ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ದೇವಸ್ಥಾನಗಳು ನೆಮ್ಮದಿಯ ತಾಣಗಳಾದ್ದು, ಅವುಗಳ ಅಭಿವೃದ್ಧಿಪಡಿಸುವುದು ಪುಣ್ಯದ ಕೆಲಸ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.ತಾಲೂಕಿನ ಬೇವೂರು ಗ್ರಾಮ ದೇವತೆ ಆದಿ ಉಡಸಲಮ್ಮ ದೇವಿಗೆ ಪೂಜೆ ನೆರವೇರಿಸಿದ ಬಳಿಕ ದೇವಿಯ ನೂತನ ದೇವಾಲಯದ ನಿರ್ಮಾಣದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಮನುಷ್ಯನಿಗೆ ಎಷ್ಟೇ ಒತ್ತಡಗಳಿದ್ದರೂ ಕೆಲ ಸಮಯ ದೇಗುಲದಲ್ಲಿ ಕುಳಿತು ಪ್ರಾರ್ಥನೆ ಮಾಡಿದರೆ ನೆಮ್ಮದಿ ಮತ್ತು ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದು ಹೇಳಿದರು.
ಬೇವೂರು ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗ್ರಾಮ ದೇವರಾದ ಆದಿ ಉಡಸಲಮ್ಮ ದೇವರಿಗೆ ಪುರಾತನ ಇತಿಹಾಸ ಇದೆ. ದೇಶದ ಎಲ್ಲಾ ದೇವಾಲಯಗಳಿಗೂ ಬಾಗಿಲು ಇದೆ. ಆದರೆ ಈ ದೇವಾಲಯಕ್ಕೆ ಬಾಗಿಲೇ ಇಲ್ಲ, ಎರಡು ಬಾರಿ ಬಾಗಿಲು ಹಾಕಿದರೂ ದೇವಿಯೇ ಬಾಗಿಲನ್ನು ಒದ್ದು ನೂರಡಿ ದೂರಕ್ಕೆ ಬಿದ್ದಿರುವ ಇತಿಹಾಸ ಇದೆ. ರಾತ್ರಿ ವೇಳೆ ದೇವಿ ಗ್ರಾಮದ ಪ್ರದಕ್ಷಣೆ ಮಾಡಿ ಜನ ಜಾನುವಾರುಗಳ ರಕ್ಷಣೆ ಮಾಡುತ್ತಾಳೆ ಎಂಬ ನಂಬಿಕೆ ಇದೆ ಎಂದು ಹೇಳಿದರು.ಗ್ರಾಮದಲ್ಲಿ ಯಾವುದೇ ಶುಭ ಸಮಾರಂಭ ನಡೆದರೂ ಮೊದಲ ಪೂಜೆ ಅಮ್ಮನಿಗೆ ಸಲ್ಲಿಸಿಯೇ ಮುಂದಿನ ಕೆಲಸಗಳನ್ನು ಆರಂಭಿಸುತ್ತಾರೆ. ಜೊತೆಗೆ ಹೊಸದಾಗಿ ಮದುವೆ ಆಗಿ ಬಂದ ಹೆಣ್ಣುಮಕ್ಕಳು ಹಾಗೂ ಗ್ರಾಮದಿಂದ ಬೇರೆಡೆಗೆ ಮದುವೆಯಾದ ಹೆಣ್ಣುಮಕ್ಕಳು ಈ ದೇವಿಗೆ ಪೂಜೆ ಸಲ್ಲಿಸಿದ ಬಳಿಕವೇ ಅವರು ಗಂಡನ ಮನೆಗೆ ತೆರಳಿ ಮುಂದಿನ ಜೀವನ ಆರಂಭಿಸುತ್ತಾರೆ. ಈ ನಿಟ್ಟಿನಲ್ಲಿ ಎಲ್ಲದಕ್ಕೂ ಆರಂಭ ನೀಡುವ ಆದಿ ಉಡಸಲಮ್ಮ ದೇವಿ ದೇವಾಲಯದ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರು ಮುಂದಾಗಿದ್ದು ಎಲ್ಲರಿಗೂ ಶುಭವಾಗಲಿ ಎಂದು ಆಶೀರ್ವಚನ ನೀಡಿದರು.
ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿ, ಬೇವೂರು ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ದೇವಸ್ಥಾನಗಳು, ಹಾಗೂ ಪ್ರವಾಸಿ ತಾಣಗಳು ಇವೆ. ಆದರೆ ಈ ದೇವಸ್ಥಾನ ಮಾತ್ರ ತುಂಬಾ ಹಳೆಯದಾಗಿತ್ತು. ಇದೀಗ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮುಂದಾಗಿದ್ದು, ಈ ಕಾರ್ಯಕ್ಕೆ ಸರ್ಕಾರದಿಂದ ಸಿಗುವ ಅನುದಾನ ಕೊಡಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.ಶಂಕುಸ್ಥಾಪನೆಗೂ ಮುನ್ನ ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬೆಳ್ಳಿರಥದಲ್ಲಿ ಕೂರಿಸಿ ಪೂಜಾ ಕುಣಿತ, ಡೊಳ್ಳು ಕುಣಿತದ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಇದೇ ವೇಳೆ ಶ್ರೀಗಳಿಂದ ದೇವಸ್ಥಾನದ ಬಸಪ್ಪನಿಗೆ ಬಾಳೆಹಣ್ಣು ನೀಡಿ ದೇವಸ್ಥಾನದ ಬಸಪ್ಪ ಎಂದು ಮುದ್ರೆ ಒತ್ತಿದರು.
ಕಾರ್ಯಕ್ರಮದಲ್ಲಿ ಗೌಡಗೆರೆ ಶ್ರೀ ಕ್ಷೇತ್ರದ ಧರ್ಮದರ್ಶಿ ಡಾ. ಮಲ್ಲೇಶ್ ಗುರೂಜಿ, ಅಂಧರ ಶಾಲೆ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ, ವಿರಕ್ತ ಮಠದ ಶ್ರೀ ಶಿವರುದ್ರ ಸ್ವಾಮೀಜಿ, ರಾಜ್ಯ ಒಕ್ಕಲಿಗರ ಸಂಘದ ಭೂ ಖರೀದಿ ಅಧ್ಯಕ್ಷ ಉಮಾಪತಿ, ಟ್ರಸ್ಟ್ ಅಧ್ಯಕ್ಷ ಕೆ.ಪುಟ್ಟಸ್ವಾಮಿ, ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.