ಷಾಂತರ ರು. ನಷ್ಟವಾಗಿದೆ. ಈ ಕುರಿತು ವಿಷಯ ತಿಳಿಸಲು ಇಲಾಖೆಯ ಆರ್‌ಎಫ್‌ಓ, ಎಸಿಎಫ್, ಸಿಸಿಎಫ್ ಅಧಿಕಾರಿಗಳಿಗೆ ಪೋನ್ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ, ಇಂಥ ಬೇಜವಾಬ್ದಾರಿಗಳು ಸ್ಥಳಕ್ಕೆ ಆಗಮಿಸಿ, ರೈತರ ಸಮಸ್ಯೆಗಳನ್ನು ಆಲಿಸುವವರೆಗೂ ಇಲಾಖಾ ಸಿಬ್ಬಂದಿಗಳು, ವಾಹನಗಳನ್ನು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕೆ.ಎಂ. ವೀರಭದ್ರಪ್ಪ ಮಾತನಾಡಿ, ಕಾಡುಪ್ರಾಣಿಗಳ ಹಾವಳಿ ತಡೆಗೆ ಅಧಿಕಾರಿಗಳು ಶಾಶ್ವತ ಪರಿಹಾರ ನೀಡಬೇಕು. ಇಲಾಖೆ ಸಿಬ್ಬಂದಿಗಳನ್ನು ದಿಗ್ಬಂಧನಗೊಳಿಸಿದ್ದರೂ ಹಿರಿಯ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಾದರೆ ಅರಣ್ಯ ಸಂಪತ್ತನ್ನು ಹೇಗೆ ರಕ್ಷಣೆ ಮಾಡುತ್ತಾರೆ. ರೈತರ ಸಮಸ್ಯೆಗಳನ್ನು ಆಲಿಸುತ್ತಾರ ಇಂಥ ಅಧಿಕಾರಿಗಳನ್ನು ಬೇರೆಡೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.ಬಸವ ಬಳಗದ ತಾಲೂಕು ಅಧ್ಯಕ್ಷ ಹಂಚೀಪುರ ಗಣಪತಿ, ಗ್ರಾಮದ ಮುಖಂಡರಾದ ಶಾಂತಮಲ್ಲಪ್ಪ, ಕೂಸಪ್ಪ, ಪಾಪಣ್ಣ, ಪರಶಿವ, ಜಯಕುಮಾರ್, ಮಹೇಶ್, ಪುಟ್ಟಸ್ವಾಮಪ್ಪ, ಗ್ರಾಪಂ ಸದಸ್ಯ ಬಸವರಾಜು, ಪುರದಶೆಡ್ಡು ಲೋಕೇಶ್, ಆನಂದ, ರಘುಪತಿ, ಪ್ರಭುಸ್ವಾಮಿ, ರಾಜು, ಎಂ.ಎಸ್. ಮಲ್ಲಿಕಾರ್ಜುನ, ಕೆಂಪಣ್ಣ, ಶಿವಶಂಕರ್, ಪ್ರಕಾಶ್ ಇದ್ದರು.