ಸಾರಾಂಶ
ಕನ್ನಡಪ್ರಭ ವಾರ್ತೆ ತೇರದಾಳ (ರ-ಬ)
ತೇರದಾಳ ಪಟ್ಟಣದ ಕ್ಷೇತ್ರಾಧಿಪತಿ ಶ್ರೀಅಲ್ಲಮಪ್ರಭು ದೇವರ ನೂತನ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ಜರುಗುತ್ತಿರುವ ಬಸವ ಪುರಾಣ ಆಲಿಸಲು ಬರುವ ಭಕ್ತರಿಗೆ ವ್ಯವಸ್ಥೆ ಮಾಡಿರುವ ಅನ್ನಪ್ರಸಾದಕ್ಕೆ ಶೇಂಗಾ ಹೋಳಿಗೆ ಅರ್ಪಿಸಲು ಸೋಮವಾರ ಆಗಮಿಸಿದ್ದ ಸಹಸ್ರಾರು ಸಂಖ್ಯೆಯ ಮಹಿಳೆಯರು ಸಾಗರೋಪಾದಿಯಲ್ಲಿ ಹರಿದು ಬಂದಿದ್ದು ಐತಿಹಾಸಿಕವಾಗಿತ್ತು.ಒಂದು ತಿಂಗಳ ಕಾಲ ಜರುಗುವ ಈ ಕಾರ್ಯಕ್ರಮದಲ್ಲಿ ಪ್ರತಿದಿನ ಸಂಜೆ ಜರುಗುವ ಬಸವ ಪುರಾಣ ಆಲಿಸಲು ಬರುವ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆಯಿದೆ. ಪ್ರತಿದಿನವೂ ತರಹೇವಾರಿ ಬಾರಿ ಭೋಜನ ವ್ಯವಸ್ಥೆಯನ್ನು ಭಕ್ತರು ಶ್ರದ್ಧೆಯಿಂದ ನೆರವೇರಿಸುತ್ತಿದ್ದಾರೆ. ಮೊದಲು ರೊಟ್ಟಿ ಸಮರ್ಪಿಸಿದ ಭಕ್ತರು ದಿನಕ್ಕೊಂದರಂತೆ ದವಸ ಧಾನ್ಯಗಳು ಸೇರಿದಂತೆ ಬೆಲ್ಲ, ಅಕ್ಕಿ, ಉಪ್ಪಿನಕಾಯಿ ಹೀಗೆ ನಾನಾ ಪದಾರ್ಥ ಸಮರ್ಪಿಸುತ್ತಿದ್ದಾರೆ. ಪಟ್ಟಣದ ಪ್ರಮುಖ ಗಲ್ಲಿಗಳಲ್ಲಿ ಶ್ರೀಪ್ರಭು ಪರಂ ಜ್ಯೋತಿ ಹಾಗೂ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ನೀಡುತ್ತಾ ಪಾದಯಾತ್ರೆಯನ್ನು ಶೇಗುಣಶಿಯ ಮಹಾಂತ ಪ್ರಭುಶ್ರೀ ಹಾಗೂ ತೇರದಾಳದ ಗಂಗಾಧರ ದೇವರು, ಚಿಮ್ಮಡದ ಪ್ರಭುಶ್ರೀ, ಹಂದಿಗುಂದ ಶಿವಾನಂದಶ್ರೀಗಳು ಕೈಗೊಂಡಿದ್ದಾರೆ. ಈ ವೇಳೆ ಭಕ್ತರು ಅಲ್ಲಿನ ಭಕ್ತರಿಗೆ ಉಚಿತವಾಗಿ ರುದ್ರಾಕ್ಷಿ ಧಾರಣೆ ಮಾಡುವ ವೇಳೆ ಮಹಿಳೆಯರು ತಾವು ಒಂದು ದಿನ ಶೇಂಗಾ ಹೋಳಿಗೆ ಮಾಡಿಕೊಂಡು ಬಂದು ಸಮರ್ಪಿಸುವ ಇಂಗಿತ ವ್ಯಕ್ತ ಪಡಿಸಿದ್ದರಿಂದ ಶ್ರೀಗಳು ಸಮ್ಮತಿ ಸೂಚಿಸಿದಂತೆ ಸೋಮವಾರ ಸಾವಿರಾರು ಸಂಖ್ಯೆಯ ಮಹಿಳೆಯರು ಆಗಮಿಸಿ ತಮ್ಮ ಭಕ್ತಿ ಸಮರ್ಪಿಸಿದರು.
ರಬಕವಿ ರಸ್ತೆ ಶ್ರೀನೀಲಕಂಠೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜಮಾಯಿಸಿದ ಭಕ್ತರಿಗೆ, ಅಲ್ಲಿಂದ ಶ್ರೀಗಳು ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ. ಬಳಿಕ ಕೆಎಚ್‌ಡಿಸಿ ಕಾಲೋನಿ, ಪೊಲೀಸ್ ಠಾಣೆ, ಪದ್ಮಾ ಆಸ್ಪತ್ರೆ, ನಿವರಗಿ ಟೆಕ್ಸಟೈಲ್ಸ್, ಮಹಾವೀರ ವೃತ್ತ, ಬಸ್ ನಿಲ್ದಾಣ, ದತ್ತ ಮಂದಿರ, ಜಾಮೀಯಾ ಮಸ್ಜೀದ್, ನಾಡಕಚೇರಿ, ಚಾವಡಿ ಸರ್ಕಲ್, ಕನ್ನಡ ಶಾಲೆ, ಅಗಸಿ, ವಿಠ್ಠಲ ಮಂದಿರದಿಂದ ಸಾಗಿ ಅಲ್ಲಮಪ್ರಭು ದೇವಸ್ಥಾನ ತಲುಪಿತು. ಅಂದಾಜು ೨ ಕಿ.ಮೀ.ನಷ್ಟು ಮಹಿಳೆಯರು ಎರಡು ಸಾಲುಗಳಲ್ಲಿ ಬರಿಗಾಲಿನಲ್ಲಿ ನಡೆದರು. ಕೆಲ ಕಾಲ ಬಸ್ ನಿಲ್ದಾಣದ ಬಳಿ ವಾಹನ ದಟ್ಟನೆ ಉಂಟಾಗಿತ್ತು. ಈ ಪಾದಯಾತ್ರೆಯಲ್ಲಿ ಶೇಗುಣಸಿ ಮಹಾಂತ ಪ್ರಭುಶ್ರೀ, ಚಿಮ್ಮಡ ಪ್ರಭುಶ್ರೀ, ಬನಹಟ್ಟಿ ಶರಣಬಸವ ಶಿವಾಚಾರ್ಯರು, ತೇರದಾಳದ ಗಂಗಾಧರ ದೇವರು ಸೇರಿದಂತೆ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಅಲ್ಲಲ್ಲಿ ಭಕ್ತರು ಪಾದಯಾತ್ರಿಕರಿಗೆ ನೀರು, ಪಾನಕದ ವ್ಯವಸ್ಥೆ ಮಾಡಿದ್ದರು.