ದೇವಸ್ಥಾನಗಳು ನಮ್ಮ ನಾಡಿನ ದೇಶದ ಜನ ಸಮೂಹದಲ್ಲಿ ಭಗವಂತನ ಬಗ್ಗೆ ಸಂಸ್ಕೃತಿ ಸಂಸ್ಕಾರದ ಬಗ್ಗೆ ವಿಶ್ವಾಸ ತುಂಬುವ ಕೇಂದ್ರಗಳು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ರಾಣಿಬೆನ್ನೂರು: ದೇವಸ್ಥಾನಗಳು ನಮ್ಮ ನಾಡಿನ ದೇಶದ ಜನ ಸಮೂಹದಲ್ಲಿ ಭಗವಂತನ ಬಗ್ಗೆ ಸಂಸ್ಕೃತಿ ಸಂಸ್ಕಾರದ ಬಗ್ಗೆ ವಿಶ್ವಾಸ ತುಂಬುವ ಕೇಂದ್ರಗಳು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ತಾಲೂಕಿನ ಹಲಗೇರಿ ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದ ಗೋಪುರದ ಕಳಸಾರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಸ್ಕೃತಿ ಸಂಸ್ಕಾರದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ನಮ್ಮ ಬಳಿ ಏನಿದೆಯೋ ಅದು ನಾಗರಿಕತೆ. ಇದೆಲ್ಲವನ್ನು ಪಡೆದುಕೊಂಡು ನಾವು ಏನಾಗಿದ್ದೇವೊ ಅದು ಸಂಸ್ಕೃತಿ, ನಮ್ಮ ಅಂತಕರಣ, ಮಾನವೀಯತೆಯನ್ನು ಸದ್ವಿಚಾರ, ಸತ್ಯ ಶೋಧದ ಪರಿಕ್ರಮವನ್ನು ಉಳಿಸಿಕೊಂಡು ಬಂದಿದ್ದೇವೆಯೋ ಇಲ್ಲವೋ ಅನ್ನುವುದೇ ನಮ್ಮ ಸಂಸ್ಕೃತಿ. ಸಂಬಂಧ ಗಟ್ಟಿಯಾಗಿ ಉಳಿಯಬೇಕೆಂದರೆ ದೇವಸ್ಥಾನಗಳು ಬೇಕು. ಬಸವಣ್ಣನವರು ನಮ್ಮ ಆತ್ಮಲಿಂಗ ಪೂಜೆ ಮಾಡುವಂತೆ ಹೇಳಿದರು. ಸಾಮೂಹಿಕ ಜಾಗೃತಿ ಮೂಡಿಸಲು ಶ್ರದ್ಧಾ ಕೇಂದ್ರಗಳ ಅವಶ್ಯಕತೆ ಇದೆ. ಜನರು ದೇವರು ಅಂದರೆ ಎಲ್ಲರೂ ಒಂದಾಗುತ್ತಾರೆ. ರಾಜಕಾರಣ ಅಂದರೆ ಬೇರೆ ಆಗುತ್ತಾರೆ. ರಾಜಕಾರಣ ಸಂಸ್ಕೃತಿ ಅಲ್ಲ. ದೇವಸ್ಥಾನ ಸಂಸ್ಕೃತಿ, ಭಕ್ತಿ ಎಂದರೆ ಉತ್ಕೃಷ್ಟವಾದ ಪ್ರೀತಿ, ಕರಾರು ರಹಿತವಾದ ಪ್ರೀತಿ, ಭಗವಂತ ಒಳ್ಳೆಯದನ್ನು ಮಾಡು ಎಂದು ಕೇಳುವುದು. ಭಕ್ತಿಯಿಂದ ಆಚರಣೆ ಮಾಡುವುದಷ್ಟೆ ನಮ್ಮ ಕೆಲಸ ಎಂದರು. ಮಾಜಿ ಶಾಸಕ ಅರುಣಕುಮಾರ ಪೂಜಾರ, ಬಿಜೆಪಿ ಶಹರ ಘಟಕದ ಮಂಜುನಾಥ ಕಾಟಿ, ಶಿವಪ್ಪ ನಂದಿಹಳ್ಳಿ, ಎಸ್.ಎಸ್.ರಾಮಲಿಂಗಣ್ಣನವರ, ಎಸ್.ಡಿ.ಹಿರೇಮಠ, ಶೇಖಪ್ಪ ನರಸಗೊಂಡರ, ಪವನಕುಮಾರ ಮಲ್ಲಾಡದ, ಮೌನೇಶ ತಳವಾರ, ಅನಂತ ಇಟಗಿ, ರಮೇಶ ನಾಯ್ಕ್ ಮತ್ತಿತರರಿದ್ದರು.