ಚವಡಾಪುರ: ಮಗುವಿಗೆ ಜನ್ಮನೀಡಿದ 10ನೇ ತರಗತಿ ವಿದ್ಯಾರ್ಥಿನಿ

| Published : Jan 20 2024, 02:00 AM IST

ಸಾರಾಂಶ

ಅಫಜಲ್ಪುರ ತಾಲೂಕಿನ ಅರ್ಜುಣಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯ, ವಾರ್ಡನ್‌ ಅಮಾನತು. ಅಮಾನತು ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ತಹಸೀಲ್ದಾರ್‌, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಚವಡಾಪುರ

ಅಫಜಲ್ಪುರ ತಾಲೂಕಿನ ಅರ್ಜುಣಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ 10ನೇ ತರಗತಿ ವಿದ್ಯಾರ್ಥಿನಿ ಮಹಾರಾಷ್ಟ್ರದ ಸೊಲ್ಲಾಪುರ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮನೀಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕರ್ತವ್ಯ ನಿರ್ಲಕ್ಷ್ಯ ಆರೋಪದ ಮೇರೆಗೆ ವಸತಿ ಶಾಲೆ ಪ್ರಾಚಾರ್ಯರು ಹಾಗೂ ವಾರ್ಡನ್‌ರನ್ನು ಅಮಾನತುಗೊಳಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ನವೀನಕುಮಾರ ರಾಜು ಅವರು ಆದೇಶಿಸಿದ್ದಾರೆ. ಅಮಾನತು ಅವಧಿಯಲ್ಲಿ ಸಕ್ಷಣ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲಾಗಿ ಮಗುವಿಗೆ ಜನ್ಮ ನೀಡುವ ತನಕ ಯಾಕೆ ಯಾರು ಗಮನಿಸಿಲ್ಲ, ಇದು ಪ್ರಾಚಾರ್ಯರು ಹಾಗೂ ವಾರ್ಡನ್‌ ನಿರ್ಲಕ್ಷ್ಯ. ಹೀಗಾಗಿ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತ್ತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಆದರೆ ಘಟನೆ ಕುರಿತು ತಿಳಿಯುತ್ತಿದ್ದಂತೆ ವಿದ್ಯಾರ್ಥಿಗಳು ವಸತಿ ಶಾಲೆಯ ಗೇಟ್‌ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್‌ ಸಂಜೀವಕುಮಾರ ದಾಸರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ ನಾಯಕ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಪ್ರಾಚಾರ್ಯರು ಮತ್ತು ವಾರ್ಡನ್‌ ಒಳ್ಳೆಯವರು. ಅವರು ಯಾವುದೇ ತಪ್ಪು ಮಾಡಿಲ್ಲ. ಅವರನ್ನು ಯಾವ ಕಾರಣಕ್ಕಾಗಿ ಅಮಾನತ್ತುಗೊಳಿಸಲಾಗಿದೆ ಎನ್ನುವುದು ನಮಗೆ ತಿಳಿಯಬೇಕು ಹಾಗೂ ಕೂಡಲೇ ಅವರ ಅಮಾನತು ಆದೇಶ ರದ್ದುಪಡಿಸಿ ಅವರನ್ನೇ ಪುನಃ ವಸತಿ ಶಾಲೆಗೆ ಕರ್ತವ್ಯಕ್ಕೆ ಕಳುಹಿಸಬೇಕು ಎಂದು ಆಗ್ರಹಿಸಿದರು. ಅವರು ಬರುವ ತನಕ ನಾವು ಪರೀಕ್ಷೆ ಬರೆಯುವುದಿಲ್ಲ ಎಂದು ಪಟ್ಟು ಹಿಡಿದರು. ಅಲ್ಲದೆ ಇಲಾಖೆಯ ಮೇಲಾಧಿಕಾರಿಗಳು ಬರುವ ತನಕ ಪ್ರತಿಭಟನೆಯಿಂದ ಮೇಲೆಳುವುದಿಲ್ಲವೆಂದು ಹಠ ಹಿಡಿದಾಗ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸಮಾಧಾನಗೊಳಿಸಿ ಮೇಲಾಧಿಕಾರಿಗಳು ಯಾವ ಕಾರಣಕ್ಕಾಗಿ ಪ್ರಾಚಾರ್ಯ, ವಾರ್ಡನ್‌ ಅವರನ್ನು ಅಮಾನತ್ತುಗೊಳಿಸಿದ್ದಾರೆಂದು ವಿಚಾರಣೆ ಮಾಡುತ್ತಿದ್ದಾರೆ. ನೀವು ಹೀಗೆ ಪ್ರತಿಭಟನೆ ಮಾಡುವುದರಿಂದ ಸಮಸ್ಯೆ ಬಗೆ ಹರಿಯುವುದಿಲ್ಲ, ಪ್ರತಿಭಟನೆ ಬಿಟ್ಟು ಪರೀಕ್ಷೆಗೆ ಹಾಜರಾಗಿ ಎಂದು ಬುದ್ಧಿವಾದ ಹೇಳಿದರು.

ಕಲಬುರಗಿ ನಂತರ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಿಗೆ ದೂರವಾಣಿ ಮೂಲಕ ಮಾತನಾಡಿ, ಸೋಮವಾರ ಅರ್ಜುಣಗಿ ಗ್ರಾಮದ ವಸತಿ ಶಾಲೆಗೆ ಭೇಟಿ ನೀಡಿ ಉತ್ತರ ನೀಡುವುದಾಗಿ ಭರವಸೆ ನೀಡಿದಾಗ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟು ಶಾಲಾ ಕೋಣೆಗಳಿಗೆ ತೆರಳಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಕಚೇರಿ ಅಧೀಕ್ಷಕ ಭೀಮಾಶಂಕರ ಬಿರಾದಾರ, ಸಿಬ್ಬಂದಿ ಭೀಮಶಾ, ಪ್ರಭಾರಿ ಪ್ರಾಚಾರ್ಯ ಮಲ್ಲಿಕಾರ್ಜುನ ನಡುವಿನಕೇರಿ, ಪ್ರಭಾರಿ ವಾರ್ಡನ್‌ ರಾಜಶೇಖರ ಕುಂಬಾರ ಸೇರಿದಂತೆ ಶಿಕ್ಷಕರು, ಪಾಲಕರು ಇದ್ದರು.