ಸಾರಾಂಶ
ಭದ್ರತೆ ಹೆಚ್ಚಿಸಿದ್ದ ವಿಜಯನಗರ ಜಿಲ್ಲಾ ಪೊಲೀಸರು, ಪ್ರಮುಖ ಸ್ಥಳಗಳಲ್ಲಿ ತಪಾಸಣೆಕನ್ನಡಪ್ರಭ ವಾರ್ತೆ ಹೊಸಪೇಟೆ
ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆ ಹಂಪಿ, ತುಂಗಭದ್ರಾ ಜಲಾಶಯದಲ್ಲಿ ವಿಜಯನಗರ ಜಿಲ್ಲಾ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.ಹಂಪಿಗೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುವ ಬಗ್ಗೆ ಕೇಂದ್ರ ಹಾಗೂ ರಾಜ್ಯ ಗುಪ್ತಚರ ಇಲಾಖೆಗಳ ಮಾಹಿತಿ ಹಿನ್ನೆಲೆ ಜಿಲ್ಲಾ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ. ಹಂಪಿಗೆ ಆಗಮಿಸುವ ವಾಹನಗಳನ್ನು ಕೂಡ ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ. ಇನ್ನು ಪೊಲೀಸರು ಮಫ್ತಿಯಲ್ಲಿ ತಿರುಗಾಡಿ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನದ ಮೇಲೆ ನಿಗಾ ಇಟ್ಟಿದ್ದಾರೆ.
ಹಂಪಿಗೆ ಪ್ರವಾಸಕ್ಕೆ ಆಗಮಿಸುವ ದೇಶ, ವಿದೇಶಿ ಪ್ರವಾಸಿಗರಿಗೆ ಭದ್ರತೆ ಒದಗಿಸುವುದಕ್ಕಾಗಿ ಹೋಟೆಲ್, ರೆಸಾರ್ಟ್, ಹೋಂ ಸ್ಟೇಗಳಲ್ಲೂ ಪೊಲೀಸರು ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಅಲ್ಲದೇ, ಹೋಟೆಲ್, ಹೋಂ ಸ್ಟೇ ಮಾಲೀಕರಿಗೂ ನಿಯಮ ಪಾಲನೆಗೂ ಸೂಚಿಸಿದ್ದಾರೆ.ಹಂಪಿ, ತುಂಗಭದ್ರಾ ಜಲಾಶಯದ ಬಳಿಯೂ ಪೊಲೀಸರು ಭದ್ರತೆ ಹೆಚ್ಚಿಸಿದ್ದು, ತೀವ್ರ ನಿಗಾ ವಹಿಸಲು ಉನ್ನತಮಟ್ಟದಿಂದ ಸೂಚನೆ ಬಂದ ಹಿನ್ನೆಲೆ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.
ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಾಲಯ, ಸಾಸಿವೆ ಕಾಳು ಗಣಪತಿ ಮಂಟಪ, ವಿಜಯ ವಿಠಲ ದೇವಾಲಯ, ಕೋಟೆ ಆಂಜನೇಯ, ಕಡ್ಡಿರಾಂಪುರ ಕ್ರಾಸ್ ಸೇರಿದಂತೆ ಕೆಲ ಪ್ರಮುಖ ಸ್ಮಾರಕಗಳ ಬಳಿಯೂ ಪೊಲೀಸರು ನಿಗಾವಹಿಸಿದ್ದಾರೆ.ಇನ್ನೂ ತುಂಗಭದ್ರಾ ಜಲಾಶಯದ ಬಳಿಯೂ ಪೊಲೀಸರು ಹಾಗೂ ತುಂಗಭದ್ರಾ ಮಂಡಳಿ ಭದ್ರತಾ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ. ಇನ್ನೂ ಹಂಪಿಯಲ್ಲೂ ಕೇಂದ್ರ ಪುರಾತತ್ವ ಇಲಾಖೆಯ ಭದ್ರತಾ ಸಿಬ್ಬಂದಿ ಕೂಡ ಅನುಮಾನಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಟ್ಟಿದ್ದಾರೆ.
ಕಾಶ್ಮೀರಕ್ಕೆ ತೆರಳಿದ್ದವರು ಸೇಫ್:ವಿಜಯನಗರ ಜಿಲ್ಲೆಯಿಂದ ಕಾಶ್ಮೀರಕ್ಕೆ ತೆರಳಿದ್ದ ಹರಪನಹಳ್ಳಿಯ ನಾಲ್ವರು ಪ್ರವಾಸಿಗರು ಸುರಕ್ಷಿತರಾಗಿದ್ದಾರೆ. ಉಗ್ರ ದಾಳಿ ನಡೆದ ಘಟನಾ ಸ್ಥಳದಿಂದ ಹರಪನಹಳ್ಳಿ ನಿವಾಸಿಗಳು ದೂರ ಇದ್ದರು.
ಹರಪನಹಳ್ಳಿಯ ತೆಗ್ಗಿನಮಠದ ಬಿಇಡಿ ಕಾಲೇಜಿನ ಡೀನ್ ಟಿ.ಎಂ. ರಾಜಶೇಖರ್ ಕುಟುಂಬ ಸಮೇತವಾಗಿ ತೆರಳಿದ್ದರು.ರಾಜಶೇಖರ ಅವರ ಪತ್ನಿ ಉಮಾದೇವಿ, ಮಗಳು ಗೌರಿಕಾ, ಅಳಿಯ ಕೊಟ್ರಬಸಯ್ಯ ಜೊತೆ ಕಾಶ್ಮೀರಕ್ಕೆ ತೆರಳಿದ್ದರು. ಘಟನೆ ನಡೆದ ಬಳಿಕ ಟಿಕೆಟ್ ಬುಕಿಂಗ್ ಮಾಡಿ ನಾಲ್ವರು ವಾಪಾಸ್ ಆಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ವಿಜಯನಗರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸರು ಕೂಡ ಜಿಲ್ಲೆಯಿಂದ ಕಾಶ್ಮೀರಕ್ಕೆ ತೆರಳಿದ್ದವರ ಮಾಹಿತಿ ಪಡೆಯುತ್ತಿದ್ದಾರೆ.