ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ದೇಗುಲ, ದಾಸೋಹ ಭವನಗಳು ನೆಮ್ಮದಿಯ ತಾಣಗಳು. ಇವುಗಳನ್ನು ಜೋಪಾನ ಮಾಡುವುದು ಎಲ್ಲರ ಕರ್ತವ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಹೇಳಿದರು.ಗದ್ದೆಹೊಸೂರು ಗ್ರಾಮದ ಕಾಲ ಭೈರವೇಶ್ವರ ದೇಗುಲ ಜೀರ್ಣೋದ್ಧಾರಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ 1 ಲಕ್ಷ ರು.ಗಳ ಸಹಾಯಧನದ ಚೆಕ್ ಟ್ರಸ್ಟಿಗಳಿಗೆ ವಿತರಿಸಿ ಮಾತನಾಡಿದರು.
ಗ್ರಾಮದಲ್ಲಿ ನಡೆಯುತ್ತಿರುವ ಧಾರ್ಮಿಕ ಸೇವಾ ಕೈಂಕರ್ಯ ಎಲ್ಲರಿಗೂ ಒಳಿತು ಮಾಡಲಿ. ದೇಗುಲಗಳು ಗ್ರಾಮದ ಶಾಂತಿ, ನೆಮ್ಮದಿಗೆ ಸಹಕಾರಿಯಾಗಿ ಎಲ್ಲರನ್ನು ಒಗ್ಗೂಡಿಸುವ ತಾಣವಾಗಿದೆ. ನಿಮ್ಮೊಂದಿಗೆ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಸದಾ ಇದ್ದಾರೆ ಎಂದರು.ತಾಲೂಕು ಯೋಜನಾಧಿಕಾರಿ ಎಂ.ವೀರೇಶಪ್ಪ ಮಾತನಾಡಿ, ಊರಿನ ಅಭಿವೃದ್ಧಿ, ಕೆರೆಕಟ್ಟೆ ಉಳಿಸಲು ಅಭಿಯಾನವನ್ನು ಪೂಜ್ಯರು ಹಮ್ಮಿಕೊಂಡಿದ್ದಾರೆ. ಗ್ರಾಮ ಸ್ವಚ್ಛತೆ, ದೇಗುಲ ನೈರ್ಮಲ್ಯೀಕರಣಕ್ಕೆ ಸಹಕರಿಸಬೇಕು. ಹೈನುಗಾರಿಕೆ, ಗುಡಿ ಕೈಗಾರಿಕೆಗೆ ಯುವಕರು ಮುಂದಾಗಬೇಕು ಎಂದು ತಿಳಿಸಿದರು.ಈ ವೇಳೆ ಸಂಸ್ಥೆ ಮೇಲ್ವಿಚಾರಕಿರೇಣುಕಾ, ಸೇವಾ ಪ್ರತಿನಿಧಿ ಶೃತಿ, ಗ್ರಾಮ ಮುಖಂಡರು, ಸಮಿತಿ ಸದಸ್ಯರು ಭಾಗವಹಿಸಿದ್ದರು.
ಸಾಮೂಹಿಕ ಕುಂಕುಮಾರ್ಚನೆ, ಪೂಜೆಶ್ರೀರಂಗಪಟ್ಟಣ:
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿ ವ್ಯಾಪ್ತಿಯ ಗಂಜಾಂನ ಶ್ರೀನಿಮಿಷಾಂಬ ದೇವಿ ಸನ್ನಿಧಿಯಲ್ಲಿ ಸಾಮೂಹಿಕ ಕುಂಕುಮಾರ್ಚನೆ, ಪೂಜೆ ನೆರವೇರಿತು.ಸಂಘದ ಜಿಲ್ಲಾ ನಿರ್ದೇಶಕ ಮುರಳೀಧರ್ ಸಹಸ್ರನಾಮ ಕುಂಕುಮಾರ್ಚನೆಯಲ್ಲಿ ಮಾತನಾಡಿ, ಕುಂಕುಮವನ್ನು ಸ್ತ್ರೀಯರು ಹಣೆಗೆ ಸಿಂಧೂರವಾಗಿ ಹಚ್ಚಿಕೊಳ್ಳುವುದು ನಮ್ಮ ಸಂಸ್ಕೃತಿ ಬಿಂಬಿಸುವ ಸಂಕೇತ. ಕುಂಕುಮ ಮಹಿಳೆಯರಿಗೆ ಸೌಂದರ್ಯ ವರ್ಧಕವೂ ಹಾಗೂ ಎದುರು ಬರುವ ವಿಕೃತ ಮನಸ್ಸಿನವರಿಗೆ ಎಚ್ಚರಿಕೆ ನೀಡುವ ಸಂಕೇತವೂ ಆಗಿದೆ. ಇದರಿಂದ ಮಹಿಳೆಯರು ಪ್ರತಿ ದಿನ ಕುಂಕುಮದ ಸಿಂಧೂರವನ್ನು ಹಣೆಗೆ ಹಚ್ಚಿಕೊಳ್ಳುವುದನ್ನು ಮರೆಯಬಾರದು ಎಂದರು.
ಕುಂಕುಮಾರ್ಚನೆಯಲ್ಲಿ ಯೋಜನಾಧಿಕಾರಿ ಪ್ರಭಾ ಶೆಟ್ಟಿ, ದೇವಾಲಯದ ಅರ್ಚಕ ಸೂರ್ಯನಾರಾಯಣ ಭಟ್, ಯೋಜನಾಧಿಕಾರಿ ಗಣಪತಿ ಭಟ್ ಮಾತನಾಡಿದರು. ಮೇಲ್ವಿಚಾರಕರಾದ ಪವನ್, ಕಾರ್ತಿಕ್, ಶಕುಂತಲಾ ಗೌಡ ಹಾಗೂ ಸೇವಾ ಪ್ರತಿನಿಧಿಗಳು, ಮಹಿಳಾ ಸಂಘದ ಸದಸ್ಯರು ಭಾಗವಹಿಸಿದ್ದರು.