ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಗೆ ಅಲ್ಪವಿರಾಮ

| Published : Jun 23 2024, 02:05 AM IST

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಕಳೆದ ಬುಧವಾರ ಕಲ್ಲಡ್ಕಕ್ಕೆ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಾಗೂ ಅದರಿಂದಾಗುವ ಸಾರ್ವಜನಿಕ ತೊಂದರೆಗಳ ಪರಿಶೀಲನೆ ನಡೆಸಿದ್ದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ವಾರದ ಹಿಂದೆ ಕಲ್ಲಡ್ಕಕ್ಕೆ ಭೇಟಿ ನೀಡಿ ಹೆದ್ದಾರಿ ಅವ್ಯವಸ್ಥೆ ಕುರಿತಾಗಿ ನೀಡಿದ್ದ ಪರಿಹಾರ ಸೂತ್ರಗಳನ್ನು ಕಾಮಗಾರಿ ಗುತ್ತಿಗೆ ಸಂಸ್ಥೆ ಹಂತಹಂತವಾಗಿ ಅನುಷ್ಠಾನಗೊಳಿಸುತ್ತಿದೆ. ಪಾದಚಾರಿಗಳಿಗೆ ರಸ್ತೆ ದಾಟಲು ಆಯ್ದ ಸ್ಥಳಗಳಲ್ಲಿ ಎತ್ತರದ ಕಾಲುದಾರಿ ಮಾದರಿಯಲ್ಲಿ ರಸ್ತೆ ನಿರ್ಮಿಸಬೇಕೆಂಬ ಸೂಚನೆಯಂತೆ ಕಾಮಗಾರಿ ಭರದಿಂದ ನಡಯುತ್ತಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಕಳೆದ ಬುಧವಾರ ಕಲ್ಲಡ್ಕಕ್ಕೆ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಾಗೂ ಅದರಿಂದಾಗುವ ಸಾರ್ವಜನಿಕ ತೊಂದರೆಗಳ ಪರಿಶೀಲನೆ ನಡೆಸಿದ್ದರು.

ಈ ಸಂದರ್ಭ ಉಪಸ್ಥಿತರಿದ್ದ ತಹಸೀಲ್ದಾರ್ ಅರ್ಚನಾ ಭಟ್‌ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರ ಸಹಿತ ನಾನಾ ಅಧಿಕಾರಿಗಳು, ಎಂಜಿನಿಯರ್‌ಗಳೊಂದಿಗೆ ಮಾತುಕತೆ ನಡೆಸಿ, ಸಾರ್ವಜನಿಕರಿಗೆ ಅನುಕೂಲವಾಗುವ ಕೆಲವು ಮಾರ್ಪಾಡುಗಳನ್ನು ಹಾಗೂ ಮೂರು ಮೂರು ಪರಿಹಾರ ಸೂತ್ರಗಳನ್ನು ಸೂಚಿಸಿ, ತಕ್ಷಣದಿಂದಲೇ ಆರಂಭಿಸುವಂತೆ ನಿರ್ದೇಶಿಸಿದ್ದರು.

ಪ್ರಮುಖವಾಗಿ ನೀರು ಸರಾಗವಾಗಿ ಹರಿಯಲು ಚರಂಡಿ ನಿರ್ಮಾಣ, ಪಾದಚಾರಿಗಳು ದಾಟಲು ನಾಲ್ಕು ಕಡೆ ಕಾಲುದಾರಿ ನಿರ್ಮಾಣ, ತ್ಯಾಜ್ಯಗಳನ್ನು ತೆಗೆಯುವುದು ಹಾಗೂ ಹೆದ್ದಾರಿ ಸರ್ವೀಸ್ ರಸ್ತೆ ಸಮತಟ್ಟುಗೊಳಿಸಲು ನಿರಂತರವಾಗಿ ವೆಟ್ ಮಿಕ್ಸ್ ಹಾಕಲು ಸೂಚನೆ ನೀಡಿದ್ದರು. ಇದೀಗ ಈ ಕಾಮಗಾರಿಗಳು ಆರಂಭಗೊಂಡಿವೆ. ಪಾದಚಾರಿಗಳು ದಾಟಲು ನಾಲ್ಕು ಕಡೆ ಜಾಗ ಗುರುತಿಸಿ ಕೆಲಸ ಆರಂಭಿಸಲಾಗಿದೆ.