- ತಲೆ ಮೇಲೆ ಹರಿದ ಟೆಂಪೋ । ಸ್ಥಳದಲ್ಲಿಯೇ ಸಾವು

---

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಟೆಂಪೋವೊಂದು ಬೈಕ್‌ಗೆ ಡಿಕ್ಕಿ ಹೊಡೆದು ಮಹಿಳೆಯ ತಲೆ ಮೇಲೆ ಹತ್ತಿದ ಆಘಾತಕಾರಿ ಘಟನೆಯು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಮೈಸೂರು- ಊಟಿ ಹೆದ್ದಾರಿಯ ಅರೇಪುರ ಗೇಟ್‌ ಬಳಿ ನಡೆದಿದೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕರಳಾಪುರ ಗ್ರಾಮದ ಶಿವಮ್ಮ (44) ಮೃತರು. ತಮ್ಮ ಪತಿ ಮಹದೇವ ಶೆಟ್ಟಿ ಮತ್ತು ಪುತ್ರರಾದ ಶ್ರೇಯಷ್‌, ಸತ್ಯಾರ್ಥ್‌ ಜೊತೆಗೆ ಬೈಕ್‌ನಲ್ಲಿ ನಂಜನಗೂಡಿನ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಹಿಂಬದಿಯಿಂದ ಐಷರ್‌ ಟೆಂಪೋ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮಹಿಳೆ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಆಕೆಯ ತಲೆ ಮೇಲೆ ಟೆಂಪೋ ಹರಿದಿದೆ. ಪರಿಣಾಮ ಶಿವಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಆಕೆಯ ಪತಿ ಮತ್ತು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳು ಸಂಭವಿಸಿದೆ. ಅವರಿಗೆ ಬೇಗೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.


ಘಟನೆ ಸಂಬಂಧ ಅಪಘಾತಕ್ಕೆ ಕಾರಣವಾದ ಟೆಂಪೋ ಮತ್ತು ಬೈಕ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.

ತಲೆಯಲ್ಲಿ ಹೆಲ್ಮೆಟ್‌ ಇಲ್ಲ:ಅಪಘಾತದ ವೇಳೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಯಾರ ತಲೆಯಲ್ಲಿಯೂ ಹೆಲ್ಮೆಟ್‌ ಇರಲಿಲ್ಲ. ಒಂದು ವೇಳೆ ಹೆಲ್ಮೆಟ್‌ ಧರಿಸಿದ್ದರೆ, ಸಾವು ತಡೆಯಬಹುದಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.