ಕನ್ನಡಪ್ರಭ ವಾರ್ತೆ ಹಾಸನ

ಕೇತುಗ್ರಸ್ತ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಜಿಲ್ಲೆಯ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇವಾಲಯ, ಹಳೇಬೀಡಿನ ಹೊಯ್ಸಳೇಶ್ವರ ದೇಗುಲ ಸೇರಿದಂತೆ ಪ್ರಮುಖ ಹಾಗೂ ಎಲ್ಲಾ ದೇವಸ್ಥಾನಗಳಲ್ಲಿ ಗರ್ಭಗುಡಿಗಳನ್ನು ಬಂದ್‌ ಮಾಡಲಾಗಿತ್ತು. ಹೊಳೆನರಸೀಪುರದ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ಮಂಗಳವಾರ ಬೆಳಗ್ಗೆ ನಡೆಯಿತಾದರೂ ಮಧ್ಯಾಹ್ನ 12ರಿಂದ ಸಂಜೆ 6ರವರೆಗೆ ದೇವರ ದರ್ಶನ ಬಂದ್‌ ಮಾಡಲಾಗಿತ್ತು.ಬೇಲೂರಿನ ಚನ್ನಕೇಶವ ದೇಗುಲದ ಗರ್ಭಗುಡಿ ಬಾಗಿಲು ಬಂದ್ ಮಾಡಿದ್ದು ಮಂಗಳವಾರ ರಾತ್ರಿ ಶುದ್ಧಿ ಕಾರ್ಯದ ಬಳಿಕ ಬುಧವಾರ ಬೆಳಗ್ಗೆಯಿಂದ ದರ್ಶನಕ್ಕೆ ಅವಕಾಶ ಅವಕಾಶ ಕಲ್ಪಿಸಲಾಗಿದೆ. ಮಂಗಳವಾರ ಸಂಭವಿಸಿದ ಕೇತುಗ್ರಸ್ತ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಐತಿಹಾಸಿಕ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ವಿಶೇಷ ಧಾರ್ಮಿಕ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಗ್ರಹಣದ ಸೂಕ್ಷ್ಮ ಧಾರ್ಮಿಕ ನಿಯಮಾವಳಿಗಳ ಅನ್ವಯ, ದೇವಾಲಯದ ಗರ್ಭಗುಡಿ ಬಾಗಿಲನ್ನು ಅರ್ಚಕರು ಪೂಜೆ ಸಲ್ಲಿಸಿದ ನಂತರ ಮುಚ್ಚಲಾಗಿತ್ತು. ಹಾಗೆಯೇ ಬೇಲೂರಿನ ಶ್ರೀ ಹೊಯ್ಸಳೇಶ್ವರ ದೇಗುಲ, ಹಾರನಹಳ್ಳಿಯ ದೇಗುಲ, ಅರಸೀಕೆರೆಯ ಶಿವಾಲಯ ಸೇರಿದಂತೆ ಜಿಲ್ಲೆಯ ಪ್ರಮುಖ ದೇಗುಲಗಳಲ್ಲಿ ಗರ್ಭಗುಡಿ ಬಂದ್ ಮಾಡಲಾಗಿತ್ತು.ಗ್ರಹಣ ಕಾಲದಲ್ಲಿ ದೇವರ ಮೂರ್ತಿಗೆ ಯಾವುದೇ ವಿಧದ ಪೂಜೆ, ನೈವೇದ್ಯ ಅಥವಾ ಸೇವೆಗಳು ನಡೆಯದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ದೇವಾಲಯದ ಗರ್ಭಗುಡಿ ಮಾತ್ರ ಬಂದ್ ಆಗಿದ್ದು, ಪ್ರವಾಸಿಗರು ಹಾಗೂ ಭಕ್ತರು ದೇವಾಲಯದ ಶಿಲ್ಪ ವೈಭವವನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು. ಗ್ರಹಣ ಮುಗಿದ ಬಳಿಕ ರಾತ್ರಿ ಸುಮಾರು ಏಳು ಗಂಟೆಯ ನಂತರ ದೇವಾಲಯದಲ್ಲಿ ಶುದ್ಧಿಕಾರ್ಯಗಳು ಆರಂಭವಾಯಿತು. ಶಾಸ್ತ್ರೋಕ್ತ ವಿಧಾನದಲ್ಲಿ ತಿಥಿ ಪುಣ್ಯಾಹವಾಚನ, ಆಲಯ ಅರ್ಚನೆ, ವಿಶೇಷ ಅಭಿಷೇಕ ಹಾಗೂ ಸಂಪ್ರೋಕ್ಷಣೆಯಂತಹ ವಿಧಿವಿಧಾನಗಳು ನೆರವೇರಿಸಲ್ಪಟ್ಟವು. ಬಳಿಕ ಮಹಾನೈವೇದ್ಯ ಸಮರ್ಪಣೆ ಮಾಡಲಾಯಿತು.ಚನ್ನಕೇಶವ ದೇಗುಲದ ಪ್ರಧಾನ ಅರ್ಚಕರಾದ ಶ್ರೀನಿವಾಸ್ ಭಟ್ ಹಾಗೂ ನರಸಿಂಹ ಪ್ರಿಯ ಭಟ್ ಮಾತನಾಡಿ, “ಗ್ರಹಣ ಮುಗಿದ ನಂತರ ದೇಗುಲದ ಒಳಾಂಗಣವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಪುಣ್ಯ ಕಾರ್ಯಗಳನ್ನು ನೆರವೇರಿಸಲಾಗುವುದು. ಶುದ್ಧಿಕಾರ್ಯಗಳು ಪೂರ್ಣಗೊಂಡ ಬಳಿಕ ಬುಧವಾರ ಬೆಳಿಗ್ಗೆಯಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ” ಎಂದು ತಿಳಿಸಿದ್ದಾರೆ. ಗ್ರಹಣದ ಸಂದರ್ಭಗಳಲ್ಲಿ ದೇವಾಲಯಗಳಲ್ಲಿ ಅನುಸರಿಸಲಾಗುವ ಈ ಕ್ರಮಗಳು ಆಚಾರವಿಚಾರಗಳ ಭಾಗವಾಗಿದ್ದು, ಸಂಪ್ರದಾಯದ ಪ್ರಕಾರ ದೈವ ಸಾನ್ನಿಧ್ಯವನ್ನು ಶುದ್ಧವಾಗಿರಿಸುವ ಉದ್ದೇಶದಿಂದ ಪಾಲಿಸಲಾಗುತ್ತದೆ ಎಂದರು.