ಆಗಸ್ಟ್‌ 10ರಂದು ದಿ.ಬಿ.ರಾಚಯ್ಯ ೧೦೨ನೇ ಜನ್ಮದಿನ: ಜಿಲ್ಲಾಧಿಕಾರಿ ಶಿಲ್ಪಾನಾಗ್

| Published : Jul 29 2024, 12:51 AM IST

ಆಗಸ್ಟ್‌ 10ರಂದು ದಿ.ಬಿ.ರಾಚಯ್ಯ ೧೦೨ನೇ ಜನ್ಮದಿನ: ಜಿಲ್ಲಾಧಿಕಾರಿ ಶಿಲ್ಪಾನಾಗ್
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಕೊಳ್ಳೇಗಾಲದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರೊಂದಿಗೆ ಆಲೂರಿನಲ್ಲಿರುವ ದಿ.ಬಿ.ರಾಚಯ್ಯ ಅವರ ಸ್ಮಾರಕ ನಿರ್ಮಾಣ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ, ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರು.

ಆಲೂರಿನಲ್ಲಿ ಸಿಎಂರಿಂದ ರಾಚಯ್ಯ ಅವರ ಸ್ಮಾರಕ ಉದ್ಘಾಟನೆ । ಪೂರ್ವಭಾವಿ ಸಭೆ । ಸ್ಮಾರಕ ಸಿದ್ಧತೆ ಪರಿಶೀಲನೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮಾಜಿ ರಾಜ್ಯಪಾಲ ದಿ.ಬಿ. ರಾಚಯ್ಯ ಅವರ ೧೦೨ ಜನ್ಮದಿನೋತ್ಸವ ಅಂಗವಾಗಿ ಆ.೧೦ ರಂದು ಆಲೂರಿನಲ್ಲಿರುವ ಬಿ.ರಾಚಯ್ಯ ಅವರ ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮ ಹಿನ್ನೆಲೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಕೊಳ್ಳೇಗಾಲದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರೊಂದಿಗೆ ಆಲೂರಿನಲ್ಲಿರುವ ದಿ.ಬಿ.ರಾಚಯ್ಯ ಅವರ ಸ್ಮಾರಕ ನಿರ್ಮಾಣ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ, ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರು.ಸ್ಮಾರಕ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟದ ಸಚಿವರು ಆಗಮಿಸುವ ಹಿನ್ನೆಲೆ ಮುಖ್ಯಮಂತ್ರಿಗಳ ಕಾರ್ಯಕ್ರಮಗಳ ಕುರಿತು ಸಮಾಲೋಚನೆ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆಯ ಸಚಿವ ಎಚ್.ಸಿ. ಮಹದೇವಪ್ಪ ಸೇರಿದಂತೆ ಸಂಪುಟದ ಅನೇಕ ಸಚಿವರು, ಸಂಸದರು ಹಾಗೂ ಶಾಸಕರು ಅಲೂರಿಗೆ ಆಗಮಿಸಲಿದ್ದಾರೆ. ಬಿ.ರಾಚಯ್ಯ ಅವರ ಸ್ಮಾರಕ ಲೋಕಾರ್ಪಣೆ ಹಾಗೂ ವೇದಿಕೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.

ಈ ಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ ನಡೆಯುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು. ಅಲ್ಲದೇ ಬಿ.ರಾಚಯ್ಯ ಅವರ ಸ್ಮಾರಕ ಮತ್ತು ಅವರ ಜೀವನ ಚರಿತ್ರೆಯನ್ನು ಬಿಂಬಿಸುವ ಛಾಯಾಚಿತ್ರಗಳು, ಅವರ ಸಾಧನೆಗಳು ಮತ್ತು ರಾಚಯ್ಯ ಅವರು ಉಪಯೋಗಿಸುತ್ತಿದ್ದ ವಸ್ತುಗಳ ಸಂಗ್ರಹಾಲಯವನ್ನು ಬಹಳ ವ್ಯವಸ್ಥಿತವಾಗಿ ನಿರ್ಮಾಣ ಮಾಡಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಸೂಚನೆ ನೀಡಿದರು. ದಿ.ಬಿ.ರಾಚಯ್ಯ ಅವರ ಪುತ್ರ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ, ಜಿ.ಪಂ. ಮಾಜಿ ಸದಸ್ಯ ಆರ್. ಬಾಲರಾಜು ಮತ್ತು ಅವರ ಕುಟುಂಬದವರ ಸಲಹೆ, ಸಹಕಾರ ಪಡೆದು, ಸ್ಮಾರಕ ನಿರ್ಮಾಣ, ಲೋಕಾರ್ಪಣೆ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ಆಗಬೇಕು. ಸ್ವಲ್ಪವೂ ಲೋಪವಾಗದಂತೆ ಜವಾಬ್ದಾರಿ ನಿರ್ವಹಿಸಬೇಕು ಎಂದು ತಿಳಿಸಿದರು. ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೨೦೧೩ ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಿ, ಅನುದಾನ ನೀಡಿದ್ದರು. ನಂತರ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಶ್ರೀರಾಮುಲು ಅವರು ೫೨ ಲಕ್ಷ ರು. ನೀಡಿದ್ದರು. ಎಸ್‌ಆರ್ ದರ ಹೆಚ್ಚಳವಾದ ಹಿನ್ನೆಲೆ ಮತ್ತೆ ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ೨.೧೨ ಕೋಟಿ ರು. ಕ್ರಿಯಾ ಯೋಜನೆಗೆ ಅನುಮೋದನೆ ಪಡೆದುಕೊಳ್ಳಲಾಯಿತು. ಈ ಹಂತದಲ್ಲಿ ೫೦ ಲಕ್ಷ ರು. ಬಿಡುಗಡೆ ಮಾಡಲಾಗಿದೆ. ಈಗ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಹೆಚ್ಚುವರಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿಯೇ ಕೃಷ್ಣಮೂರ್ತಿ ಅವರು ಸಮಾಜ ಕಲ್ಯಾಣ ಇಲಾಖೆಯ ಸಚಿವ ಎಚ್.ಸಿ.ಮಹದೇವಪ್ಪ ಅವರಿಗೆ ಕರೆ ಮಾಡಿ, ಸ್ಮಾರಕದ ಅಂತಿಮ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿ, ಹೆಚ್ಚುವರಿ ಹಣವನ್ನು ತಕ್ಷಣ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ಎಸ್ಪಿ ಬಿ.ಟಿ. ಕವಿತಾ, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿ.ಪಂ. ಉಪ ಕಾರ್ಯದರ್ಶಿ ಲಕ್ಷ್ಮಿ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕಿ ಮಂಜುಳಾ, ಪಿಡಬ್ಲ್ಯುಡಿ ಕಾರ್ಯಪಾಲಕ ಎಂಜಿನಿಯರ್‌ ಮಹೇಶ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜು, ಎಸಿ ಮಹೇಶ್, ತಹಸೀಲ್ದಾರ್ ಗಿರಿಜಾ, ತಾಪಂ ಇಒ ಪೂರ್ಣಿಮಾ, ಗ್ಯಾರಂಟಿ ಯೋಜನಾ ಸಮಿತಿಯ ಅಧ್ಯಕ್ಷ ಹೊಂಗನೂರು ಚಂದ್ರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಎಪಿಎಂಸಿ ನಿರ್ದೇಶಕ ಆಲೂರು ಪ್ರದೀಪ್, ಮುಖಂಡರಾದ ಆರ್. ಮಹದೇವ್, ಎ.ಸಿ. ಪ್ರವೀಣ್, ಗುತ್ತಿಗೆದಾರ ಅಲೂರು ಲಿಂಗಣ್ಣ, ಕಂದಹಳ್ಳಿ ನಂಜುಂಡಸ್ವಾಮಿ, ಪ್ರಭುಪ್ರಸಾದ್, ಮಹದೇವಪ್ರಸಾದ್ ಪಸಿ, ಮಹದೇವ್, ಹೊಂಗನೂರು ಚೇತನ್ ಇದ್ದರು.