ಸಾರಾಂಶ
ಕುಕನೂರು: ತಾಲೂಕಿನ ಇತಿಹಾಸ ಪ್ರಸಿದ್ಧ ದೇವಾಲಯ ಚಕ್ರವರ್ತಿ ಇಟಗಿ ಮಹಾದೇವ ದೇವರ ಮಹಾರಥೋತ್ಸವ ಜ.೧೧ರಂದು (ಎಳ್ಳು ಅಮಾವಾಸ್ಯೆ) ಸಂಜೆ ಜರುಗಲಿದೆ.ಪ್ರತಿವರ್ಷ ಎಳ್ಳು ಅಮಾವಾಸ್ಯೆಯಂದು ರಥೋತ್ಸವ ಜರುಗುತ್ತದೆ.
ದೇವಾಲಯ ಚಕ್ರವರ್ತಿ ಮಹಾದೇವ ದೇವಾಲಯ ೧೧೧೨ರಲ್ಲಿ ಸ್ಥಾಪನೆಯಾಗಿದೆ. ಯಜ್ಞ-ಯಾಗಾದಿ ಮಾಡುವ ಇಗ್ಗಿಷ್ಟಿಕೆ ಹೆಸರು ರೂಪಾಂತರವಾಗಿ ಇಟ್ಟಿಗಿ, ಇಟಗಿ ಗ್ರಾಮ ಆಗಿದೆ.
ಇಟಗಿ ಮಹಾದೇವ ದೇವಾಲಯವನ್ನು ಕಲ್ಯಾಣ ಚಾಲುಕ್ಯರ ೬ನೇ ವಿಕ್ರಮಾದಿತ್ಯನ ಪ್ರಧಾನ ದಂಡನಾಯಕನಾಗಿದ್ದ ಮಹಾದೇವ ದಂಡನಾಯಕ ಈ ದೇವಾಲಯ ನಿರ್ಮಿಸಿದ್ದಾನೆ.
ಹಿಂದೆ 400 ಬ್ರಾಹ್ಮಣರಿದ್ದ ಅಗ್ರಹಾರವಾಗಿತ್ತು ಎಂಬ ಪ್ರತೀತಿ ಇದೆ.ಕಲೆಗಳಲ್ಲಿ ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ಕೆತ್ತನೆಗಳಿಂದ ಈ ದೇವಾಲಯ ಕೂಡಿದೆ. ದೇವಾಲಯದ ಹಿಂದೆ ಕಿಲ್ಲೇದಬಾವಿ ಇದ್ದು, ಈಶ್ವರನ ಪೂಜೆಗೆ ನೀರು ಇಲ್ಲಿಂದ ತರಲಾಗುತ್ತದೆ.
ಈ ಮಹಾದೇವ ದೇವಾಲಯ ನಿರ್ಮಾಣ ಕುರಿತು ದೇವಾಲಯದ ಸರಸ್ವತಿ ಗುಡಿಯಲ್ಲಿರುವ ಶಾಸನದಲ್ಲಿ ವಿವರ ಇದೆ.ಯುಗಾದಿ ದಿನ ಸೂರ್ಯರಶ್ಮಿಗಳು ನೇರವಾಗಿ ಗರ್ಭಗುಡಿ ಪ್ರಾಗಂಣಕ್ಕೆ ಬಿದ್ದು ಅವುಗಳ ಪ್ರತಿಬಿಂಬ ಮಹಾದೇವ ದೇವರ ವಿಗ್ರಹದ ಮೇಲಿರುತ್ತವೆ. ಏಷ್ಯಾದಲ್ಲಿಯೇ ಅತ್ಯಂತ ಎರಡನೇ ದೊಡ್ಡ ಪುಷ್ಕರಣೆಯಾದ ಇದು ಇಟಗಿ ಪುಷ್ಕರಣೆ ಎಂದು ಹೆಸರು ಪಡೆದಿದೆ.
ಕ್ರಿ.ಶ. ೧೧೧೨ರಲ್ಲಿ ಈ ದೇವಾಲಯ ನಿರ್ಮಾಣಗೊಂಡಿದ್ದರೆ, ೪ ವರ್ಷಗಳ ಆನಂತರ ಬೇಲೂರು ಚೆನ್ನಕೇಶವ ದೇವಾಲಯ ನಿರ್ಮಾಣಗೊಂಡಿದೆ. ಇಟಗಿಯಲ್ಲಿ ಸಣ್ಣ ಪ್ರಮಾಣದಲ್ಲಿ ಕೆತ್ತಿ ನಿಲ್ಲಿಸಿದ ಶಿಲಾ ಬಾಲಿಕೆಯರನ್ನು ದೊಡ್ಡದಾಗಿ ಬೇಲೂರು ಚೆನ್ನಕೇಶವ ದೇವಾಲಯದಲ್ಲಿ ಕೆತ್ತಲಾಗಿದೆ.
ಮಲ್ಲೋಜ, ದಾಸೋಜ, ಬಮ್ಮೋಜ ಎಂಬ ಶಿಲ್ಪಿಗಳು ಕೆತ್ತಿದ್ದು, ಬೇಲೂರಿಗೂ ಹೋಗಿ ಆ ದೇವಾಲಯವನ್ನು ನಿರ್ಮಿಸಿದ್ದಾರೆ ಎಂದು ಶಾಸನಗಳಿಂದ ತಿಳಿದು ಬರುತ್ತದೆ.ಕಂಬಗಳು, ಜಾಲಂದುಗಳು ಅಂತರಾಳ, ಶುತನಾಶಿ ಕಂಬಗಳು, ಬೋದಿಗೆ, ಅಷ್ಮಕೋನಾಕೃತಿಯ ವಿಶೇಷತೆಗಳಿಂದ ದೇವಾಲಯ ಕೂಡಿದೆ.
ದೇವಸ್ಥಾನದಲ್ಲಿರುವ ೬೦ ಕಂಬಗಳ ಕೆತ್ತನೆ ಒಂದಕ್ಕೊಂದು ಭಿನ್ನವಾಗಿವೆ. ನೋಡಲು ಒಂದೇ ಮಾದರಿಯಲ್ಲಿ ಇದ್ದಂತೆ ಕಂಡರೂ ಕಲೆ ವಿಭಿನ್ನವಾಗಿದೆ.ಇಟಗಿ ಮಹಾದೇವ ದೇವಾಲಯ ಸುಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇಲ್ಲಿಯ ಕಲಾಕೆತ್ತನೆ ಇಡೀ ವಿಶ್ವಕ್ಕೆ ಮಾದರಿ. ಅಲ್ಲದೆ ಮಹಾದೇವ ದೇವಾಲಯಕ್ಕೆ ಭಕ್ತರು ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಎಳ್ಳಅಮಾವಾಸ್ಯೆ ದಿನ ಸಂಜೆ ವಿಜೃಂಭಣೆಯಿಂದ ರಥೋತ್ಸವ ನಡೆಯಲಿದೆ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))