ಸಾರಾಂಶ
- ದೇಗುಲಗಳಲ್ಲಿ ಫಲಕ ಅಳವಡಿಸಲು ನಿರ್ಧಾರ
- ಮುಸ್ಲಿಮರಿಗೆ ಹಣ ನೀಡುವ ಆರೋಪಕ್ಕೆ ಸಡ್ಡು-----ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಜರಾಯಿ ಇಲಾಖೆಯಡಿಯ ದೇವಸ್ಥಾನಗಳ ಆದಾಯವನ್ನು ಮುಸಲ್ಮಾನ, ಕ್ರಿಶ್ಚಿಯನ್ನರಿಗೆ ಕೊಡಲಾಗುತ್ತಿದೆ ಎಂಬ ಸಾಮಾಜಿಕ ಜಾಲತಾಣದಲ್ಲಿನ ಅಪಪ್ರಚಾರ ತಡೆದು ಜನತೆಗೆ ನಿಜಾಂಶ ತಿಳಿಸಲು ನಿರ್ಧರಿಸಿರುವ ಸರ್ಕಾರ ದೇವಸ್ಥಾನಗಳಲ್ಲಿ ‘ಈ ದೇವಸ್ಥಾನದ ಆದಾಯ ದೇವಸ್ಥಾನಕ್ಕೇ ಬಳಕೆಯಾಗುತ್ತಿದೆ’ ಎಂದು ಫಲಕ ಹಾಕಲು ಮುಂದಾಗಿದೆ.ಮುಜರಾಯಿ ಇಲಾಖೆಯ ಆಂತರಿಕ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ. ನ.13ರಂದು ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ನಿಗದಿಯಾಗಿರುವ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಈ ಪ್ರಸ್ತಾವನೆಯಿಟ್ಟು ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ.
‘ಎ’ ದರ್ಜೆಯ 205, ‘ಬಿ’ ದರ್ಜೆಯ 193 ದೇವಸ್ಥಾನಗಳ ಆದಾಯ ಅವುಗಳದ್ದೇ ಬ್ಯಾಂಕ್ ಖಾತೆಯಲ್ಲಿದೆ. ‘ಸಿ’ ದರ್ಜೆಯ 36,217 ಸಣ್ಣ ದೇವಸ್ಥಾನಗಳಿವೆ. ಆ ಆದಾಯವನ್ನು ಸಿಬ್ಬಂದಿ ಸಂಬಳ, ವಿದ್ಯುತ್, ನೀರಿನ ಬಿಲ್ ಸೇರಿ ಅಗತ್ಯ ಖರ್ಚುವೆಚ್ಚಕ್ಕೆ ಬಳಕೆ ಮಾಡಲಾಗುತ್ತಿದೆ.ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ದೇವಸ್ಥಾನಗಳ ಆದಾಯದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಇದಕ್ಕೆ ತಿರುಗೇಟು ಎಂಬಂತೆ ದೇವಾಲಯಗಳಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ನೀಡಲು ಸರ್ಕಾರ ಹೆಜ್ಜೆ ಇಟ್ಟಿದ್ದು, ‘ದೇವಸ್ಥಾನದ ಹಣವನ್ನು 2003ರ ಧಾರ್ಮಿಕ ಪರಿಷತ್ತಿನ ಕಾಯ್ದೆಯಂತೆ ಆಯಾ ದೇವಸ್ಥಾನದ ವ್ಯವಸ್ಥಾಪನ ಸಮಿತಿಯೇ ನಿರ್ವಹಿಸುತ್ತಿದೆ. ಆದಾಯ ದೇವಸ್ಥಾನದ ಅಭಿವೃದ್ಧಿಗೇ ಬಳಕೆಯಾಗುತ್ತಿದೆ’ ಎಂದು ಫಲಕ ಹಾಕಲು ನಿರ್ಧರಿಸಲಾಗಿದೆ. ಜೊತೆಗೆ ಆದಾಯದ ಖರ್ಚು, ವೆಚ್ಚವನ್ನು ಸಾರ್ವಜನಿಕರಿಗೆ ತಿಳಿಸಲು ವ್ಯವಸ್ಥಾಪನ ಸಮಿತಿ ಕ್ರಮ ವಹಿಸಲಿದೆ.
ಈ ಬಗ್ಗೆ ಮಾತನಾಡಿದ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ‘ಸಾಮಾಜಿಕ ಜಾಲತಾಣದಲ್ಲಿ ದೇವಸ್ಥಾನದ ಹಣವನ್ನು ಬೇರೆಡೆ ಬಳಸಲಾಗುತ್ತಿದೆ ಎಂಬ ಸುಳ್ಳು ಹರಡಲಾಗುತ್ತಿದೆ. ಜನ ಕೂಡ ಅದನ್ನೇ ನಂಬುವ ಸಾಧ್ಯತೆ ಹೆಚ್ಚು. ಹೀಗಾಗಿ ದೇವಸ್ಥಾನದ ಫಲಕದಲ್ಲಿ ದೇವಸ್ಥಾನದ ಆದಾಯ ಅದೇ ದೇವಸ್ಥಾನಕ್ಕೆ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಲಿದ್ದೇವೆ’ ಎಂದು ತಿಳಿಸಿದರು.ಇದರ ಜೊತೆಗೆ ಫಲಕದಲ್ಲಿ ‘ಎ’, ‘ಬಿ’ ದೇವಸ್ಥಾನಗಳಲ್ಲಿ ಅರ್ಚಕರು, ಭಕ್ತರಿಗಿರುವ ಸೌಕರ್ಯದ ಮಾಹಿತಿ ನೀಡಲು ನಿರ್ಧರಿಸಲಾಗಿದೆ. ಹಿಂದಿನ ಸರ್ಕಾರಗಳು ಇಲಾಖೆಯಲ್ಲಿ ಹಣ ಉಳಿಸುತ್ತಿರಲಿಲ್ಲ. ನಾವು ₹20 ಕೋಟಿ ಇಟ್ಟಿದ್ದು, ಅರ್ಚಕರು, ಸಿಬ್ಬಂದಿ ಒಳಿತಿಗೆ ಬಳಸಲಿದ್ದೇವೆ ಎಂದರು.
ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯಡಿಯ ದೇವಸ್ಥಾನಗಳಲ್ಲಿ ಸುಮಾರು 35 ಸಾವಿರ ಸಿಬ್ಬಂದಿ ಇದ್ದಾರೆ. ಅರ್ಚಕರು, ಸಿಬ್ಬಂದಿ ಮಕ್ಕಳಿಗೆ ಪದವಿವೂರ್ವ ಶಿಕ್ಷಣಕ್ಕೆ ವಾರ್ಷಿಕ ₹5 ಸಾವಿರದಿಂದ ಹಿಡಿದು ವಿದೇಶಿ ವ್ಯಾಸಂಗದವರೆಗೆ ₹ 1ಲಕ್ಷವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಅರ್ಚಕರು, ನೌಕರರು ಮೃತಪಟ್ಟಲ್ಲಿ ₹ 2 ಲಕ್ಷ ಪರಿಹಾರ ನೀಡಲಾಗುವುದು. ಇದರ ಮಾಹಿತಿ ಸಿಬ್ಬಂದಿಗೆ ತಲುಪಿಸಲು ಫಲಕ ಅಳವಡಿಸಲಾಗುವುದು ಎಂದರು.ಉಳಿದಂತೆ ಮೊಬೈಲ್ ಬಳಕೆ ನಿಷೇಧ, ಸ್ವಚ್ಛತೆ ಕಾಪಾಡುವುದು ಸೇರಿ ಭಕ್ತರಿಗೆ ಅನುಕೂಲವಾಗುವ ಮಾಹಿತಿಯೂ ಇರಲಿದೆ ಎಂದು ತಿಳಿಸಿದರು.
---ಸುಳ್ಳು ಮಾಹಿತಿಯ ಪ್ರಸಾರಕ್ಕೆ ಬ್ರೇಕ್ಸಾಮಾಜಿಕ ಜಾಲತಾಣದಲ್ಲಿ ದೇವಸ್ಥಾನದ ಹಣವನ್ನು ಬೇರೆಡೆ ಬಳಸಲಾಗುತ್ತಿದೆ ಎಂಬ ಸುಳ್ಳು ಹರಡಲಾಗುತ್ತಿದೆ. ಜನರಿಗೆ ನಿಜ ತಿಳಿಸಲು ದೇವಸ್ಥಾನದ ಫಲಕದಲ್ಲಿ ಈ ದೇವಸ್ಥಾನದ ಆದಾಯ ಇಲ್ಲಿಗೇ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡುತ್ತೇವೆ.- ರಾಮಲಿಂಗಾರೆಡ್ಡಿ, ಮುಜರಾಯಿ ಸಚಿವ