ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ವ್ಯಕ್ತಿಯೊಬ್ಬ ಮಾಡಿದ ಅವಹೇಳನಕಾರಿ ಪೋಸ್ಟ್ ವಿರುದ್ಧ ಸೋಮವಾರ ರಾತ್ರಿ ನೂರಾರು ಜನರ ಗುಂಪು ಪೊಲೀಸ್ ಠಾಣೆ ಮುಂದೆ ಪ್ರತಿಭಟಿಸಿ, ಕಲ್ಲು ತೂರಾಟ ನಡೆಸಿದ್ದರಿಂದಾಗಿ ಉದ್ವಿಗ್ನಗೊಂಡಿದ್ದ ಮೈಸೂರಿನ ಉದಯಗಿರಿ ಪ್ರದೇಶ ಮಂಗಳವಾರ ಸಹಜ ಸ್ಥಿತಿ ಕಂಡುಬಂದರೂ ಪರಿಸ್ಥಿತಿ ಮಾತ್ರ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಾಗಿ ಭಾರೀ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.ಉದಯಗಿರಿ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಠಾಣೆಗೆ ಸಂಪರ್ಕವಿರುವ ಮಹದೇವಪುರ ಮುಖ್ಯರಸ್ತೆಯಲ್ಲಿ ಗಸ್ತು ಮಾಡಿ, ಅಂಗಡಿ ಮುಂಗಟ್ಟು ಮುಚ್ಚಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.
ಸಂಸದ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿವಸ್ತ್ರಗೊಳಿಸಿದ ಭಾವಚಿತ್ರಕ್ಕೆ ತಲೆ ಮೇಲೆ ಮುಸ್ಲಿಂಮರು ಬಳಸುವ ಟೊಪ್ಪಿ ಇಟ್ಟು, ದೇಹದ ಮೇಲೆಲ್ಲಾ ಉರ್ದು ಭಾಷೆಯ ಕೆಲ ಪದ ಬರೆದು ಪೋಸ್ಟ್ ಮಾಡಿದ್ದರಿಂದ ಮುಸ್ಲಿಂ ಸಮುದಾಯ ತೀವ್ರವಾಗಿ ಕೆರಳಿತ್ತು. ಸಾವಿರಾರು ಮಂದಿ ಏಕಕಾಲದಲ್ಲಿ ಉದಯಗಿರಿ ಮುಖ್ಯ ರಸ್ತೆ ತೆಡೆದು ಪ್ರತಿಭಟನೆಗೆ ಮುಂದಾಗಿದ್ದರು. ಒಂದು ಗುಂಪು ಉದಯಗಿರಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿತ್ತು. ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಪೊಲೀಸರು ಲಾಠಿ ಪ್ರಹಾರ ಮಾಡಿ, ಅಶ್ರುವಾಯು ಸಿಡಿಸಿ ಗುಂಪು ಚದುರಿಸಿದ್ದರು. ಹೀಗಾಗಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ.ಸೋಮವಾರ ರಾತ್ರಿ ನಡೆದ ಕಲ್ಲು ತೂರಾಟದಲ್ಲಿ ಡಿಸಿಪಿ ಎಂ. ಮುತ್ತುರಾಜು, ಎಸಿಪಿ ಶಾಂತಮಲ್ಲಪ್ಪ, ಇನ್ಸ್ ಪೆಕ್ಟರ್ ಮಹದೇವಸ್ವಾಮಿ ಸೇರಿ 7 ಪೊಲೀಸರಿಗೆ ಸಣ್ಣಪುಟ್ಟ ಗಾಯವಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕರ್ತವ್ಯಕ್ಕೆ ಮರಳಿದ್ದಾರೆ. ಅಲ್ಲದೆ, ಡಿಸಿಪಿ ಕಾರು ಸೇರಿ 10ಕ್ಕೂ ಹೆಚ್ಚು ವಾಹನಗಳ ಗಾಜು ಪುಡಿ ಪುಡಿಯಾಗಿವೆ.
ಪ್ರತಿಭಟನಾ ನಿರತರನ್ನು ಚದುರಿಸಿದ ಬಳಿಕ ಪರಿಸ್ಥಿತಿ ಸಹಜವಾಗುತ್ತಿದ್ದಂತೆ ಠಾಣೆ ಆವರಣ ಸೇರಿ ಸುತ್ತಲಿನ ರಸ್ತೆಗಳಲ್ಲಿ ಪರಿಶೀಲನಾ ಕಾರ್ಯ ನಡೆಸಿದ ಪೊಲೀಸರು, ರಾಶಿಯಾಗಿ ಬಿದ್ದಿದ್ದ ಕಲ್ಲುಗಳನ್ನು ಚೀಲದಲ್ಲಿ ಸಂಗ್ರಹಿಸಿದರು. ಜೊತೆಗೆ ಪೊಲೀಸ್ ವಾಹನಗಳ ಮೇಲೆ ಬಿದ್ದ ಕಲ್ಲು ಮಹಜರು ನಡೆಸಿ ವಶಪಡಿಸಿಕೊಂಡರು. ರಸ್ತೆಗಳಲ್ಲಿ ಬಿದ್ದಿದ್ದ ಚಪ್ಪಲಿಗಳನ್ನು ಪೌರಕಾರ್ಮಿಕರು ತೆರವುಗೊಳಿಸಿದರು.ಅಂಗಡಿಗಳು ಬಂದ್
ಮಂಗಳವಾರ ಬೆಳಗ್ಗೆ ಪೊಲೀಸರು ಹೈ ಅಲರ್ಟ್ ಆಗಿ ಮಹದೇವಪುರ ಮುಖ್ಯ ರಸ್ತೆಯಲ್ಲಿ ಸಿಎಆರ್, ಕೆಎಸ್ಆರ್‌ಪಿ ತುಕಡಿ ನಿಯೋಜಿಸಿದರಲ್ಲದೆ, ಕಮಾಂಡೋ ಪಡೆಗೆ ಗಸ್ತು ಮಾಡಲು ತಿಳಿಸಿ ಅಂಗಡಿ ಮುಗ್ಗಟ್ಟು ಬಾಗಿಲು ಹಾಕಿಸಿದರು. ವಾಹನಗಳು ಓಡಾಡದಂತೆ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಲಾಗಿತ್ತು.ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್. ಹಿತೇಂದ್ರ ಅವರು ಉದಯಗಿರಿ ಠಾಣೆಯಲ್ಲಿ ಪರಿಸ್ಥಿತಿಯ ಅವಲೋಕನ ಮಾಡಿ ರಾತ್ರಿ ಘಟನೆಯ ಬಗ್ಗೆ ಮಾಹಿತಿ ಪಡೆದರು. ಆರೋಪಿ ಬಂಧಿಸಿದ ಮೇಲೂ ಜನರು ಗುಂಪು ಗೂಡಿ ಕಲ್ಲುತೂರಾಟ ಮಾಡಿರುವ ವಿಚಾರದಲ್ಲಿ ಸಂಪೂರ್ಣ ಮಾಹಿತಿ ಪಡೆದು ಅಧಿಕಾರಿಗಳಿಗೆ ಧೈರ್ಯ ತುಂಬಿದರು. ನಂತರ, ಐಜಿಪಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಮಹತ್ವದ ಸಭೆ ನಡೆಸಿ ಆರೋಪಿಗಳನ್ನು ಬಂಧಿಸಲು ಅನುಸರಿಸಬೇಕಾದ ಕ್ರಮದ ಬಗ್ಗೆ ಸೂಚಿಸಿದರು.
ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿ ಆಧರಿಸಿ ಕಲ್ಲು ತೂರಿದವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.ದಕ್ಷಿಣ ವಲಯ ಐಜಿಪಿ ಡಾ. ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಎಂ. ಮುತ್ತುರಾಜು, ಎಸ್. ಜಾಹ್ನವಿ, ಎ. ಮಾರುತಿ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಇದ್ದರು.ಎರಡು ಪ್ರಕರಣ ದಾಖಲು: ಆರೋಪಿ ಬಂಧನ
ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಕಲ್ಯಾಣಗಿರಿಯ ನಿವಾಸಿ ಸತೀಶ್ ಅ. ಪಾಂಡುರಂಗ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದೇ ವಿಚಾರವಾಗಿ ಠಾಣೆ ಎದುರು ನಡೆದ ಪ್ರತಿಭಟನೆ ವೇಳೆ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.ಸಿಸಿಬಿ ಪೊಲೀಸರಿಂದ ತನಿಖೆ
ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ. ಕಲ್ಲು ತೂರಾಟ ಸಂಬಂಧ ಉದಯಗಿರಿ ಠಾಣೆಯಲ್ಲಿಎಫ್‌ಐಆರ್ ದಾಖಲಾಗಿದ್ದು, ತನಿಖೆಯನ್ನು ಸಿಸಿಬಿ ಘಟಕಕ್ಕೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಸಿಟಿವಿ ದೃಶ್ಯಗಳನ್ನು ಸಿಸಿಬಿ, ಟೆಕ್ನಿಕಲ್ ಟೀಂ, ಸೆನ್ ವಿಭಾಗ ಪೊಲೀಸರು ವಶಕ್ಕೆ ಪಡೆದು ಪರಿಶೀಲಿಸಿ, ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.ಏನಾಯ್ತು?ಸಂಸದ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಭಾವಚಿತ್ರಗಳನ್ನು ವಿವಸ್ತ್ರಗೊಳಿಸಿ, ತಲೆ ಮೇಲೆ ಮುಸ್ಲಿಂ ಸಮುದಾಯ ಬಳಸುವ ಟೋಪಿ ಇಟ್ಟು, ದೇಹದ ಮೇಲೆಲ್ಲಾ ಉರ್ದು ಭಾಷೆಯ ಕೆಲವು ಪದಗಳನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಪೋಸ್ಟ್ ಮಾಡಿದ್ದ. ಇದರಿಂದ ಆಕ್ರೋಶಗೊಂಡ ಗುಂಪೊಂದು ಪ್ರತಿಭಟನೆ ನಡೆಸಿ ಕಲ್ಲು ತೂರಾಟ ನಡೆಸಿತ್ತು.
ಮೈಸೂರಿನ ಉದಯಗಿರಿ ಗಲಾಟೆಗೆ ಕಾರಣಕರ್ತನಾದ ಆರೋಪಿಯನ್ನು ಅದೇ ಠಾಣೆಯಲ್ಲಿ ಇಟ್ಟುಕೊಂಡ ಪೊಲೀಸರ ಕಾರ್ಯವೈಖರಿಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ತೀವ್ರ ಗರಂ ಆಗಿದ್ದಾರೆ. ಪೊಲೀಸರಿಗೆ ಕನಿಷ್ಠ ಸಾಮಾನ್ಯ ಜ್ಞಾನ ಇಲ್ಲವೇ? ಆರೋಪಿ ಬಂಧನದ ನಂತರ ನಡೆದ ಎಲ್ಲ ಘಟನೆಗಳಿಗೆ ಪೊಲೀಸರೇ ಕಾರಣ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.