ನಿಯಮಾನುಸಾರ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಯಲಿ: ವಿ.ಅನ್ಬುಕುಮಾರ

| Published : Jan 17 2024, 01:46 AM IST

ನಿಯಮಾನುಸಾರ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಯಲಿ: ವಿ.ಅನ್ಬುಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಮತದಾರ ಪಟ್ಟಿಯಲ್ಲಿ ತಿದ್ದುಪಡಿ, ತೆಗೆದು ಹಾಕುವುದು, ವರ್ಗಾವಣೆ ಮತ್ತು ಸೇರ್ಪಡೆ ಕಾರ್ಯವನ್ನು ಜಾಗೃತಿಯಿಂದ ಮಾಡಬೇಕು ಎಂದು ಧಾರವಾಡ ಜಿಲ್ಲಾ ಮತದಾರ ಪಟ್ಟಿ ವೀಕ್ಷಕ ವಿ.ಅನ್ಬುಕುಮಾರ ಹೇಳಿದ್ದಾರೆ.

ಧಾರವಾಡ: ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆಯ ಕಾರ್ಯ ಶಿಸ್ತು ಬದ್ದವಾಗಿ ಮತ್ತು ನಿಯಮಾನುಸಾರ ಮಾಡಬೇಕಿದ್ದು, ಜಿಲ್ಲೆಯ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ ತೃಪ್ತಿ ತಂದಿದೆ ಎಂದು ಕೃಷಿ ಇಲಾಖೆ ಸರ್ಕಾರದ ಕಾರ್ಯದರ್ಶಿಗಳು ಆಗಿರುವ ಧಾರವಾಡ ಜಿಲ್ಲಾ ಮತದಾರ ಪಟ್ಟಿ ವೀಕ್ಷಕ ವಿ.ಅನ್ಬುಕುಮಾರ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾ ಅಪರ ಚುನಾವಣಾಧಿಕಾರಿ, ಮತದಾರರ ನೋಂದಣಿ ಅಧಿಕಾರಿಗಳು, ಸಹಾಯಕ ಮತದಾರ ನೋಂದಣಿ ಅಧಿಕಾರಿಗಳ ಹಾಗೂ ಚುನಾವಣೆ ಶಾಖೆಗಳ ನಿರ್ವಾಹಕರ ಸಭೆ ಜರುಗಿಸಿದ ಅವರು, ಜಿಲ್ಲೆಯಲ್ಲಿ 2011ರ ಜನಗಣತಿಯಂತೆ 18,47,023 ಜನಸಂಖ್ಯೆ ಇದೆ. 2024ರಲ್ಲಿ ಇದು 21,40,00 ಆಗುವ ಅಂದಾಜಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯ ನಡೆದಿದೆ. ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಮತದಾರ ಪಟ್ಟಿಯಲ್ಲಿ ತಿದ್ದುಪಡಿ, ತೆಗೆದು ಹಾಕುವುದು, ವರ್ಗಾವಣೆ ಮತ್ತು ಸೇರ್ಪಡೆ ಕಾರ್ಯವನ್ನು ಜಾಗೃತಿಯಿಂದ ಮಾಡಬೇಕು. ಸಂಬಂಧಿಸಿದ ಕಾರ್ಯಗಳಿಗೆ ಅಗತ್ಯ ದಾಖಲೆ ಪಡೆದು ನಿರ್ವಹಿಸಬೇಕು ಎಂದರು.

ಈಗಾಗಲೇ 2023ರ ಅಕ್ಟೋಬರ್‌ 27ರಂದು ಪ್ರಕಟಿಸಿರುವ ಕರಡು ಮತದಾರರ ಪಟ್ಟಿಯಲ್ಲಿ ಜಿಲ್ಲೆಯ ಏಳು ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ 7,71,719 ಪುರುಷ ಹಾಗೂ 7,66,798 ಮಹಿಳಾ ಹಾಗೂ 86 ಇತರರು ಸೇರಿದಂತೆ ಒಟ್ಟು 15,38,603 ಮತದಾರರಿದ್ದರು. ಈಗ ಪ್ರಸ್ತುತ ಪರಿಷ್ಕರಣೆಯ ನಂತರ ಅಂದರೆ 2024 ಜನವರಿ 12ಕ್ಕೆ 7,80,709 ಪುರುಷ ಹಾಗೂ 7,79,342 ಮಹಿಳಾ ಹಾಗೂ 90 ಇತರೆ ಸೇರಿ ಜಿಲ್ಲೆಯಲ್ಲಿ ಒಟ್ಟು 15,60,141 ಮತದಾರರಾಗಿದ್ದಾರೆ. ಮತದಾರ ಪಟ್ಟಿಯ ಪರಿಷ್ಕರಣೆ ಕಾರ್ಯ ಜಾರಿಯಲ್ಲಿದ್ದು, ಮುಂಬರುವ ಲೋಕಸಭಾ ಚುನಾವಣೆಗೆ ಮತದಾರ ಪಟ್ಟಿ ಸಿದ್ದಗೊಳಿಸಲಾಗುವುದು. ಅರ್ಹ ನಾಗರಿಕರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಮಾಡಿಕೊಳ್ಳಬೇಕು ಎಂದರು.

ಜನಗಣತಿ ಪ್ರಕಾರ ರಾಜ್ಯದ ಲಿಂಗಾನುಪಾತ 973 ಇದ್ದರೆ, 2023 ರಲ್ಲಿನ ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಲಿಂಗಾನುಪಾತ 987 ಮತ್ತು ಕರಡು ಮತದಾರ ಪಟ್ಟಿ ಪ್ರಕಟಿಸಿದ್ದಾಗ 994 ಆಗಿತ್ತು. ಈಗ ಜ.12ಕ್ಕೆ ಜಿಲ್ಲೆಯಲ್ಲಿ ಲಿಂಗಾನುಪಾತ 998 ಆಗಿದೆ ಎಂದು ತಿಳಿಸಿದರು.

ಜಿಲ್ಲಾ ಅಪರ ಚುನಾವಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಆಗಿರುವ ಗೀತಾ ಸಿ.ಡಿ , ಪ್ರತಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿ ಮತಾದರ ಪಟ್ಟಿ, ಮತಗಟ್ಟೆ, ಮತದಾರ ಗುರುತಿನ ಪತ್ರ ವಿತರಣೆ ಕುರಿತಂತೆ ಸಭೆಯಲ್ಲಿ ವಿವರಿಸಿದರು. ಜಿಲ್ಲಾ ಪಂಚಾಯತ್‌ ಯೋಜನಾ ನಿರ್ದೇಶಕರು, ಉಪವಿಭಾಗಾಧಿಕಾರಿ, ತಹಶೀಲ್ದಾರರು, ಮತದಾರ ನೋಂದಣಿ ಅಧಿಕಾರಿಗಳು ಇದ್ದರು.