ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ತ್ಯಾಜ್ಯ ಸಂಗ್ರಹ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮವಾಗಿಸಲು ಹೊಸದಾಗಿ 36 ಕಡೆ ಒಣ ಕಸ ಸಂಗ್ರಹ ಕೇಂದ್ರಗಳ ಸ್ಥಾಪನೆಗೆ ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಮುಂದಾಗಿದೆ.ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿದಿನ 5 ಸಾವಿರ ಟನ್‌ಗೂ ಹೆಚ್ಚಿನ ಒಣ ಮತ್ತು ಹಸಿ ಕಸ ಸಂಗ್ರಹವಾಗುತ್ತದೆ. ಅದರಲ್ಲಿ ಹಸಿ ತ್ಯಾಜ್ಯವನ್ನು ತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿ ಸಂಸ್ಕರಿಸಿದರೆ, ಮಿಶ್ರ ತ್ಯಾಜ್ಯವನ್ನು ಭೂಭರ್ತಿ ಘಟಕಗಳಲ್ಲಿ ವಿಲೇವಾರಿ ಮಾಡಲಾಗುತ್ತದೆ. ಉಳಿದಂತೆ ಒಣ ತ್ಯಾಜ್ಯವನ್ನು ಒಣಕಸ ಸಂಗ್ರಹ ಕೇಂದ್ರಗಳಲ್ಲಿ ಶೇಖರಿಸಿ, ಸಂಸ್ಕರಿಸಲಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ 130ಕ್ಕೂ ಹೆಚ್ಚಿನ ಒಣಕಸ ಸಂಗ್ರಹ ಕೇಂದ್ರಗಳಿವೆ. ಆದರೆ, ಅವುಗಳಲ್ಲಿ ಶೇ. 50ಕ್ಕೂ ಹೆಚ್ಚಿನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಒಣ ಕಸ ಸಂಗ್ರಹ ಕೇಂದ್ರಗಳನ್ನು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದರ ಜತೆಗೆ, ಹೊಸದಾಗಿ 36 ಕೇಂದ್ರಗಳನ್ನು ಸ್ಥಾಪಿಸಲು ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ರೂಪಿಸಿರುವ ಯೋಜನೆಯಂತೆ ಗೋವಿಂದರಾಜನಗರ, ಚಿಕ್ಕಪೇಟೆ, ಬಿಟಿಎಂ ಲೇಔಟ್, ಪದ್ಮನಾಭನಗರ ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಒಟ್ಟು 36 ಒಣ ಕಸ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಎರಡು ಪ್ಯಾಕೇಜ್‌ಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಒಣ ಕಸ ಸಂಗ್ರಹ ಕೇಂದ್ರಗಳ ಸ್ಥಾಪನೆಗಾಗಿ ಶುಭ್ರ ಬೆಂಗಳೂರು ಯೋಜನೆಗಾಗಿ ಮೀಸಲಿಟ್ಟಿರುವ ಅನುದಾನದಲ್ಲಿ ₹3.64 ಕೋಟಿಗಳನ್ನು ಖರ್ಚು ಮಾಡಲಾಗುತ್ತದೆ.ಒಣಕಸ ಸಂಗ್ರಹ ಕೇಂದ್ರಗಳಲ್ಲಿ ಕೇವಲ ಒಣಕಸಗಳನ್ನು ಸಂಗ್ರಹಿಸದೇ ಅವುಗಳ ಸಂಸ್ಕರಣೆಗೂ ವ್ಯವಸ್ಥೆ ಮಾಡಲಾಗುತ್ತದೆ. ಈ ಬಗ್ಗೆ ಟೆಂಡರ್ ದಾಖಲೆಯಲ್ಲಿ ಉಲ್ಲೇಖಿಸಲಾಗಿದ್ದು, ಒಣ ಕಸ ಸಂಗ್ರಹ ಕೇಂದ್ರ ನಿರ್ಮಿಸಿ, ನಿರ್ವಹಣೆ ಮಾಡುವ ಟೆಂಡರ್ ಪಡೆಯುವ ಸಂಸ್ಥೆಯು ಅದಕ್ಕೆ ಬೇಕಾದ ವ್ಯವಸ್ಥೆಯನ್ನೂ ಮಾಡಿಕೊಳ್ಳಬೇಕಾಗುತ್ತದೆ. ಪ್ರಮುಖವಾಗಿ ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ಒಣ ಕಸವನ್ನು ಪ್ರೆಸ್ ಮಾಡಲು 30ರಿಂದ 60 ಟನ್ ಸಾಮರ್ಥ್ಯದ ಪ್ರೆಸಿಂಗ್ ಚೇಂಬರ್ ನಿರ್ಮಿಸಬೇಕು, ಹೀಗೆ ಒಣ ಕಸವನ್ನು ಪ್ರೆಸ್ ಮಾಡಿದ ನಂತರ ಅದನ್ನು ಸಿಮೆಂಟ್ ಕಾರ್ಖಾನೆ ಸೇರಿದಂತೆ ಅಗತ್ಯವಿರುವವರಿಗೆ ಮಾರಾಟ ಮಾಡಲಾಗುತ್ತದೆ.