ಸಾರಾಂಶ
ಅಫಜಲ್ಪುರ ದುಧನಿ ರಾಷ್ಟ್ರೀಯ ಹೆದ್ದಾರಿಯ ಮಾದಾಬಾಳ ತಾಂಡಾದ ಬಳಿ ದ್ವಿಚಕ್ರ ವಾಹನ ಹಾಗೂ ಇರ್ಟಿಗಾ ಕಾರಿನ ನಡುವೆ ಅಪಘಾತ ಸಂಭವಿಸಿದ್ದು ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಭಾನುವಾರ ಬೆಳಗ್ಗೆ ಜರುಗಿದೆ.
ಕನ್ನಡಪ್ರಭ ವಾರ್ತೆ ಚವಡಾಪುರ
ಅಫಜಲ್ಪುರ ದುಧನಿ ರಾಷ್ಟ್ರೀಯ ಹೆದ್ದಾರಿಯ ಮಾದಾಬಾಳ ತಾಂಡಾದ ಬಳಿ ದ್ವಿಚಕ್ರ ವಾಹನ ಹಾಗೂ ಇರ್ಟಿಗಾ ಕಾರಿನ ನಡುವೆ ಅಪಘಾತ ಸಂಭವಿಸಿದ್ದು ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಭಾನುವಾರ ಬೆಳಗ್ಗೆ ಜರುಗಿದೆ.ಮೃತರನ್ನು ಮಹಾರಾಷ್ಟ್ರದ ಸಾತಾರದ ಅಜೀತ ನಾಡಗೌಡ(44) ಹಾಗೂ ಮಹೇಶ ದುರ್ಗೆ(27) ಎಂದು ಗುರುತಿಸಲಾಗಿದೆ. ಇಬ್ಬರು ಅಫಜಲ್ಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪೂರದ ದತ್ತಾತ್ರೇಯ ಮಹಾರಾಜರ ದರ್ಶನ ಮುಗಿಸಿಕೊಂಡು ಮರಳಿ ಸಾತಾರ ಕಡೆಗೆ ಹೊರಟಿದ್ದಾಗ ಮುಂಬೈ ಮೂಲದ ಇರ್ಟಿಗಾ ಕಾರಿನಲ್ಲಿ ಸುಕ್ಷೇತ್ರ ದೇವಲ ಗಾಣಗಾಪೂರದ ದತ್ತಾತ್ರೇಯರ ದರ್ಶನಕ್ಕೆಂದು ಕುಟುಂಬ ಸಮೇತರಾಗಿ ಬರುತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ದೇವರ ದರ್ಶನ ಮುಗಿಸಿ ಮನೆಗೆ ಹಿಂದಿರುಗಬೇಕಿದ್ದವರು ಮಸಣ ಸೇರುವಂತಾಯಿತು ಎಂದು ಅಪಘಾತ ಸ್ಥಳದಲ್ಲಿ ಜಮಾವಣೆಗೊಂಡಿದ್ದ ಜನ ಮಾತನಾಡಿಕೊಳ್ಳುವಂತಾಯಿತು.
ಸ್ಥಳಕ್ಕೆ ಅಫಜಲ್ಪುರ ಪೊಲೀಸ್ ಠಾಣೆಯ ಕ್ರೈಂ ಪಿಎಸ್‌ಐ ಸಿದ್ದೇಶ್ವರ ಗೆರಡೆ, ಸಿಪಿಐ ಬಾಸು ಚವ್ಹಾಣ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಫಜಲ್ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.