ಸಾರಾಂಶ
ಶಿವಮೊಗ್ಗ: ನವದೆಹಲಿಯಲ್ಲಿ ನಡೆದ ಬ್ಲಾಸ್ಟ್ ಪ್ರಕರಣ ಭಯೋತ್ಪಾದಕ ದಾಳಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಶಿವಮೊಗ್ಗದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್ ಭವನ, ಬಿಜೆಪಿ ಕೇಂದ್ರ ಕಚೇರಿ, ವಾಯುಪಡೆ ಕಚೇರಿ, ಸೇನಾ ಭವನ ಉಗ್ರರ ಟಾರ್ಗೆಟ್ ಆಗಿದ್ದವು. ಇಂಥ ಸಂದಿಗ್ಧ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದರು.ದ್ವಂದ್ವ ಹೇಳಿಕೆ ನೀಡದೆ ದೇಶದ ಪರವಾಗಿ ಒಗ್ಗಟ್ಟಿನ ಹೇಳಿಕೆ ನೀಡಬೇಕು. ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿ ಈ ಕ್ಷಣದವರೆಗೂ ಟೆರರಿಸ್ಟ್ ಅಟ್ಯಾಕ್ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಕಾಂಗ್ರೆಸ್ ಪಕ್ಷದ ಹಿರಿಯರು ಮನಬಂದಂತೆ ಮಾತನಾಡುತ್ತಿದ್ದಾರೆ. ಬಿಹಾರ್ ಚುನಾವಣೆಗೆ ಲಿಂಕ್ ಮಾಡುವ ಷಡ್ಯಂತ್ರ ಕೂಡ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ನಾಯಕರ ಹೇಳಿಕೆಗಳು ಮೂರ್ಖತನದ ಪರಮಾವಧಿ ಎಂದು ಕುಟುಕಿದರು.ಮೂರ್ಖತನ ಅಷ್ಟೇ ಅಲ್ಲ ದೇಶದ್ರೋಹದ ಕೆಲಸ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ದೇಶದ ರಾಜಕೀಯ ಪಕ್ಷಗಳು ಒಂದಾಗಿ ಚಿಂತನೆ ಮಾಡಲು ಕಾಂಗ್ರೆಸ್ ನಾಯಕರಲ್ಲಿ ಮನವಿ ಮಾಡುತ್ತೇನೆ. ಕಾಂಗ್ರೆಸ್ ಹಿರಿಯರು ಅಮಿತ್ ಶಾ ಅವರಿಗೆ ಬಳೆ ಕಳಿಸುವ ಕೆಲಸ ಮಾಡಿದ್ದಾರೆ. ಸ್ವಾತಂತ್ರ ಬಂದಾಗಿದ್ದ ನಡೆದ ಘಟನೆಗಳ ಅವಲೋಕನ ಮಾಡಿದರೆ ಕಾಂಗ್ರೆಸ್ ನಾಯಕರು ಎಷ್ಟು ಬಾರಿ ಬಳೆ ಹಾಕಿಕೊಳ್ಳಬೇಕಿತ್ತು. ಕಾಂಗ್ರೆಸ್ ನಾಯಕರು ಬಳೆ ಫ್ಯಾಕ್ಟರಿಯನ್ನೇ ತೆರೆಯ ಬೇಕಿತ್ತು ಎಂದು ಹರಿಹಾಯ್ದರು. ಕಾಂಗ್ರೆಸ್ ಅವಧಿಯಲ್ಲಿ ಉಗ್ರರ ದಾಳಿಗೆ ಸಾಕಷ್ಟು ಪ್ರಾಣ ಹಾನಿ ಆಗಿದೆ. ಪ್ರಧಾನಿ ಗೃಹ ಮಂತ್ರಿಗೆ ಉಗ್ರದ ಚಟುವಟಿಕೆ ನಿಯಂತ್ರಣಕ್ಕೆ ಬೆಂಬಲಿಸುವ ಕೆಲಸ ಮಾಡಿ. ಉಗ್ರರ ಚಟುವಟಿಕೆಯಲ್ಲಿ ವೈದ್ಯರ ಭಾಗವಹಿಸಿದ ಹಿನ್ನೆಲೆ ಗೃಹ ಮಂತ್ರಿ ಈ ಬಗ್ಗೆ ಚಿಂತನೆ ನಡೆಸುತ್ತಾರೆ ಎಂದರು.
ಕಾಂಗ್ರೆಸ್ ರೈತರ ಹಿತ ಕಾಯುವ ಕೆಲಸ ಮಾಡಲಿ: ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಸಿಎಂ ಸಭೆಯ ಬಳಿಕ ಬೀದರ್ ಬಾಗಲಕೋಟೆ, ಬಿಜಾಪುರ ಮೊದಲಾದ ಕಡೆ ಕಬ್ಬು ಬೆಳೆಗಾರರ ಪ್ರತಿಭಟನೆ ನಡೆಯುತ್ತಿದೆ. ಕಾಂಗ್ರೆಸಿಗರು ತಮ್ಮ ಒಳ ಜಗಳ ಬದಿಗಿಟ್ಟು ರೈತರ ಹಿತ ಕಾಯುವ ಕೆಲಸ ಮಾಡಬೇಕು ಎಂದರು.ಬೆಳೆಗಾರರ ಹೋರಾಟದ ವೇಳೆ ಉಸ್ತುವಾರಿ ಸಚಿವರು ಬೆಂಗಳೂರಿನಲ್ಲಿ ಮಲಗಿದ್ದರು. ರಾಜ್ಯದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಇನ್ನೂ ಆರಂಭ ಆಗಿಲ್ಲ. 30 ದಿನದೊಳಗೆ ಬೆಳೆ ಪರಿಹಾರ ನೀಡುವುದಾಗಿ ಕಂದಾಯ ಸಚಿವರು ಹೇಳಿಕೆ ನೀಡಿದ್ದರು. ಎರಡು ಜಿಲ್ಲೆಗಳ ಬೆಳೆ ಪರಿಹಾರ ಕೂಡ ಸಂಪೂರ್ಣವಾಗಿ ನೀಡಿಲ್ಲ . ರೈತರ ಸಮಸ್ಯೆಗೆ ಸ್ಪಂದನೆ ಮಾಡದೆ ಹೋದರೆ ವಿಕೋಪಕ್ಕೆ ಹೋಗುತ್ತದೆ. ಬೆಳೆ ಪರಿಹಾರ ಕಬ್ಬಿನ ಬೆಂಬಲ ಬೆಲೆ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.
ಯಾವ ಪುಣ್ಯಾತ್ಮ ಸರ್ಕಾರಕ್ಕೆ ಸಲಹೆ ನೀಡುತ್ತಾನೆ ಗೊತ್ತಿಲ್ಲ. ಅಸಂಘಟಿತ ಕಾರ್ಮಿಕರಿಗೆ ಕಲ್ಯಾಣದ ನೆಪದಲ್ಲಿ ಪೆಟ್ರೋಲ್ ಮೇಲೆ ಒಂದು ಪರ್ಸೆಂಟ್ ಸೆಸ್ ಹಾಕಲು ಹೊರಟಿದೆ. ಪೆಟ್ರೋಲ್, ಡೀಸೆಲ್ ಮೇಲೆ ಮೂರು ಬಾರಿ ಬೆಲೆ ಏರಿಕೆ ಮಾಡಿದ್ದಾರೆ. ಕಾರ್ಮಿಕರ ಕಲ್ಯಾಣದ ನೆನಪಲ್ಲಿ ತಮ್ಮ ಕಲ್ಯಾಣದ ಬಗ್ಗೆ ಚಿಂತನೆ ಮಾಡಿದ್ದಾರೆ. ಇದರ ಹಿಂದೆ ಒಂದು ಷಡ್ಯಂತ್ರ ಇದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ದೂರಿದರು.ರಸ್ತೆಗುಂಡಿ ಮುಚ್ಚಲು ಇವರಿಂದ ಸಾಧ್ಯವಾಗಿಲ್ಲ. ಬೆಂಗಳೂರಿನಲ್ಲಿ ಹೋರಾಟದ ಫಲವಾಗಿ 3000 ಕೋಟಿ ಕೊಟ್ಟಿದ್ದಾರಂತೆ. ರಾಜ್ಯದ ಯಾವ ಜಿಲ್ಲೆಗಳಲ್ಲಿ ರಸ್ತೆಗುಂಡಿ ಮುಚ್ಚಲು ನಯಾಪೈಸೆ ಕೂಡ ಬಿಡುಗಡೆ ಮಾಡಿಲ್ಲ. ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ನಡೆದ ಬಡಿದಾಟ ಬದಿಗಿಟ್ಟು ರಾಜ್ಯದ ಅಭಿವೃದ್ಧಿ , ಬಡವರ, ರೈತರ ಬಗ್ಗೆ ಕಿಂಚಿತ್ತು ಕಾಳಜಿ ಪ್ರದರ್ಶನ ಮಾಡಲಿ ಎಂದು ತಾಕೀತು ಮಾಡಿದರು.ನಾನು ರೈತರ ಪ್ರತಿಭಟನೆಗೆ ಬೆಂಬಲ ಕೊಟ್ಟಿದಕ್ಕೆ ಬರ್ತಡೆ ನೆಪದಲ್ಲಿ ವಿಜಯೇಂದ್ರ ಶೋ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ನವರ ಆರೋಪ ಮಾಡುತ್ತಿದ್ದಾರೆ. ಶೋ ಕೊಡಲಿಕ್ಕೆ ಅವರು ಬರಬಹುದಿತ್ತಲ್ಲ. ರಾಷ್ಟ್ರೀಯ ಪಕ್ಷದ ಅಧ್ಯಕ್ಷನಾಗಿ ನಾಡಿಗೆ ಅನ್ನ ನೀಡುವ ರೈತನ ಸಮಸ್ಯೆಗೆ ಸ್ಪಂದನೆ ಮಾಡಬೇಕಾಗಿದ್ದು ನನ್ನ ಕರ್ತವ್ಯ ಇದೆ. ವಿರೋಧ ಪಕ್ಷದ ಹಿನ್ನೆಲೆ ನನ್ನ ಜವಾಬ್ದಾರಿ ಪ್ರದರ್ಶನ ಮಾಡಿದ್ದೇನೆ. ಬೆಳಗಾವಿಯಲ್ಲಿ ರೈತರು ಪ್ರತಿಭಟನೆ ನಡೆಸಿದರೆ ಉಸ್ತುವಾರಿ ಸಚಿವರು ಹೋಗಲ್ಲ. ಸಕ್ಕರೆ ಸಚಿವ ಹೋಗಿಲ್ಲ. ಈ ನೆಲೆಯಲ್ಲಿ ಸಚಿವರಿಗಾಗಿ ರೈತರ ಕಾಯುತ್ತಿದ್ದರೂ ಬಾರದಿದ್ದಾಗ ಬಿಜೆಪಿ ರೈತರ ಪ್ರತಿಭಟನೆಗೆ ಪಾಲ್ಗೊಂಡಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಬರ, ನೆರೆ, ಕಬ್ಬಿನ ಸಮಸ್ಯೆ ಎಲ್ಲಾ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಕಡೆ ಬೆಟ್ಟು ತೋರಿಸುವ ಕೆಲಸ ನಡಿತಿದೆ. ಕಾಂಗ್ರೆಸ್ 136 ಸ್ಥಾನ ಗಳಿಸಿ ಸ್ಪಷ್ಟ ಬಹುಮತ ಗಳಿಸಿ ಬೆಂಗಳೂರಿನಲ್ಲಿ ಕೂತ್ಕೊಂಡು ಏನ್ ಮಾಡ್ತಾ ಇದ್ದೀರಿ ? ರಾಜ್ಯ ರಾಜಕಾರಣದ ಬದಲಾವಣೆ ಬಗ್ಗೆ ಆಡಳಿತ ಪಕ್ಷದ ಶಾಸಕರು ಮಾತನಾಡುತ್ತಿದ್ದಾರೆ. ಶಾಸಕಾಂಗ ಸಭೆ ಕೈಗೊಳ್ಳುವ ತೀರ್ಮಾನಕ್ಕೆ ಹೈಕಮಾಂಡ್ ಬದ್ಧವಾಗಬೇಕು ಎಂಬ ಹೇಳಿಕೆ ಹೊರ ಬಿದ್ದಿದೆ ಎಂದರು.
ಬಿಹಾರ್ ಚುನಾವಣಾ ಫಲಿತಾಂಶದಿಂದ ರಾಜ್ಯ ಸರ್ಕಾರದಲ್ಲಿ ಬದಲಾವಣೆಯಾಗುವುದೇ ಎಂಬ ಪ್ರಶ್ನೆಗೆ ಕಾಂಗ್ರೆಸ್ ನಾಯಕರು ಮತ್ತು ಶಾಸಕರ ಹೇಳಿಕೆಗಳೇ ಅದಕ್ಕೆ ಉತ್ತರವಾಗಿದೆ. ಸಂಪುಟ ಸದಸ್ಯರೇ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಸಿಎಲ್‌ಪಿ ತೀರ್ಮಾನ ಅಂತಿಮ ಎನ್ನುತ್ತಿದ್ದಾರೆ. ರಾಜ್ಯ ಸರ್ಕಾರವೆಂದರೆ ಕೇವಲ ಬೆಂಗಳೂರಿಗೆ ಸೀಮಿತವಾಗಿದೆ. ರೈತರ ಮತ್ತು ಜನರ ಯಾವುದೇ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದರು.ಬಿಹಾರ ಚುನಾವಣಾ ಎಕ್ಸಿಟ್ ಪೋಲ್ ವರದಿ ನಿಜವಾಗಲಿದೆ. ಬಿಹಾರದಲ್ಲಿ ಎನ್‌ಡಿಎ ಮೈತ್ರಿ ಕೂಟ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸಂದರ್ಭದಲ್ಲಿ ಶಾಸಕ ಡಿ.ಎಸ್.ಅರುಣ್, ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಮಾಜಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಕೆ.ವಿ.ಅಣ್ಣಪ್ಪ, ರಾಜೇಶ್ ಕಾಮತ್ ಮತ್ತಿತರರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))