ಪಂಪ್ಡ್ ಸ್ಟೋರೇಜ್ ಯೋಜನೆಗೆ ತಾತ್ಕಾಲಿಕ ತಡೆ: ನಿವೃತ್ತ ನ್ಯಾ.ಗೋಪಾಲಗೌಡ

| Published : Nov 12 2025, 01:30 AM IST

ಪಂಪ್ಡ್ ಸ್ಟೋರೇಜ್ ಯೋಜನೆಗೆ ತಾತ್ಕಾಲಿಕ ತಡೆ: ನಿವೃತ್ತ ನ್ಯಾ.ಗೋಪಾಲಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆಯ ಅನುಮತಿ ಇಲ್ಲದೆಯೇ ಅನುಷ್ಠಾನವಾಗುತ್ತಿರುವ ರಾಜ್ಯ ಸರ್ಕಾರದ ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ಸರ್ಕಾರದ ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ತಾತ್ಕಾಲಿಕ ತಡೆ ನೀಡಿದೆ ಎಂದು ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆಯ ಅನುಮತಿ ಇಲ್ಲದೆಯೇ ಅನುಷ್ಠಾನವಾಗುತ್ತಿರುವ ರಾಜ್ಯ ಸರ್ಕಾರದ ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ಸರ್ಕಾರದ ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ತಾತ್ಕಾಲಿಕ ತಡೆ ನೀಡಿದೆ ಎಂದು ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡರು ತಿಳಿಸಿದರು.

ನಗರದಲ್ಲಿ ಶರಾವತಿ ಕಣಿವೆ ಉಳಿಸಿ-ಕರ್ನಾಟಕ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯೂ "ಪಶ್ಚಿಮ ಘಟ್ಟಗಳಲ್ಲಿನ ಜೀವವೈವಿಧ್ಯಕ್ಕೆ ಅಗಾಧ ಹಾನಿ " ಉಂಟುಮಾಡಬಹುದು ಎಂದು ಅರಣ್ಯ ಸಲಹಾ ಸಮಿತಿ ಕಳವಳ ವ್ಯಕ್ತಪಡಿಸಿದೆ. ಈ ಯೋಜನಾ ಸ್ಥಳವು ಸಿಂಗಳಿಕ, ಹುಲಿ, ಚಿರತೆ, ಕರಡಿ, ಕಾಡು ನಾಯಿಗಳು, ಕಾಳಿಂಗ ಸರ್ಪ, ಮಲಬಾರ್ ದೊಡ್ಡ ಅಳಿಲು ಮತ್ತು ಇತರ ಅಪರೂಪದ ಹಾಗೂ ಸ್ಥಳೀಯ ಪ್ರಭೇದಗಳಿಗೆ ನೆಲೆಯಾಗಿದೆ. ಶರಾವತಿ ಕಣಿವೆ ಅಭಯಾರಣ್ಯದಲ್ಲಿ ಸಿಂಗಳಿಕಗಳ ಆವಾಸ ಸ್ಥಾನದ ನಷ್ಟವು ಸಿಂಗಳಿಕಗಳ ಉಳಿವಿಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂದು ಎಚ್ಚರಿಸಿದೆ. ಈ ಹಿನ್ನಲೆ ತಾತ್ಕಾಲಿಕ ತಡೆ ನೀಡಿ ರಾಜ್ಯ ಸರ್ಕಾರದಿಂದ ವಿವರಣೆ ಬಯಸಿದೆ ಎಂದು ಮಾಹಿತಿ ನೀಡಿದರು.

ಅಭಿವೃದ್ಧಿ ಹೆಸರಿನಲ್ಲಿ ಜಾರಿಯಾಗುತ್ತಿರುವ ಜನವಿರೋಧಿ ಯೋಜನೆಗಳಿಗೆ ನಮ್ಮ ವಿರೋಧವಿದೆ. ಯೋಜನೆಯಿಂದ ಆಗುವ ಅನಾಹುತಗಳ ಬಗ್ಗೆ ಕೆಪಿಸಿಎಲ್ ಸಾರ್ವಜನಿಕರಿಗೆ ಸುಳ್ಳು ಮಾಹಿತಿಯನ್ನು ನೀಡುತ್ತಿದೆ. ಈ ಪ್ರದೇಶದ ಜನಜಾನುವಾರುಗಳಿಗೆ ಅಪಾಯ ತಂದೊಡ್ಡುತ್ತಿದೆ. ಜೀವವೈವಿಧ್ಯ, ವನ್ಯಜೀವಿಗಳಿಗೆ ಯಾವುದೇ ಹಾನಿ ಆಗುವುದಿಲ್ಲ ಎಂದು ರಾಜ್ಯ ಇಂಧನ ಸಚಿವ ಕೆ.ಜೆ. ಜಾರ್ಜ್ ಸುಳ್ಳು ಹೇಳಿಕೆ ನೀಡಿದ್ದಾರೆ. ಈ ಯೋಜನೆಯ ವಿವರಗಳನ್ನು ಸಾರ್ವಜನಿಕರಿಗೆ ಏಕೆ ನೀಡುತ್ತಿಲ್ಲ ಎಂದ ಖಾರವಾಗಿ ಪ್ರಶ್ನಿಸಿದರು.

ಮಾಜಿ ಲೋಕಾಯುಕ್ತ ನಿವೃತ್ತ ನ್ಯಾ.ಎನ್.ಸಂತೋಷ್ ಹೆಗ್ಡೆ ಮಾತನಾಡಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯು ಸಾರ್ವಜನಿಕ ಹಿತಾಸಕ್ತಿಯಿಂದ ಮಾಡಿದ ಯೋಜನೇ ಅಲ್ಲವೇ ಅಲ್ಲ ಎಂದು ಖಾರವಾಗಿ ಹೇಳಿದರು.

ರಾಜ್ಯ ಸರ್ಕಾರದ ಈ ಯೋಜನೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲ, ಈ ಯೋಜನೆಯ ಒಟ್ಟು ಮೊತ್ತ 10 ಸಾವಿರ ಕೋಟಿ ರುಪಾಯಿ.ಇಷ್ಟು ಮೊತ್ತದ ಯೋಜನೆಯಡಿಯಲ್ಲಿ ಅರಣ್ಯ ನಾಶ ಮಾಡಿ ಜನರಿಗೆ ವಿದ್ಯುತ್ ನೀಡುವ ಅವಶ್ಯಕತೆ ಇದಿಯಾ ಎಂದು ಜನರೇ ಯೋಚನೆ ಮಾಡಬೇಕಿದೆ ಎಂದರು.

1600 ಅಡಿ ಆಳ ಭೂಮಿ ಕೊರೆಯುವುದರಿಂದ ಆಗುವ ಅನಾಹುತಗಳ ಬಗ್ಗೆ ಸರ್ಕಾರ, ಕೆಪಿಸಿಎಲ್ ಯಾವುದೇ ಸ್ಪಷ್ಟ ಮಾಹಿತಿಯನ್ನು ನೀಡುತ್ತಿಲ್ಲ. ಈ ಯೋಜನೆಯ ಬದಲಿಗೆ ಪರ್ಯಾಯ ಯೋಜನೆಗಳಾದ ಸೋಲಾರ್, ಪವನಶಕ್ತಿ, ವಿದ್ಯುತ್ ಮೊದಲಾದ ಮೂಲಗಳಿಂದ ವಿದ್ಯುತ್ ಪಡೆದುಕೊಳ್ಳಬೇಕು ಎಂದರು.

ಮಾಜಿ ಸಚಿವ, ಪರಿಸರಕ್ಕಾಗಿ ನಾವು ಸಂಘಟನೆಯ ರಾಜ್ಯಾಧ್ಯಕ್ಷ ಎ.ಟಿ. ರಾಮಸ್ವಾಮಿ ಮಾತನಾಡಿ, ಪರಿಸರಕ್ಕೆ ಮಾರಕವಾಗಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಸ್ಥಗಿತಗೊಳಿಸಿ ಎಂದು ಆಗ್ರಹಿಸಿದರು.

ಜಗತ್ತಿನ 8 ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮಘಟ್ಟದಲ್ಲಿ 40ಕ್ಕೂ ಹೆಚ್ಚು ನದಿಗಳು ಜನ್ಮತಾಳಿ ಈ ಭಾಗ ಹಸಿರಿನಿಂದ ಕಂಗೊಳಿಸುತ್ತಿದೆ. ಈ ಪ್ರದೇಶವನ್ನು ಮಳೆಯಕಾಡು ಎಂದೇ ಕರೆಯಲಾಗುತ್ತದೆ. ಪರಿಸರ ವಿರೋಧಿ ಯೋಜನೆಗಳಿಂದ ನೈಜಕಾಡು ಕಡಿಮೆಯಾಗುತ್ತದೆ ಅಲ್ಲದೆ, ಇಲ್ಲಿನ ನದಿನೀರಿನ ಹರಿವು ಕಡಿಮೆಯಾಗುತ್ತಿದೆ. ಇದಕ್ಕೆ ಪಂಪ್ಡ್ ಸ್ಟೋರೇಜ್‌ನಂತರ ಅರಣ್ಯನಾಶ ಯೋಜನೆಯೇ ಕಾರಣ ಎಂದು ಕಿಡಿಕಾರಿದರು.

ನಾವ್ಯಾರು ಅಭಿವೃದ್ಧಿ ವಿರೋಧಿಗಳಲ್ಲ, ಇನ್ನಷ್ಟು ಸಂಕಷ್ಟಕ್ಕೀಡುಮಾಡುವ ಯೋಜನೆಗಳು ನಮಗೆ ಬೇಡವೇ ಬೇಡ. ಜೀವ ವೈವಿಧ್ಯ ಕಾಯ್ದೆಗಳನ್ನು ಉಲ್ಲಂಘಿಸಿ ಸರ್ಕಾರದ ಅನುಮತಿ ಇಲ್ಲದೆ ಹೇಗೆ ಟೆಂಡರ್ ಕರೆದಿದ್ದಾರೆ ಎಂದು ಪ್ರಶ್ನಿಸಿದರು.

ಕಾರ್ಗಲ್, ಗೇರುಸೊಪ್ಪೆ ಮೊದಲಾದೆಡೆ ಯೋಜನೆಯ ಕುರಿತು ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ, ಸಾರ್ವಜನಿಕರ ವಿರೋಧ ವ್ಯಕ್ತವಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಯೋಜನೆಯ ವಿರುದ್ಧ ಹೋರಾಟ ತೀವ್ರ ಸ್ವರೂಪ ಪಡೆಯುವುದರೊಳಗೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಯೋಜನೆಯನ್ನು ತಡೆಹಿಡಿಯಬೇಕೆಂದು ಆಗ್ರಹಿಸಿದರು.

ಬಂಗಾರಮಕ್ಕಿಯ ಶ್ರೀ ಮಾರುತಿ ಗುರೂಜಿ ಮಾತನಾಡಿ, ಪಶ್ಚಿಮಘಟ್ಟ ವಿಶ್ವಮಾನ್ಯ ಪ್ರದೇಶವಾಗಿದೆ. ಇದನ್ನು ಉಳಿಸಿಕೊಂಡರೆ ಜಗತ್ತೇ ಉಳಿಯುತ್ತದೆ. ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ಬಂದು ಹೋರಾಟ ಆರಂಭವಾದ ನಂತರ 12 ಯೋಜನೆಗಳು ಹೊರಬಿದ್ದಿದ್ದು, ಗಮನಕ್ಕೆ ಬಂದಿದೆ. ಈ ಯೋಜನೆಯಲ್ಲಿ ಸುಮಾರು 21 ಲಕ್ಷ ಮರ ಕಡಿಯುವ ಹುನ್ನಾರ ಅಡಗಿದೆ. ಈ ಯೋಜನೆಗೆ ತಡೆಹಿಡಿಯಲಾಗಿದೆ ಎಂಬ ವರದಿಗಳು ಕಣ್ಣೋರೆಸುವ ತಂತ್ರವಾಗಿದೆ ಎಂದು ಹೇಳಿದರು.

ಯುನೆಸ್ಕೋ ಅವರು ಪಶ್ಚಿಮಘಟ್ಟ ಉಳಿವಿಗೆ 12 ಸಾವಿರ ಕೋಟಿ ರುಪಾಯಿ ಅನುದಾನ ಕೊಟ್ಟಿದ್ದಾರೆ. ಅರಣ್ಯದ ಅಭಿವೃದ್ಧಿಗೆ ನೀಡಿದ ಹಣ ಎಲ್ಲಿ ಹೋಯ್ತು ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದರು.

ಕೇಂದ್ರ ಅರಣ್ಯ ಸಚಿವ ಭೂಪೇಂದ್ರಯಾದವ್ ಅವರು ನವೆಂಬರ್‌ನಲ್ಲಿ ಈ ಯೋಜನಾ ಪ್ರದೇಶಕ್ಕೆ ಅಧ್ಯಯನ ತಂಡ ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ. ಅದು ಬಂದು ವರದಿಕೊಟ್ಟ ನಂತರ ಕೇಂದ್ರ ಸರ್ಕಾರದ ಅಧಿಸೂಚನೆಯಲ್ಲಿ ಯೋಜನೆಯ ಸ್ಥಗಿತದ ಬಗ್ಗೆ ಪ್ರಕಟವಾಗುವವರೆಗೆ ಹೋರಾಟ ಮುಂದುವರಿಯುವುದು ಎಂದು ಎಚ್ಚರಿಕೆ ನೀಡಿದರು.

ಗೋಷ್ಟಿಯಲ್ಲಿ ಬಸವ ಕೇಂದ್ರದ ಮರುಳಸಿದ್ಧಸ್ವಾಮೀಜಿ, ಬೆಳಗಾವಿಯ ನಿಡಸೋಸಿ ಮಠದ ಶ್ರೀ ನಿಜಲಿಂಗಾನಂದಸ್ವಾಮೀಜಿ, ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಧರ್ಮಗುರು ರೋಷನ್ ಪಿಂಟೋ, ಪರ್ಯಾವರಣ ಟ್ರಸ್ಟಿನ ಅಧ್ಯಕ್ಷ ಪ್ರೊ.ಬಿ.ಎಂ.ಕುಮಾರಸ್ವಾಮಿ, ಪರಶುರಾಮೇಗೌಡ, ರಾಜ್ಯ ರೈತಸಂಘದ ವರಿಷ್ಟ ಕೆ.ಟಿ. ಗಂಗಾಧರ, ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಶಾಸಕ ಮಹಿಮಾ ಪಟೇಲ್, ಮುಸ್ಲಿಂ ಮುಖಂಡ ವಾಹಬ್‌ಸಾಬ್, ದಿನೇಶ್, ಅಖಿಲೇಶ್ ಚಿಪ್ಪಳಿ ಮೊದಲಾದವರಿದ್ದರು.

---

ಪಶ್ಚಿಮಘಟ್ಟವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು. ಜನಹಿತಕ್ಕೆ ಮಾರಕವಾಗುವ ಈ ಯೋಜನೆಯನ್ನು ಕೈಬಿಡಬೇಕು.

ಶ್ರೀ ಶಿವಕುಮಾರ ಸ್ವಾಮೀಜಿ, ಕಪ್ಪದ ಗುಡ್ಡದ ನಂದಿವೇರಿ ಮಠ.