ಕಾಂಗ್ರೆಸ್‌ ಅಭ್ಯರ್ಥಿಯಿಂದ ಟೆಂಪಲ್‌ ರನ್‌!

| Published : Mar 26 2024, 01:22 AM IST

ಸಾರಾಂಶ

ಧಾರವಾಡ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಹಾಗೂ ಚುನಾವಣಾ ನೇತೃತ್ವ ವಹಿಸಿರುವ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಜಂಟಿಯಾಗಿ ನಗರದಲ್ಲಿ ಟೆಂಪಲ್‌ ರನ್‌ ನಡೆಸಿದರು.

ಹುಬ್ಬಳ್ಳಿ:

ಧಾರವಾಡ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಹಾಗೂ ಚುನಾವಣಾ ನೇತೃತ್ವ ವಹಿಸಿರುವ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಜಂಟಿಯಾಗಿ ನಗರದಲ್ಲಿ ಟೆಂಪಲ್‌ ರನ್‌ ನಡೆಸಿದರು.

ವಿವಿಧ ದೇವಸ್ಥಾನ, ಮಠಗಳು, ದರ್ಗಾ, ಚರ್ಚ್‌ಗಳಿಗೆ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದುಕೊಂಡರು. ಇದೇ ವೇಳೆ ಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡರು.ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಚುರುಕಾಗಿರುವ ಜಿಲ್ಲೆಯ ಕಾಂಗ್ರೆಸ್‌ ನಾಯಕರು, ಧಾರವಾಡ ಮಯೂರ ರೆಸಾರ್ಟ್‌ನಲ್ಲಿ ಕಾರ್ಯಕರ್ತರ ಸಭೆ ನಡೆಸಿ ಚುನಾವಣೆಯಲ್ಲಿ ಅನುಸರಿಸಬೇಕಾದ ತಂತ್ರಗಳು, ಕ್ರಮಗಳ ಬಗ್ಗೆ ಸುದೀರ್ಘ ಚರ್ಚಿಸಿ ಹೊಣೆಗಾರಿಕೆಯನ್ನು ವಹಿಸಲಾಗಿತ್ತು.

ಚುನಾವಣಾ ತಂತ್ರದ ಭಾಗವಾಗಿ ಸಂತೋಷ ಲಾಡ್‌ ನೇತೃತ್ವದಲ್ಲಿ ಅಭ್ಯರ್ಥಿ ಹಾಗೂ ಮುಖಂಡರು ಟೆಂಪಲ್‌, ಚರ್ಚ್‌, ದರ್ಗಾ, ಮಸೀದಿಗಳಿಗೆ ಭೇಟಿ ನೀಡಿದರು.

ಮೊದಲಿಗೆ ಮೂರುಸಾವಿರ ಮಠಕ್ಕೆ ಭೇಟಿ ನೀಡಿದ ಸಚಿವರು ಹಾಗೂ ಅಭ್ಯರ್ಥಿ, ಗುರುಸಿದ್ದೇಶ್ವರರ ಗದ್ದುಗೆ ದರ್ಶನ ಪಡೆದರು. ಜ.ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಅವರ ಬಳಿ ತೆರಳಿ ಸನ್ಮಾನಿಸಿದರು. ಸ್ವಾಮೀಜಿ ಸಹ ಸಚಿವರು, ವಿನೋದ ಅಸೂಟಿ ಅವರನ್ನು ಸನ್ಮಾನಿಸಿ ಹಾರೈಸಿದರು.

ತದನಂತರ ಸಿದ್ಧಾರೂಢ ಮಠಕ್ಕೆ ತೆರಳಿದರು. ಅಲ್ಲಿಂದ ಇಂಡಿಪಂಪ್‌ ಫತೇಶಾವಲಿ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದರು. ರುದ್ರಾಕ್ಷಿ ಮಠಕ್ಕೆ ಬಂದ ಮುಖಂಡರು ಬಸವಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಹಾಗೆಯೇ ಬಾಸೆಲ್‌ ಮಿಶನ್‌ ಚರ್ಚ್‌ನಲ್ಲಿ ಧರ್ಮ ಗುರುಗಳನ್ನು ಭೇಟಿ ಮಾಡಿದರು. ತದನಂತರ ಅಂಬೇಡ್ಕರ ಮೂರ್ತಿ, ಸಂಗೊಳ್ಳಿ ರಾಯಣ್ಣ ಮೂರ್ತಿ ಮತ್ತು ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ಭೈರಿದೇವರಕೊಪ್ಪಕ್ಕೆ ತೆರಳುವ ಮುನ್ನ ಉಣಕಲ್ಲ ಸಿದ್ದಪ್ಪಜ್ಜನ ಗದ್ದುಗೆ ದರ್ಶನ ಮಾಡಿದರು. ಅಲ್ಲಿಂದ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ ಧಾರವಾಡದತ್ತ ಪ್ರಯಾಣ ಬೆಳೆಸಿದರು.

ಈ ವೇಳೆ ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಅನಿಲಕುಮಾರ ಪಾಟೀಲ, ಅಲ್ತಾಫ್‌ ಹಳ್ಳೂರ, ಸದಾನಂದ ಡಂಗನವರ ಸೇರಿದಂತೆ ಹಲವರಿದ್ದರು.

ಕಾರ್ಯಕರ್ತರ ಗೆಲವು ಖಚಿತ:ಏತನ್ಮಧ್ಯೆ ಮಾಧ್ಯಮದವರ ಜತೆ ಮಾತನಾಡಿದ ವಿನೋದ ಅಸೂಟಿ, 8 ವಿಧಾನಸಭೆ ಕ್ಷೇತ್ರಗಳನ್ನೊಳಗೊಂಡ ಧಾರವಾಡ ಕ್ಷೇತ್ರಾದ್ಯಂತ ಸುತ್ತಾಡಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಯನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಅಭ್ಯರ್ಥಿ ಹರಕೆ ಕುರಿ ಮಾಡಲಾಗುತ್ತಿದೆ ಎನ್ನುವ ಆರೋಪ ಅಲ್ಲಗಳೆದ ಅಸೂಟಿ, ಅದು ಕೆಲವರ ಭ್ರಮೆ. ಕಾರ್ಯಕರ್ತರಿಗೆ ಅವಕಾಶಕೊಟ್ಟಿದೆ. ನಾಯಕರು ದೃಢ ನಿಶ್ಚಯ ಮಾಡಿದ್ದು, ಈ ಬಾರಿ ಕಾಂಗ್ರೆಸ್‌ ಗೆಲ್ಲಲಿದೆ ಎಂದರು.

ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ. ಮತದಾರರಿಗೆ ನೀಡಿದ ಎಲ್ಲ ಆಶ್ವಾಸನೆಗಳನ್ನು ಜಾರಿಗೊಳಿಸಿದ್ದೇವೆ. ಎಲ್ಲೆಡೆ ಕಾಂಗ್ರೆಸ್‌ ಅಲೆ ಎದ್ದಿದೆ. ಇದು ರಾಷ್ಟ್ರದ್ಯಂತ ವಿಸ್ತರಿಸಲಿದೆ. ಖಂಡಿತವಾಗಿಯೂ ಕಾಂಗ್ರೆಸ್‌ ಗೆಲ್ಲಲಿದೆ ಎಂದರು.

ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಚಿವ ಸಂತೋಷ ಲಾಡ್‌, ಶಾಸಕ ಎನ್‌.ಎಚ್‌. ಕೋನರಡ್ಡಿ ಅವರ ನೇತೃತ್ವದಲ್ಲಿ ಶಿಗ್ಗಾವಿ ಸೇರಿದಂತೆ ಕ್ಷೇತ್ರಾದ್ಯಂತ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುತ್ತೇವೆ ಎಂದರು.