ಸಾರಾಂಶ
ಬ್ಯಾಡಗಿ: ಸಾಂಪ್ರದಾಯಿಕವಾಗಿ ದೇವಾಲಯ ಪವಿತ್ರ ರಚನೆಯಾಗಿದ್ದು, ದೇವರ ವಾಸಸ್ಥಾನ ಮಾತ್ರವಲ್ಲ, ಬದಲಾಗಿ ಜ್ಞಾನ, ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿಯ ತೊಟ್ಟಿಲು ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯಪಟ್ಟರು.
ತಾಲೂಕಿನ ಗುಂಡೇನಹಳ್ಳಿ ಗ್ರಾಮದಲ್ಲಿ ಜಿಲ್ಲಾ ನಿರ್ಮಿತಿ ಕೇಂದ್ರದ ವತಿಯಿಂದ ₹50 ಲಕ್ಷ ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ಗುಂಡಯ್ಯ ಬ್ರಹ್ಮಯ್ಯ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ದೇವಾಲಯವು ಮೂಲಭೂತವಾಗಿ ಪೂಜಾ ಕೇಂದ್ರವಾಗಿದ್ದು, ಜನರ ಆಧ್ಯಾತ್ಮಿಕ ಆಸೆಗಳನ್ನು ಈಡೇರಿಸಿಕೊಳ್ಳಲು ನಿರ್ಮಿಸಲಾಗಿದೆ. ದೇವಾಲಯಗಳು ಭಾರತದಲ್ಲಿ ಸಾಮಾಜಿಕ- ಸಾಂಸ್ಕೃತಿಕ ಆಧ್ಯಾತ್ಮಿಕವಾಗಿ ಜನರನ್ನು ಎಚ್ಚರಗೊಳಿಸುವ ಪವಿತ್ರ ಕೇಂದ್ರಗಳಾಗಿದ್ದು, ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರೂ ಇವುಗಳಿಂದ ಪ್ರಭಾವಿತವಾಗದೇ ಉಳಿದಿಲ್ಲ ಹಾಗೂ ತಮ್ಮ ನಿತ್ಯದ ಬದುಕನ್ನು ದೇವಾಲಯಗಳಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಆರಂಭಿಸುತ್ತಾರೆ ಎಂದರು.
ಗ್ರಾಮಕ್ಕೊಂದು ಸಭಾಭವನ: ಬ್ಯಾಡಗಿ ಮತಕ್ಷೇತ್ರದಲ್ಲಿ ವ್ಯಾಪ್ತಿಯ ಪ್ರತಿ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದು, ಇದಕ್ಕಾಗಿ ಮುಖ್ಯಮಂತ್ರಿಗಳ ಜತೆ ಸಮಗ್ರವಾಗಿ ಚರ್ಚೇ ನಡೆಸಲಾಗಿದೆ. ನಮ್ಮ ತಾಲೂಕಿಗೆ ವಿಶೇಷ ಅನುದಾನವನ್ನು ಪಡೆದುಕೊಳ್ಳುವ ಮೂಲಕ ಪ್ರತಿ ಗ್ರಾಮದಲ್ಲಿಯೂ ಸಮುದಾಯ ಭವನ ನಿರ್ಮಾಣ ಮಾಡುವುದಾಗಿ ತಿಳಿಸಿದರು.ಆಸ್ತಿಕ ಮನೋಭಾವನೆಯಿಂದ ನೆಮ್ಮದಿ: ಡಾ. ಬಸವರಾಜ ವೀರಾಪುರ ಮಾತನಾಡಿ, ದೇವಾಲಯಗಳನ್ನು ಧರ್ಮದ ಪ್ರಮುಖ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಆಸ್ತಿಕ ಮನೋಭಾವನೆ ಹೊಂದಿರುವ ಪ್ರತಿಯೊಬ್ಬರ ಮನಸ್ಸಿನಲ್ಲಿ ದೇವಾಲಯಗಳು ಪ್ರಮುಖ ಸ್ಥಾನವನ್ನು ಹೊಂದಿದ್ದು, ನೆಮ್ಮದಿ ನೀಡುವ ತಾಣಗಳಾಗಿವೆ ಎಂದರು.
ಸಚ್ಚಾರಿತ್ರ್ಯದ ಬದುಕು ನಡೆಸಿ: ಮೃತ್ಯುಂಜಯಪ್ಪ ಶಿಗ್ಗಾಂವಿ ಮಾತನಾಡಿ, ಸಂಸ್ಕಾರ ಸಂಸ್ಕೃತಿಯಿಂದ ಮಾತ್ರ ಮನುಷ್ಯನ ಜೀವನ ಉನ್ನತಿ ಹೊಂದಲು ಸಾಧ್ಯ. ಸದ್ಗುಣ ಸಚ್ಚಾರಿತ್ರ್ಯದಿಂದ ಕೂಡಿದ ಬದುಕು ಮುಕ್ತಿಗೆ ದಾರಿ ನೀಡಲಿದೆ. ಸಕಲ ಜೀವರಾಶಿಗಳಲ್ಲಿ ಮನುಷ್ಯನಿಗೆ ಪ್ರಾಧಾನ್ಯತೆ ಹೆಚ್ಚಿದೆ. ಸನ್ಮಾರ್ಗದಲ್ಲಿ ನಡೆಯುವ ಮೂಲಕ ನಾವೆಲ್ಲರೂ ಭಗವಂತನ ಕೃಪೆಗೆ ಪಾತ್ರರಾಗಬೇಕಿದೆ ಎಂದರು.ಈ ಸಂದರ್ಭದಲ್ಲಿ ನಾಗರಾಜ ಆನವೇರಿ, ಶಿವಪುತ್ರಪ್ಪ ಅಗಡಿ, ಶಿವಕುಮಾರ ಪಾಟೀಲ, ಲಕ್ಷ್ಮೀ ಜಿಂಗಾಡೆ, ಪ್ರಶಾಂತ ಹೊಸ್ಮನಿ, ರವಿ ಹೊಸ್ಮನಿ, ಮಾರುತಿ ಲಮಾಣಿ, ಮಹರುದ್ರಪ್ಪ ಯತ್ನಳ್ಳಿ, ಪ್ರಕಾಶ ಲಮಾಣಿ, ಹನುಮಂತ ಲಮಾಣಿ, ಸಿದ್ದಪ್ಪ ರಾವಣ್ಣನವರ, ಹೊನ್ನಪ್ಪನವರ ಇತರರಿದ್ದರು.