ಸಾರಾಂಶ
ಇಲ್ಲಿಗೆ ಸಮೀಪದ ತಿಮ್ಮಲಾಪುರದ ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನಗಳ ಮೇಲೆ ನಿಧಿಗಳ್ಳರ ಕಣ್ಣು ಬಿದ್ದಿದ್ದು, ನಿಧಿ ಆಸೆಗಾಗಿ ದೇವಸ್ಥಾನದ ಮೂರ್ತಿಗಳನ್ನು ಭಗ್ನಗೊಳಿಸುವ ಕೆಲಸ ನಿರಂತರ ನಡೆಯುತ್ತಿರುವುದು ಜನರಲ್ಲಿ ಈಗ ಆತಂಕ ಮೂಡಿಸಿದೆ.
ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ
ಇಲ್ಲಿಗೆ ಸಮೀಪದ ತಿಮ್ಮಲಾಪುರದ ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನಗಳ ಮೇಲೆ ನಿಧಿಗಳ್ಳರ ಕಣ್ಣು ಬಿದ್ದಿದ್ದು, ನಿಧಿ ಆಸೆಗಾಗಿ ದೇವಸ್ಥಾನದ ಮೂರ್ತಿಗಳನ್ನು ಭಗ್ನಗೊಳಿಸುವ ಕೆಲಸ ನಿರಂತರ ನಡೆಯುತ್ತಿರುವುದು ಜನರಲ್ಲಿ ಈಗ ಆತಂಕ ಮೂಡಿಸಿದೆ.ಅನಂತ ಚತುರ್ದಶಿ ದಿನ ರಾತ್ರಿ ತ್ರಿಕೂಟೇಶ್ವರ ಗುಡಿಯಲ್ಲಿಯೇ ನಿಧಿಗಾಗಿ ತೆಗ್ಗು ತೆಗೆದಿದ್ದಾರೆ. ಗ್ರಾಮಸ್ಥರಿಗೆ ತಿಳಿದು ಬಂದು ನೋಡಿದಾಗ ಪಕ್ಕದಲ್ಲಿ ಕಲ್ಲು ಕಿತ್ತು ಹಾಕಿದ್ದು ಕಂಡುಬಂದಿದೆ.
ಈ ದೇವಸ್ಥಾನದಲ್ಲಿ ಒಂದೇ ನವರಂಗ ಮಂಟಪದಲ್ಲಿ ಮೂರು ಶಿವಲಿಂಗಗಳಿವೆ. 2013ರಲ್ಲಿ ನಿಧಿಗಳ್ಳರು ಲಿಂಗದ ಮೇಲಿನ ಗುಂಡು ಕದ್ದೊಯ್ದಿದ್ದರು. ಈಗ ಮತ್ತೆ ಇದೇ ದೇವಸ್ಥಾನದಲ್ಲಿ ನಿಧಿಚೋರರು ಲಿಂಗದ ಕೆಳಗೆ ಅಗೆದು ವಿರೂಪಗೊಳಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.2024ರ ನವೆಂಬರ್‌ನಲ್ಲಿ ಇದೇ ಪ್ರದೇಶದಲ್ಲಿನ ಹೊಸೂರಮ್ಮನ ದೇವಸ್ಥಾನದ ಪಾದಗಟ್ಟೆಯನ್ನು ನಿಧಿಚೋರರು ಅಗೆದಿದ್ದರು. ಇನ್ನೂ ಅದು ಮಾಸುವ ಮುನ್ನವೆ ಮತ್ತೆ ಈ ಘಟನೆ ನಡೆದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಪ್ರಾಚ್ಯವಸ್ತು ಇಲಾಖೆಯ ವ್ಯಾಪ್ತಿಯ ವೇಣುಗೋಪಾಲಸ್ವಾಮಿ, ತ್ರಿಕೂಟೇಶ್ವರ ದೇಗುಲಗಳನ್ನು ಇಲಾಖೆಯು ನಿರ್ಲಕ್ಷಿಸಿದೆ. ದೇವಸ್ಥಾನಗಳ ಸುತ್ತಲೂ ಬೆಳಕಿನ ಮತ್ತು ಸಿಸಿ ಕ್ಯಾಮೆರಾಗಳಿಲ್ಲದ ಕಾರಣ ಪದೇ ಪದೇ ನಿಧಿಚೋರರ ದಾಳಿಗೆ ದೇಗುಲಗಳು ಒಳಗಾಗುತ್ತಿವೆ. ತಕ್ಷಣವೇ ನಿಧಿಚೋರರನ್ನು ಬಂಧಿಸಿ, ದೇವಸ್ಥಾನದಲ್ಲಿ ಸಿಸಿ ಕ್ಯಾಮೆರಾ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.