ಸಾರಾಂಶ
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ, ಬಿಜೆಪಿ ಮಂಡಲ, ವಿವಿಧ ಸಂಘಟನೆಗಳ ಆಶ್ರಯದಲ್ಲಿ ರಾಷ್ಟ್ರರಕ್ಷಣೆಗಾಗಿ ನಾಗರಿಕರು ಎಂಬ ವಿಚಾರದಡಿ ಗುರುವಾರ ಪಟ್ಟಣದಲ್ಲಿ ತಿರಂಗಾ ಯಾತ್ರೆ ನಡೆಸಲಾಯಿತು.ಪಟ್ಟಣದ ಇಜಾರಿ ಸಿರಸಪ್ಪ ವೃತ್ತದಿಂದ ಹೊಸಪೇಟೆ ರಸ್ತೆ ಮೂಲಕ ಐ.ಬಿ. ವೃತ್ತಕ್ಕೆ ಆಗಮಿಸಿ ಅಲ್ಲಿ ಬಹಿರಂಗ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನೀಲಗುಂದ ಗುಡ್ಡದ ವಿರಕ್ತಮಠದ ಚೆನ್ನಬಸವ ಶಿವಯೋಗಿಗಳು, ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದೊಳಗಿನ ಆಂತರಿಕ ಭಯೋತ್ಪಾದನೆ ಮಟ್ಟ ಹಾಕಬೇಕು. ಗಡಿಯನ್ನು ಬೇಲಿಯೇ ನುಂಗಿದಂತೆ ದೇಶದಲ್ಲಿ ಇರುವ ಕೆಲವರು ಭಯೋತ್ಪಾದಕ ಕೃತ್ಯಗಳಿಗೆ ಸಹಕಾರ ನೀಡುತ್ತಿದ್ದಾರೆ, ಹೀಗಾದರೆ ದೇಶ ಹೇಗೆ ಉಳಿಯಲಿಕ್ಕೆ ಸಾಧ್ಯ ಎಂದು ಹೇಳಿದರು.
ಇಲ್ಲಿಯ ಅನ್ನ, ನೀರು ಸೇವಿಸಿ, ದೇಶದ್ರೋಹದ ಕೆಲಸ ಖಂಡನೀಯ ಎಂದ ಶ್ರೀಗಳು, ಯುವಕರ ಕೈಯಲ್ಲಿ ದೇಶದ ಆಸ್ತಿತ್ವ ಇದೆ, ಯುವಕರು ಜಾಗ್ರತರಾಗಬೇಕು ಎಂದು ಹೇಳಿದರು.ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವರೆಡ್ಡಿ ಮಾತನಾಡಿ, 10 ವರ್ಷಗಳ ಹಿಂದಿನ ಭಾರತ ಈಗಿಲ್ಲ, ನಮ್ಮ ಸೈನ್ಯದ ಜತೆ ತಂತ್ರಜ್ಞಾನ ಪ್ರಬಲವಾಗಿದೆ. ಪಕ್ಷಾತೀತವಾಗಿ ಎಲ್ಲರೂ ದೇಶದ ಪರವಾಗಿ ನಿಲ್ಲಬೇಕು ಎಂದು ಹೇಳಿದರು.
ಮಾಜಿ ಸೈನಿಕ ರೇಖಪ್ಪ ಮಾತನಾಡಿ, ಪಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಉಗ್ರರನ್ನು ನಮ್ಮ ಸೈನಿಕರು ಸದೆಬಡಿದಿದ್ದಾರೆ. ಆಪರೇಷನ್ ಸಿಂದೂರ ಯಶಸ್ವಿಯಾಗಿದೆ. ಉಗ್ರವಾದ ದೇಶಕ್ಕೆ ಶಾಪ. ಎಲ್ಲರೂ ಸೇರಿ ಅದನ್ನು ಹಿಮ್ಮೆಟಿಸಬೇಕು ಎಂದು ಹೇಳಿದರು.ಬಿಜೆಪಿ ಮಂಡಲ ಅಧ್ಯಕ್ಷ ಕಲ್ಲಹಳ್ಳಿ ಲಕ್ಷ್ಮಣ ಮಾತನಾಡಿ, ಪಹಲ್ಗಾಮ್ ದಾಳಿಗೆ ಪ್ರತೀಕಾರವನ್ನು ನರೇಂದ್ರ ಮೋದಿ ಅವರು ಮಾಡಿದ್ದಾರೆ. ದೇಶದಲ್ಲಿ ಹಿಂದಿನ ಪರಿಸ್ಥಿತಿ ಈಗಿಲ್ಲ. ದೇಶ ಎಲ್ಲ ರೀತಿಯಲ್ಲೂ ಸದೃಢವಾಗಿದೆ ಎಂದು ನುಡಿದರು.
ಬಿಜೆಪಿ ಹಿರಿಯ ಮುಖಂಡ ಜಿ. ನಂಜನಗೌಡ ಮಾತನಾಡಿ, ಉಗ್ರವಾದಿಗಳನ್ನು ಮಟ್ಟಹಾಕಲು ಪ್ರಧಾನಿ ಮೋದಿ ಪಣ ತೊಟ್ಟಿದ್ದಾರೆ. ಪಾಕಿಸ್ತಾನ 11 ಏರ್‌ಬೇಸ್‌ಗಳನ್ನು ಧ್ವಂಸ ಮಾಡಲಾಗಿದೆ. ಇದರಿಂದ ನಮ್ಮ ಶಕ್ತಿ ಪ್ರಪಂಚಕ್ಕೆ ಗೊತ್ತಾಗಿದೆ ಎಂದು ಹೇಳಿದರು.ಪಹಲ್ಗಾಮ್‌ನಲ್ಲಿ ಹತರಾದ 26 ಜನರ ಆತ್ಮಕ್ಕೆ ಶಾಂತಿ ಸಿಗಲೆಂದು ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು. ನಿವೃತ್ತ ಸೈನಿಕರ ಸಂಘದ ತಾಲೂಕು ಅಧ್ಯಕ್ಷ ಚೆನ್ನಬಸಪ್ಪ, ಬಿಜೆಪಿ ಮುಖಂಡ ಬಾಗಳಿ ಕೊಟ್ರೇಶಪ್ಪ ಮಾತನಾಡಿದರು.
ಹಿರಿಯ ಮುಖಂಡ ಆರುಂಡಿ ನಾಗರಾಜ, ಎಂ.ಪಿ. ನಾಯ್ಕ, ಮುದುಕನವರ್ ಶಂಕರ, ಉದಯಕುಮಾರ, ಕಣವಿಹಳ್ಳಿ ಮಂಜುನಾಥ, ಎಸ್.ಪಿ. ಲಿಂಬ್ಯಾನಾಯ್ಕ, ಓಂಕಾರಗೌಡ, ಮುತ್ತಿಗೆ ವಾಗೀಶ, ಸಣ್ಣ ಹಾಲಪ್ಪ, ಹಲುವಾಗಲು ದ್ಯಾಮಣ್ಣ, ಜವಳಿ ಮಹೇಶ, ಬಿ.ವೈ. ವೆಂಕಟೇಶನಾಯ್ಕ, ನಿವೃತ್ತ ಸೈನಿಕ ಅನಿಲ್ , ಕುಸುಮಾ ಜಗದೀಶ, ಸ್ವಪ್ನಾ, ರೇಖಾ, ವೀಣಾ, ಸೌಮ್ಯಾ, ಕಡೇಮನಿ ಸಂಗಮೇಶ, ಚೆನ್ನನಗೌಡ, ಶಾನುಬೋಗರ ಕೆಂಚಪ್ಪ, ಶ್ರೀಮತಿ, ಹರಾಳು ಅಶೋಕ, ಮೈದೂರು ಮಲ್ಲಿಕಾರ್ಜುನ, ನಾಗರಾಜ ಪಾಟೀಲ್ ಪಾಲ್ಗೊಂಡಿದ್ದರು.