ಸಾರಾಂಶ
ಕಾಂಗ್ರೆಸ್‌ನ ಮಾಜಿ ಸಚಿವ ವಿನಯಕುಮಾರ್ ಸೊರಕೆ ಶುಕ್ರವಾರ ತಮ್ಮ ಪಕ್ಷದ ನಿಯೋಗದೊಂದಿಗೆ ಬೆಂಗಳೂರಿಗೆ ತೆರಳಿ ಜಾರಕಿಹೊಳಿ ಅವರಿಗೆ ಸ್ಥಳೀಯ ಹೋರಾಟ, ಪರಿಸ್ಥಿತಿಯನ್ನು ಮನವರಿಕೆ ಮಾಡಿ, ಟೋಲ್ ಗೇಟ್ ರದ್ದುಗೊಳಿಸುವಂತೆ ಮನವಿ ಮಾಡಿದ್ದರು.
ಕನ್ನಡಪ್ರಭ ವಾರ್ತೆ ಪಡುಬಿದ್ರಿ
ಇಲ್ಲಿನ ಪಡುಬಿದ್ರಿ- ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಲುದ್ದೇಶಿಸಿರುವ ಟೋಲ್ ಗೇಟ್‌ಗೆ ನೀಡಿರುವ ಮಂಜೂರಾತಿಯನ್ನು ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಾತ್ಕಾಲಿಕವಾಗಿ ತಡೆ ಹಿಡಿದಿದ್ದಾರೆ.ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೆಜಮಾಡಿ ಟೋಲ್ ಗೇಟ್‌ನಿಂದ ಕೇವಲ 4 ಕಿ.ಮೀ. ಅಂತರದಲ್ಲಿ ರಾಜ್ಯ ಹೆದ್ದಾರಿಯ ಕಂಚಿನಡ್ಕ ಎಂಬಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಈ ಟೋಲ್ ಗೇಟ್ ಸ್ಥಾಪನೆಗೆ ರಾಜ್ಯ ಸರ್ಕಾರ ಮಂಜೂರಾತಿ ನೀಡಿತ್ತು. ಇದರ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು. ಇಂದು ಸರ್ಕಾರ ತಕ್ಷಣ ಈ ಟೋಲ್ ಗೇಟ್ ರದ್ದುಗೊಳಿಸಬೇಕು ಎಂದು ಕಂಚಿನಡ್ಕದಲ್ಲಿ 10 ಸಾವಿರಕ್ಕೂ ಹೆಚ್ಚು ಜನರ ಭಾರಿ ಪ್ರತಿಭಟನೆ ನಡೆಯಲಿದೆ.
ಇದಕ್ಕೆ ಮೊದಲು ಕಾಂಗ್ರೆಸ್‌ನ ಮಾಜಿ ಸಚಿವ ವಿನಯಕುಮಾರ್ ಸೊರಕೆ ಬುಧವಾರ ತಮ್ಮ ಪಕ್ಷದ ಸಾವಿರಾರು ಕಾರ್ಯಕರ್ತರನ್ನು ಸೇರಿಸಿ ಪ್ರತಿಭಟನೆ ನಡೆಸಿ, ಈ ಟೋಲ್‌ಗೆ ಪರವಾನಗಿ ನೀಡಿದ್ದು ಹಿಂದಿನ ಬಿಜೆಪಿ ಸರ್ಕಾರ ಎಂದು ಆರೋಪಿಸಿದ್ದರು. ನಂತರ ಶುಕ್ರವಾರ ತಮ್ಮ ಪಕ್ಷದ ನಿಯೋಗದೊಂದಿಗೆ ಬೆಂಗಳೂರಿಗೆ ತೆರಳಿ ಜಾರಕಿಹೊಳಿ ಅವರಿಗೆ ಸ್ಥಳೀಯ ಹೋರಾಟ, ಪರಿಸ್ಥಿತಿಯನ್ನು ಮನವರಿಕೆ ಮಾಡಿ, ಟೋಲ್ ಗೇಟ್ ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ.ಆದರೆ ಲೋಕೋಪಯೋಗಿ ಸಚಿವರು ಟೋಲ್ ಗೇಟ್ ಮಂಜೂರಾತಿಯನ್ನು ರದ್ದುಗೊಳಿಸದೆ, ಮುಂದಿನ ತೀರ್ಮಾನ ತೆಗೆದುಕೊಳ್ಳುವ ವರೆಗೆ ತಾತ್ಕಾಲಿಕವಾಗಿ, ಟೋಲ್ ಗೇಟ್‌ಗೆ ನೀಡಿರುವ ಕಾರ್ಯಾದೇಶವನ್ನು ತಡೆ ಹಿಡಿಯಲಾಗಿದೆ ಆದೇಶ ನೀಡಿದ್ದಾರೆ.
ಇದಕ್ಕೆ ಸೊರಕೆ ಮತ್ತು ಕಾಂಗ್ರೆಸ್ ನಿಯೋಗ ಇದು ತಮ್ಮ ಹೋರಾಟಕ್ಕೆ ಸಿಕ್ಕಿದ ಮೊದಲ ಹಂತದ ಜಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.