ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಗುತ್ತಿಗೆದಾರರು ಮೃತರಾದರೆ ಅವರ ಕುಟುಂಬಕ್ಕೆ ಸರ್ಕಾರದ ಮೂಲಕ ಗುತ್ತಿಗೆದಾರರ ಕ್ಷೇಮನಿಧಿಯಿಂದ ೧೦ ಲಕ್ಷ ರು. ಹಣವನ್ನು ಮೃತರ ಕುಟುಂಬಕ್ಕೆ ನೀಡಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್. ಬಿ. ಜಗದೀಶ್ ತಿಳಿಸಿದರು.ಪಟ್ಟಣದಲ್ಲಿನ ಕಂಟ್ರ್ಯಾಕ್ಟರ್ ಅಸೋಸಿಯೇಷನ್ ಅಂಡ್ ಕ್ಲಬ್‌ನಲ್ಲಿ ತಾಲೂಕಿನ ಬಾಗೂರು ಹೋಬಳಿ ಉಲ್ಲೇನಹಳ್ಳಿ ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರ ಧರ್ಮಪ್ಪ ಇತ್ತೀಚೆಗೆ ಮೃತರಾಗಿದ್ದು, ಮೃತ ಕುಟುಂಬಕ್ಕೆ ₹೧೦ ಲಕ್ಷ ಹಣದ ಆದೇಶ ಪತ್ರವನ್ನು ನೀಡಿ ಅವರು ಮಾತನಾಡಿದರು, ಗುತ್ತಿಗೆದಾರರ ಕ್ಷೇಮನಿಧಿ ೫ ಲಕ್ಷ ರು. ಇತ್ತು, ಆರ್. ಮಂಜುನಾಥ್ ರಾಜ್ಯಾಧ್ಯಕ್ಷರಾದ ಮೇಲೆ ಸರ್ಕಾರಕ್ಕೆ ಒತ್ತಡ ಹಾಕಿ ೧೦ ಲಕ್ಷ ಮಾಡಿಸಿದ್ದಾರೆ ಎಂದು ಹೇಳಿದರು.
ತಾಲೂಕಿನಲ್ಲಿ ಈಗ್ಗೆ ನಾಲ್ಕು ತಿಂಗಳ ಹಿಂದೆ ಶ್ರವಣಬೆಳಗೊಳದ ಮೂರನೇ ದರ್ಜೆ ಗುತ್ತಿಗದಾರರ ಅಶೋಕ್ ಮೃತರಾಗಿದ್ದು, ಅವರ ಪತ್ನಿ ಗಾಯತ್ರಿ ಅಶೋಕ್ ಅವರಿಗೆ ೧೦ ಲಕ್ಷ ರು. ಹಣವನ್ನು ಗುತ್ತಿಗೆದಾರರ ಕ್ಷೇಮನಿಧಿಯಿಂದ ಕೊಡಿಸಲಾಗಿದ್ದು, ಪ್ರಥಮ ದರ್ಜೆ ಗುತ್ತಿಗೆದಾರ ಧರ್ಮಪ್ಪ ಮೃತರಾಗಿದ್ದು ಅವರ ಕುಟುಂಬಕ್ಕೆ ಈಗ ೧೦ ಲಕ್ಷ ರು. ಹಣ ಕೊಡಸಲಾಗುತ್ತಿದೆ ಇದರಿಂದ ಎರಡೂ ಕುಟುಂಬಕ್ಕೆ ಸಾಕಷ್ಟು ಅನುಕೂಲ ಆಗಿದೆ ಎಂದು ಹೇಳಿದರು.ಜಿಲ್ಲೆಯಲ್ಲಿ ಸಾಕಷ್ಟು ವರ್ಷಗಳಿಂದ ಗುತ್ತಿಗೆದಾರರು ಸರ್ಕಾರದಿಂದ ಕಾಮಗಾರಿ ಪಡೆದು ಕೆಲಸ ಮಾಡಕೊಂಡು ಬಂದಿದ್ದಾರೆ. ಇತ್ತೀಚಿನ ದಿವಸದಲ್ಲಿ ಕೆಲಸ ಇಲ್ಲದೆ ಇರುವುದರಿಂದ ತಮ್ಮ ಪರವಾನಗಿಯನ್ನು ನವೀಕರಣ ಮಾಡಿಸಿಲ್ಲ ಇದಾಗಬಾರದು. ಆದಷ್ಟು ಬೇಗ ತಮ್ಮ ಪರವಾನಗಿ ನವೀಕರಣ ಮಾಡಿಸಿಕೊಳ್ಳಿ, ಪರವಾನಗಿ ೧೦ ವರ್ಷಕ್ಕೆ ಒಮ್ಮೆ ಮಾತ್ರ ನವೀಕರಣ ಇದೆ, ಹಾಗಾಗಿ ಯಾವುದೇ ಗುತ್ತಿಗೆದಾರರು ಅಸಡ್ಡೆ ತೋರಬಾರದು ಎಂದು ಹೇಳಿದರು.
ನಾವು ಬದುಕಿದ್ದ ವೇಳೆ ಸರ್ಕಾರದಿಂದ ಕಾಮಗಾರಿಯನ್ನು ಗುತ್ತಿಗೆ ಪಡೆದು ಜೀವನ ನಡೆಸುತ್ತೇವೆ ನಮಗೆ ಅನಾಹುತ ಆದರೆ ತಮ್ಮ ಕುಟುಂಬಕ್ಕೆ ಆಸರೆ ಇರುವುದಿಲ್ಲ. ಗುತ್ತಿಗೆದಾರರ ಕ್ಷೇಮ ನಿಧಿಯಿಂದ ಬರುವ ಹಣದಿಂದ ಕುಟುಂಬಕ್ಕೆ ಸಾಕಷ್ಟು ಅನುಕೂಲ ಆಗುತ್ತದೆ ಇದನ್ನು ಮನದಲ್ಲಿ ಇಟ್ಟುಕೊಂಡು ಗುತ್ತಿಗೆದಾರರು ತಮ್ಮ ಪರವಾನಗಿ ನವೀಕರಣ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಂಟ್ರ್ಯಾಕ್ಟರ್ ಅಸೋಸಿಯೇಷನ್ ಅಂಡ್ ಕ್ಲಬ್ ನ ಖಜಾಂಚಿ ಪಾಂಡು, ನಿರ್ದೇಶಕ ರಾಮಕೃಷ್ಣ, ಗುತ್ತಿಗೆದಾರ ಯತಿರಾಜ್, ಮೃತ ಗುತ್ತಿಗೆದಾರ ಧರ್ಮಪ್ಪ ಪುತ್ರ ರಮೇಶ್ ಈ ವೇಳೆ ಉಪಸ್ಥಿತರಿದ್ದರು.