ತಾಪಮಾನ ಏರಿಕೆ: ಸುಳ್ಯ ತಾಲೂಕಿನಲ್ಲಿ ನೀರಿನ ಸಮಸ್ಯೆ

| Published : Apr 30 2024, 02:05 AM IST

ಸಾರಾಂಶ

ಕುಡಿಯುವ ನೀರಿನ ಸಮಸ್ಯೆ ತಾಲೂಕಿನ ಬಹುತೇಕ ಕಡೆಗಳಲ್ಲಿ ಇದ್ದು, ಇದರ ಜೊತೆಗೆ ಕೃಷಿಕರ ಕೃಷಿ ತೋಟಗಳಿಗೂ ನೀರಿಲ್ಲದೆ ಒಣಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಯಸ್ವಿನಿ ನದಿಗೆ ನಾಗಪಟ್ಟಣದಲ್ಲಿ ಕಿಂಡಿ ಅಣೆಕಟ್ಟು ಇರುವುದರಿಂದ ಈ ಬಾರಿ ಆ ಪರಿಸರದ ಮೇಲ್ಭಾಗದಲ್ಲಿ ನೀರಿನ ಸಮಸ್ಯೆ ಅಷ್ಟಾಗಿ ಕಂಡುಬಂದಿಲ್ಲ.

ವಿಶೇಷ ವರದಿಕನ್ನಡಪ್ರಭ ವಾರ್ತೆ ಸುಳ್ಯ

ಬೇಸಿಗೆಯ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದ್ದು, ನೀರಿನ ಸಮಸ್ಯೆಯೂ ಸುಳ್ಯ ತಾಲೂಕಿನ ಅಲ್ಲಲ್ಲಿ ಕಂಡುಬಂದಿದೆ. ಸುಳ್ಯದ ಜೀವನದಿ ಪಯಸ್ವಿನಿಯ ಒಡಲು ಬಹುತೇಕ ಕಡೆ ಬತ್ತಿ ಹೋಗಿದೆ.ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ತಾಲೂಕಿನ ಬಹುತೇಕ ಕಡೆಗಳಲ್ಲಿ ಇದ್ದು, ಇದರ ಜೊತೆಗೆ ಕೃಷಿಕರ ಕೃಷಿ ತೋಟಗಳಿಗೂ ನೀರಿಲ್ಲದೆ ಒಣಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.ಜೀವನದಿ ಪಯಸ್ವಿನಿಯ ಒಡಲು ಅಲ್ಲಲ್ಲಿ ಬತ್ತಿ ಹರಿವು ನಿಲ್ಲಿಸಿದ್ದು, ನೀರಿನಲ್ಲಿ ವಾಸಿಸುವ ಜಲಚರಗಳಿಗೂ ಗಂಡಾಂತರ ಉಂಟಾಗಿದೆ. ಉಷ್ಣತೆಯ ಪ್ರಖರತೆ ಕಳೆದ ಕೆಲವು ದಿನಗಳಿಂದ ತೀವ್ರಗತಿಯಲ್ಲಿ ಏರುತ್ತಿದ್ದು, ಜನತೆ ಹೊರಗಡೆ ತಮ್ಮ ಕೆಲಸ ಕಾರ್ಯಗಳಿಗೆ ಓಡಾಡಲೂ ಆಗದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಆದರೆ ಕಳೆದ ಕೆಲವು ದಿನಗಳಿಂದ ತಾಲೂಕಿನಾದ್ಯಂತ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಕಳೆದ ವಾರ ಕೆಲವೆಡೆ ಹಗುರ ಪ್ರಮಾಣದಲ್ಲಿ ಮಳೆಯಾಗಿದೆ. ಈ ಮಳೆಯಿಂದ ಏನೇನೂ ಪ್ರಯೋಜನವಿಲ್ಲ. ಯಾಕೆಂದರೆ ಜೀವನದಿ ಪಯಸ್ವಿನಿಯು ಹರಿವು ಮುಂದುವರಿಸಬೇಕಾದರೆ ಒಂದೆರಡು ದಿನಗಳ ಕಾಲ ನಿರಂತರವಾಗಿ ಮಳೆಯಾಗಬೇಕಾಗಿದೆ.ಪಯಸ್ವಿನಿ ನದಿಗೆ ನಾಗಪಟ್ಟಣದಲ್ಲಿ ಕಿಂಡಿ ಅಣೆಕಟ್ಟು ಇರುವುದರಿಂದ ಈ ಬಾರಿ ಆ ಪರಿಸರದ ಮೇಲ್ಭಾಗದಲ್ಲಿ ನೀರಿನ ಸಮಸ್ಯೆ ಅಷ್ಟಾಗಿ ಕಂಡುಬಂದಿಲ್ಲವಾದರೂ, ಸುಳ್ಯ, ಅಡ್ಕಾರು ಹಾಗೂ ಕೇರಳದ ಗಡಿಭಾಗವಾದ ಪಂಜಿಕಲ್ಲು ಪರಿಸರದಲ್ಲಿ ನೀರಿನ ಹರಿವು ಸಂಪೂರ್ಣ ನಿಂತುಹೋಗಿದೆ.ಕಳೆದ ವರ್ಷವೂ ಏಪ್ರಿಲ್ - ಮೇನಲ್ಲಿ ತಾಲೂಕಿನಲ್ಲಿ ನೀರಿನ ಅಭಾವ ಕಂಡುಬಂದಿತ್ತು. ಬಳಿಕ ಮಳೆಯಾದ ಕಾರಣದಿಂದ ಸಮಸ್ಯೆ ಅಷ್ಟಾಗಿ ಕಂಡುಬಂದಿರಲಿಲ್ಲ. ಆದರೆ ಈ ಬಾರಿ ನದಿಪಾತ್ರದಲ್ಲಿ ನೀರು ಬತ್ತಿದ್ದು, ಕೆರೆ- ಬಾವಿ ಸೇರಿದಂತೆ ಕೊಳವೆಬಾವಿಗಳಲ್ಲೂ ನೀರಿನ ಅಭಾವ ಕಂಡುಬರತೊಡಗಿದೆ.* ಜಲಚರಕ್ಕೂ ಸಂಕಷ್ಟಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲೂ ನೀರಿನ ಮಟ್ಟ ಇಳಿಮುಖವಾಗಿದ್ದು, ವಾರದ ಹಿಂದೆ ಪುಳಿಕುಕ್ಕು ಪರಿಸರದಲ್ಲಿ ಹೊಳೆಯಲ್ಲಿ ನೀರಿನ ಕೊರತೆಯಿಂದಾಗಿ ಮೊಸಳೆಯೊಂದು ಅಸುನೀಗಿತ್ತು. ಜೊತೆಗೆ ಮೀನು ಸೇರಿದಂತೆ ಜಲಚರಗಳಿಗೂ ತೊಂದರೆಯಾಗಿದೆ.ಪೂರ್ಣಪ್ರಮಾಣದಲ್ಲಿ ಮಳೆಗಾಲ ಪ್ರಾರಂಭಗೊಳ್ಳಲು ಇನ್ನೂ ಒಂದು ತಿಂಗಳು ಕಾಯಬೇಕಾಗಿದ್ದು, ಇದೀಗ ಕಳೆದ ಶುಕ್ರವಾರದಿಂದ ಮೋಡದ ವಾತಾವರಣ ಕಂಡುಬರುತ್ತಿದೆ. ತಾಲೂಕಿನ ಕೆಲವು ಪರಿಸರದಲ್ಲಿ ಸಣ್ಣಪ್ರಮಾಣದಲ್ಲಿ ಮಳೆಯಾಗಿದ್ದು, ಸೆಕೆಯಿಂದ ಬಳಲಿದ್ದ ತಾಲೂಕಿನ ಜನರನ್ನು ತಂಪಾಗಿಸಿದೆ.

* ಮಳೆಗಾಗಿ ಪರ್ಜನ್ಯ ಜಪ, ವಿಶೇಷ ಪ್ರಾರ್ಥನೆ:

ತಾಲೂಕಿನಲ್ಲಿ ಶೀಘ್ರವಾಗಿ ಮಳೆಯಾಗಲೆಂದು ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಸನ್ನಿಧಿಯಲ್ಲಿ ಪರ್ಜನ್ಯ ಜಪ ಹಾಗೂ ವಿಶೇಷ ಪ್ರಾರ್ಥನೆಯು ಇತ್ತೀಚೆಗೆ ನಡೆಸಲಾಗಿತ್ತು.