ದೇವಾಲಯಗಳು ಮನುಷ್ಯನ ಬದುಕಿಗೆ ನೆಮ್ಮದಿ ಕರುಣಿಸುತ್ತವೆ

| Published : Mar 07 2025, 12:48 AM IST

ಸಾರಾಂಶ

ಸನಾತನ ಧರ್ಮ, ಸಂಸ್ಕೃತಿಯ ಪ್ರತೀಕವಾದ ಮಠಮಾನ್ಯಗಳು ಹಾಗೂ ಧಾರ್ಮಿಕ ಕೇಂದ್ರಗಳಾದ ದೇವಾಲಯಗಳು ಮನುಷ್ಯನ ಬದುಕಿಗೆ ಸುಖ, ಶಾಂತಿ, ನೆಮ್ಮದಿಯನ್ನು ಕರುಣಿಸುವ ಶ್ರದ್ಧಾಕೇಂದ್ರಗಳಾಗಿವೆ ಎಂದು ಶ್ರೀ ಕ್ಷೇತ್ರ ಬೆಳಗೂರು, ಮಾರುತಿ ಪೀಠಾಧಿಪತಿಗಳಾದ ವಿಜಯ ಮಾರುತಿ ಶರ್ಮಾ ಗುರುಗಳು ತಿಳಿಸಿದರು. ಪೂಜೆ, ಪುನಸ್ಕಾರಗಳ ಜತೆಗೆ ಪಂಚಭೂತಗಳಲ್ಲಿ ದೈವೀ ಸಾಕ್ಷಾತ್ಕಾರ ಕಂಡುಕೊಂಡಿರುವುದು ನಮ್ಮೆಲ್ಲರ ಸೌಭಾಗ್ಯವೆಂದರೆ ತಪ್ಪಾಗಲಾರದು. ಪಾಲಕರು ಹಾಗೂ ಗುರುಹಿರಿಯರು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡುವ ಮೂಲಕ ಭವಿಷ್ಯ ರೂಪಿಸುವ ಹೊಣೆಗಾರಿಕೆ ಪ್ರದರ್ಶಿಸಬೇಕು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಸನಾತನ ಧರ್ಮ, ಸಂಸ್ಕೃತಿಯ ಪ್ರತೀಕವಾದ ಮಠಮಾನ್ಯಗಳು ಹಾಗೂ ಧಾರ್ಮಿಕ ಕೇಂದ್ರಗಳಾದ ದೇವಾಲಯಗಳು ಮನುಷ್ಯನ ಬದುಕಿಗೆ ಸುಖ, ಶಾಂತಿ, ನೆಮ್ಮದಿಯನ್ನು ಕರುಣಿಸುವ ಶ್ರದ್ಧಾಕೇಂದ್ರಗಳಾಗಿವೆ ಎಂದು ಶ್ರೀ ಕ್ಷೇತ್ರ ಬೆಳಗೂರು, ಮಾರುತಿ ಪೀಠಾಧಿಪತಿಗಳಾದ ವಿಜಯ ಮಾರುತಿ ಶರ್ಮಾ ಗುರುಗಳು ತಿಳಿಸಿದರು.

ತಾಲೂಕಿನ ಬಾಣಾವರ ಹೋಬಳಿ ಕೆಂಪುಸಾಗರ ಗ್ರಾಮದಲ್ಲಿ ಪುನರ್ ನಿರ್ಮಿತವಾದ ಶ್ರೀ ಆಂಜನೇಯ ಸ್ವಾಮಿ ನೂತನ ದೇವಸ್ಥಾನದ ಪ್ರಾರಂಭೋತ್ಸವ ಹಾಗೂ ಶ್ರೀ ಆಂಜನೇಯ ಸ್ವಾಮಿ ಅವರ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು. ದೇವರು, ಧರ್ಮ, ತಂದೆ ತಾಯಿ, ಗುರು ಹಿರಿಯರು ಎನ್ನುವಂತಹ ಪೂಜ್ಯಭಾವನೆಗಳಲ್ಲಿ ಉತ್ತಮ ಸಂಸ್ಕಾರವನ್ನು ಪಡೆದು ಜೀವನದ ಸಾರ್ಥಕತೆಯನ್ನ ನಾವುಗಳು ಕಾಣುತ್ತೀದ್ದೇವೆ, ಆದರೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ನಂಬಿರುವ ಜನರು ಸಕಲ ವೈಭೋಗದ ಶ್ರೀಮಂತಿಕೆಯನ್ನು ತೊರೆದು ಸುಖ, ಶಾಂತಿ ನೆಮ್ಮದಿಯ ಜೀವನಕ್ಕಾಗಿ ಭಾರತದ ಕಡೆಗೆ ಬರುತ್ತಿದ್ದು, ಹರೇ ರಾಮ ಹರೇ ಕೃಷ್ಣ ಎಂದು ಭಗವಂತನ ಧ್ಯಾನವನ್ನು ಮಾಡುತ್ತಿರುವುದು ಕಾಣುತ್ತಿದ್ದೇವೆ. ದೇವನೊಬ್ಬ ನಾಮ ಹಲವು ಎನ್ನುವ ವಿಶಾಲ ಹಾಗೂ ವೈವಿದ್ಯಮಯ ಸಂಸ್ಕೃತಿಯಲ್ಲಿ ಎಕತೆಯನ್ನು ಕಾಣುತ್ತಿರುವ ನಾವುಗಳಿಗೆ ರಾಮಾಯಣ ಹಾಗೂ ಮಹಾಭಾರತ ಮಹಾನ್ ಗ್ರಂಥಗಳೇ ಪ್ರೇರಣೆ ನೀಡುತ್ತಿದ್ದು, ಧರ್ಮದ ಆಚರಣೆಯಿಂದಲೇ ಮನುಷ್ಯ ತನ್ನ ಬದುಕಿನಲ್ಲಿ ಸುಖ,ಶಾಂತಿ ನೆಮ್ಮದಿಯನ್ನು ಕಾಣಲು ಸಾಧ್ಯ ಎನ್ನುವ ಇತಿಹಾಸವನ್ನು ಕಂಡಿರುವ ನಾವುಗಳು ದೇವಾಲಯಗಳ ಜೀರ್ಣೋದ್ಧಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ ಎಂದರು.

ಭಾರತೀಯ ಹಿಂದು ಸನಾತನ ಸಂಸ್ಕೃತಿ ಜಗತ್ತಿಗೆ ಮಾದರಿಯಾಗಿದೆ ಹಿಂದು ಎನ್ನುವುದು ಕೇವಲ ಧರ್ಮವಲ್ಲ ಬದಲಾಗಿ ಅದೊಂದು ಭವ್ಯ ಸಂಸ್ಕೃತಿ ಎನ್ನುವ ಭಾವನೆ ಜನರಲ್ಲಿ ಮನೆ ಮಾಡಿದೆ. ಇಲ್ಲಿನ ಸಂಪ್ರದಾಯ, ಆಚರಣೆಗಳ ಕಾರಣದಿಂದಾಗಿಯೇ ಪಾಶ್ಚಾತ್ಯರು ಕೂಡ ನಮ್ಮತ್ತ ತಿರುಗಿ ನೋಡವಂತಾಗಿದೆ. ದೇವರು ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಜಾತಿ ಬೇಧವಿಲ್ಲ ಎನ್ನುವುದನ್ನು ಮಹಾಕವಿ ಹರಿಹರ ಮಾದಾರ ಚನ್ನಯ್ಯ, ಕೋಳೂರು ಕೊಡಗೂಸಿನ ರಗಳೆಯಲ್ಲಿ ಸಾಬೀತಾಗಿದೆ. ಪೂಜೆ, ಪುನಸ್ಕಾರಗಳ ಜತೆಗೆ ಪಂಚಭೂತಗಳಲ್ಲಿ ದೈವೀ ಸಾಕ್ಷಾತ್ಕಾರ ಕಂಡುಕೊಂಡಿರುವುದು ನಮ್ಮೆಲ್ಲರ ಸೌಭಾಗ್ಯವೆಂದರೆ ತಪ್ಪಾಗಲಾರದು. ಪಾಲಕರು ಹಾಗೂ ಗುರುಹಿರಿಯರು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡುವ ಮೂಲಕ ಭವಿಷ್ಯ ರೂಪಿಸುವ ಹೊಣೆಗಾರಿಕೆ ಪ್ರದರ್ಶಿಸಬೇಕು ಎಂದು ಹೇಳಿದರು.

ಹಾಸನದ ಶ್ರೀ ಕೃಷ್ಣಮೂರ್ತಿ ಗಣಪಟಿಗಳು ಮತ್ತು ವೃಂದದವರಿಂದ ಪ್ರತಿಷ್ಠಾಪನಾ ಮಹೋತ್ಸವ ಹೋಮಗಳನ್ನು ನೆರವೇರಿಸಲಾಯಿತು. ಸುತ್ತಮುತ್ತಲಿನ ಗ್ರಾಮಗಳ ಗ್ರಾಮ ದೇವತೆಗಳ ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಶ್ರೀ ಆಂಜನೇಯ ಸ್ವಾಮಿ ಅವರ ಪ್ರತಿಷ್ಠಾಪನಾ ಮಹೋತ್ಸವದ ಹೋಮಗಳನ್ನು ನೆರವೇರಿಸಿ, ಶ್ರೀ ಕ್ಷೇತ್ರ ಬೆಳಗೂರು, ಮಾರುತಿ ಪೀಠಾಧಿಪತಿಗಳಾದ ವಿಜಯ ಮಾರುತಿ ಶರ್ಮಾ ಗುರುಗಳ ಪೂರ್ಣ ಆಶೀರ್ವಾದಗಳೊಂದಿಗೆ ಪೂರ್ಣಹುತಿ ನೆರವೇರಿಸಿ, ಕಳಸ ಸ್ಥಾಪನೆ, ದೇವಸ್ಥಾನ ಪ್ರವೇಶ ಹಾಗೂ ಶ್ರೀ ಆಂಜನೇಯ ಸ್ವಾಮಿಗೆ ಮಂಗಳಾರತಿ ನೆರವೇರಿಸಿ ಕೆಂಪುಸಾಗರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತಾದಿಗಳಿಗೆ ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು.