ತೆರಕಣಾಂಬೀಲಿ ಲಕ್ಷ್ಮೀ ವರದರಾಜಸ್ವಾಮಿ ಸಂಭ್ರಮದ ಜಾತ್ರೆ

| Published : Feb 25 2024, 01:50 AM IST

ತೆರಕಣಾಂಬೀಲಿ ಲಕ್ಷ್ಮೀ ವರದರಾಜಸ್ವಾಮಿ ಸಂಭ್ರಮದ ಜಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ತೆರಕಣಾಂಬಿ ಗ್ರಾಮದ ಶ್ರೀ ಲಕ್ಷ್ಮೀ ವರದರಾಜಸ್ವಾಮಿ ರಥೋತ್ಸವ ಹುಣ್ಣಿಮೆಯ ಶನಿವಾರ ಸಡಗರ ಸಂಭ್ರಮದಿಂದ ಜರುಗಿತು. ಗ್ರಾಮದ ಲಕ್ಷ್ಮೀ ವರದರಾಜಸ್ವಾಮಿ ದೇವಸ್ಥಾನದ ಆವರಣದಲ್ಲಿ ಶೃಂಗಾರ ಮಾಡಲಾಗಿದ್ದ ತೇರಿಗೆ ಬೆಳಗ್ಗೆ ೯.೩೦ ಗಂಟೆಯ ಸಮಯಕ್ಕೆ ದೇವರ ವಿಗ್ರಹವನ್ನು ರಥದಲ್ಲಿ ಪ್ರತಿಷ್ಠಾಪಿಸಿದ್ದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆತಾಲೂಕಿನ ತೆರಕಣಾಂಬಿ ಗ್ರಾಮದ ಶ್ರೀ ಲಕ್ಷ್ಮೀ ವರದರಾಜಸ್ವಾಮಿ ರಥೋತ್ಸವ ಹುಣ್ಣಿಮೆಯ ಶನಿವಾರ ಸಡಗರ ಸಂಭ್ರಮದಿಂದ ಜರುಗಿತು. ಗ್ರಾಮದ ಲಕ್ಷ್ಮೀ ವರದರಾಜಸ್ವಾಮಿ ದೇವಸ್ಥಾನದ ಆವರಣದಲ್ಲಿ ಶೃಂಗಾರ ಮಾಡಲಾಗಿದ್ದ ತೇರಿಗೆ ಬೆಳಗ್ಗೆ ೯.೩೦ ಗಂಟೆಯ ಸಮಯಕ್ಕೆ ದೇವರ ವಿಗ್ರಹವನ್ನು ರಥದಲ್ಲಿ ಪ್ರತಿಷ್ಠಾಪಿಸಿದ್ದರು.

೧೨.೪೫ ರ ಸಮಯದಲ್ಲಿ ತಹಸೀಲ್ದಾರ್ ಟಿ.ರಮೇಶ್‌ ಬಾಬು ಲಕ್ಷ್ಮೀ ವರದರಾಜಸ್ವಾಮಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ದೇವಸ್ಥಾನದ ಆವರಣದಿಂದ ಚಾಮರಾಜನಗರ-ಗುಂಡ್ಲುಪೇಟೆ ರಸ್ತೆಯಲ್ಲಿ ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ತೇರಿನ ಹಗ್ಗ ಎಳೆಯಲು ಶುರು ಮಾಡಿ ಗ್ರಾಮದ ಶೃಂಗಾರ ಆಂಜನೇಯಸ್ವಾಮಿ ದೇವಾಲಯದ ಸುತ್ತು ಹಾಕಿ ನಂತರ ಚಾಮರಾಜನಗರ-ಗುಂಡ್ಲುಪೇಟೆ ರಸ್ತೆಯಲ್ಲಿ ಸಾಗಿ ದೇವಸ್ಥಾನದ ಆವರಣದಕ್ಕೆ ತಲುಪಿತು. ಕಂದೇಗಾಲ ಜಾತ್ರೆಯಲ್ಲಿ ತೇರಿನ ಚಕ್ರಕ್ಕೆ ಸಿಲುಕು ಭಕ್ತರಿಬ್ಬರು ಸಾವನ್ನಪ್ಪಿದ್ದ ಘಟನೆ ಮರು ಕಳುಹಿಸಬಾರದು ಎಂದು ತೇರಿನ ಚಕ್ರದ ಸುತ್ತ ಪೊಲೀಸರು ಇದ್ದ ಕಾರಣ ತೇರು ಯಾವುದೇ ಅಡೆ ತಡೆ ಇಲ್ಲದೆ ಸಾಗಿತು. ರಥ ಸಾಗುವ ಮುಂದೆ ಗೊಂಬೆ ಕುಣಿತ, ಗೊರವರ ಕುಣಿತ, ಕಂಸಾಳೆ ಕುಣಿತದ ಜತೆಗೆ ಮಂಗಳವಾದ್ಯ ಮೊಳಗುತ್ತಿದ್ದರೆ ಭಕ್ತರು ತೇರಿನ ಮುಂದೆ ನಡೆದುಕೊಂಡು ಗ್ರಾಮದ ನೂರಾರು ಮಂದಿ ಯುವಕರು ಕುಣಿದು ಕುಪ್ಪಳಿಸಿದರು. ರಥ ಸಾಗುವ ದಾರಿಯ ೨ ಬದಿಯ ಮನೆಯ ಹಾಗೂ ಅಂಗಡಿಯ ಮುಂದೆ ಪಾನಕ, ಮಜ್ಜಿಗೆ, ನೀರು ವಿತರಿಸಿದರು.ಇನ್ನು ಕೆಲ ಹರಕೆ ಹೊತ್ತವರು ಉಪಹಾರದ ವ್ಯವಸ್ಥೆ ಮಾಡಿ ಜಾತ್ರೆಗೆ ಬಂದ ಭಕ್ತರಿಗೆ ನೀಡಿದರು. ಲಕ್ಷ್ಮೀ ವರದರಾಜಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಸಹಸ್ರಾರು ಭಕ್ತರ ಜೊತೆಗೆ ಜಿಲ್ಲೆ ಹಾಗೂ ನೆರೆಯ ತಮಿಳುನಾಡು ಮತ್ತು ಕೇರಳ ರಾಜ್ಯದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬೇಗೂರು ಪೊಲೀಸ್‌ ಠಾಣೆಯ ಸರ್ಕಲ್‌ ಇನ್ಸ್‌ಪೆಕ್ಟರ್‌ ವಿ.ಸಿ.ವನರಾಜು ನೇತೃತ್ವದಲ್ಲಿ ಗುಂಡ್ಲುಪೇಟೆ ಪೊಲೀಸ್‌ ಇನ್ಸ್ ಪೆಕ್ಟರ್‌ ಎಸ್.ಪರಶಿವಮೂರ್ತಿ,ಸಬ್‌ ಇನ್ಸ್‌ಪೆಕ್ಟರ್‌ ಗಳಾದ ಚರಣ್‌ ಗೌಡ,ಸಾಹೇಬಗೌಡ,ಈಶ್ವರ್ ಹಾಗು ಸಿಬ್ಬಂದಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಡಿಎಸ್‌ಪಿ ಲಕ್ಷ್ಮಯ್ಯ ಕೂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಸ್ಥಳೀಯ ಪೊಲೀಸರಿಗೆ ಸಲಹೆ ನೀಡಿದರು. ತೆರಕಣಾಂಬಿ ಠಾಣೆಯ ಪೊಲೀಸರು ಮೈಕ್ ಮೂಲಕ ಭಕ್ತರಿಕೆ ಜೇಬು, ಸರಗಳ್ಳರಿದ್ದಾರೆ ಎಂದು ಎಚ್ಚರಿಕೆ ನೀಡುತ್ತಿದ್ದರು.ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸರು ನಿಗಾ ವಹಿಸಿದ್ದರು.‌