ಪಾಲಕರ ಜೇಬು ಸುಡುತ್ತಿದೆ ಪಠ್ಯ ಸಾಮಗ್ರಿ

| Published : Jun 04 2024, 12:31 AM IST

ಸಾರಾಂಶ

ಹುಬ್ಬಳ್ಳಿ- ಧಾರವಾಡದಲ್ಲಿ ನಾಲ್ಕೈದ ವರ್ಷಗಳ ಹಿಂದೆ 40ಕ್ಕೂ ಅಧಿಕ ನೋಟ್‌ಬುಕ್‌ ತಯಾರಿಸುವ ಫ್ಯಾಕ್ಟರಿಗಳಿದ್ದವು. ಕೊರೋನಾದ ವೇಳೆ ಹಾಗೂ ಕಚ್ಚಾ ಸಾಮಗ್ರಿ ಕೊರತೆಯ ಹಿನ್ನೆಲೆಯಲ್ಲಿ ಈಗ 30ಕ್ಕೂ ಅಧಿಕ ಫ್ಯಾಕ್ಟರಿ ಬಂದ್‌ ಆಗಿವೆ. ಈಗ ಗ್ರಾಹಕರ ಬೇಡಿಕೆಗಳ ಅನುಗುಣವಾಗಿ ಬೇರೆ ಜಿಲ್ಲೆ, ಬೇರೆ ರಾಜ್ಯಗಳಿಂದ ನೋಟ್‌ಬುಕ್‌ ತಂದು ಮಾರಾಟ ಮಾಡಲಾಗುತ್ತಿದೆ.

ಹುಬ್ಬಳ್ಳಿ:

ಈಗಾಗಲೇ ಶಾಲೆ ಆರಂಭವಾಗಿದ್ದು, ಮಕ್ಕಳು ನಗುನಗುತ್ತಾ ಶಾಲೆಗೆ ತೆರಳುತ್ತಿದ್ದರೆ, ಇತ್ತ ಪಾಲಕರಿಗೆ ಪಠ್ಯ ಸಾಮಗ್ರಿಗಳ ಬೆಲೆ ಏರಿಕೆ ಜೇಬು ಸುಡುತ್ತಿದೆ!

ಮೇ 31ರಿಂದ ಶಾಲೆಗಳು ಆರಂಭವಾಗಿವೆ. ಶಿಕ್ಷಕರು ಮಕ್ಕಳನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದೂ ಆಯಿತು. ಇನ್ನೇನಿದ್ದರೂ ಮಕ್ಕಳ ಕಲಿಕೆಗೆ ಬೇಕಾಗುವ ಪಠ್ಯ ಸಾಮಗ್ರಿ ಕೊಡಿಸುವ ಜವಾಬ್ದಾರಿ ಪಾಲಕರದ್ದು. ಆದರೆ, ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಕೇಳಿದರೆ ಪಾಲಕರು ಕಂಗಾಲಾಗುವಂತಾಗಿದೆ. ಕಲಿಕೆಗೆ ಅವಶ್ಯಕವಾಗಿ ಬೇಕಾಗುವ ಬ್ಯಾಗ್, ನೋಟ್‌ಬುಕ್, ಕಂಪಾಸ್‌ ಬಾಕ್ಸ್‌, ಪೆನ್‌, ಪೆನ್ಸಿಲ್‌, ಶಾಲಾ ಸಮವಸ್ತ್ರ, ಶೂ, ಸಾಕ್ಸ್‌ ಸೇರಿದಂತೆ ಪಠ್ಯ ಸಾಮಗ್ರಿ ಖರೀದಿಸುವುದು ಸಾಮಾನ್ಯ. ಆದರೆ, ಈ ವರ್ಷ ಬೆಲೆ ಏರಿಕೆಯಿಂದಾಗಿ ಪಾಲಕರು ಪಠ್ಯ ಸಾಮಗ್ರಿ ಕೊಂಡುಕೊಳ್ಳಲು ಹಿಂದೆಮುಂದೆ ನೋಡುವಂತಾಗಿದೆ.

ಖರೀದಿ ಜೋರು:

ಎರಡ್ಮೂರು ದಿನಗಳಿಂದ ನಗರದಲ್ಲಿರುವ ಬಹುತೇಕ ನೋಟ್‌ಬುಕ್‌, ಬ್ಯಾಗ್‌ಗಳ ಅಂಗಡಿಗಳು ಜನರಿಂದ ತುಂಬಿವೆ. ಪಾಲಕರು ತಮ್ಮ ಮಕ್ಕಳನ್ನು ಕರೆತಂದು ಗಂಟೆಗಟ್ಟಲೆ ನಿಂತು ಮಕ್ಕಳಿಗೆ ಬೇಕಾಗಿರುವ ಪಠ್ಯ ಸಾಮಗ್ರಿ ಹಾಗೂ ಬ್ಯಾಗ್‌ ಖರೀದಿಸುತ್ತಿದ್ದಾರೆ. ಬೆಲೆ ಏರಿಕೆಯಾದರೂ ಅನಿವಾರ್ಯವಾಗಿ ಖರೀದಿಸುವ ಸ್ಥಿತಿ ಉದ್ಭವವಾಗಿರುವುದಂತೂ ಸುಳ್ಳಲ್ಲ.

ಶೇ. 10ರಷ್ಟು ಬೆಲೆ ಏರಿಕೆ:

ನೋಟ್‌ಬುಕ್‌ಗಳ ಬೆಲೆ ಶೇ. 10ರಷ್ಟು ಏರಿಕೆಯಾಗಿದೆ. ಹಿಂದೆ ₹ 30ರಿಂದ ₹ 35ಕ್ಕೆ ದೊರೆಯುತ್ತಿದ್ದ 200 ಪುಟಗಳ ನೋಟ್‌ಬುಕ್‌ ಇಂದು ₹ 35ರಿಂದ 40ಕ್ಕೆ ಮಾರಾಟವಾಗುತ್ತಿದೆ. ₹ 30ರಿಂದ ₹100ರ ವರೆಗೆ ದೊರೆಯುತ್ತಿದ್ದ ಕಂಪಾಸ್‌ ಬಾಕ್ಸ್‌ ₹ 50ರಿಂದ ₹ 150, ₹ 200ರ ವರೆಗೆ ಮಾರಾಟವಾಗುತ್ತಿವೆ. ₹100ರಿಂದ ₹150ಕ್ಕೆ ದೊರೆಯುತ್ತಿದ್ದ ಶಾಲಾ ಬ್ಯಾಗ್‌ ಈಗ ₹ 200ರಿಂದ ಸಾವಿರದ ಗಡಿ ದಾಟಿದೆ. ಅದರಂತೆ ಶೂಗಳ ಬೆಲೆಯಲ್ಲೂ ಏರಿಕೆಯಾಗಿದೆ.

ಇನ್ನು ಕೆಲವು ಖಾಸಗಿ ಶಾಲೆಗಳಲ್ಲಿ ಪಠ್ಯಪುಸ್ತಕದೊಂದಿಗೆ ನೋಟ್‌ಬುಕ್‌, ಬ್ಯಾಗ್‌, ಕಂಪಾಸ್‌ ಬಾಕ್ಸ್‌, ಸಮವಸ್ತ್ರ, ಶೂ, ಸಾಕ್ಸ್‌ ಸೇರಿದಂತೆ ಪಠ್ಯ ಸಾಮಗ್ರಿ ನೀಡಲಾಗುತ್ತಿದೆ. ಅಂತಹ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಪಾಲಕರು ಕಡ್ಡಾಯವಾಗಿ ಶಾಲೆಯಿಂದಲೇ ಖರೀದಿಸುವ ಷರತ್ತು ಹಾಕಲಾಗಿದೆ. ₹1000 ಹಿಡಿದು ₹5, ₹6 ಸಾವಿರ ವರೆಗೆ ನೀಡಿ ಪಠ್ಯ ಸಾಮಗ್ರಿ ಖರೀದಿಸುವ ಪರಿಸ್ಥಿತಿ ಪಾಲಕರದ್ದಾಗಿದೆ. ಶಾಲೆಯಿಂದ ಬೇಡ ಬೇರೆಡೆ ನಾವು ಖರೀದಿಸುತ್ತೇವೆ ಎಂದರೆ, ಅಂತಹ ಮಕ್ಕಳನ್ನು ಶಾಲೆಯಲ್ಲಿ ದಾಖಲಿಸಿಕೊಳ್ಳುವುದಿಲ್ಲ ಎಂಬ ಬೆದರಿಕೆ ಹಾಕುತ್ತಿರುವುದಾಗಿ ಪಾಲಕರು ಅಳಲು ತೋಡಿಕೊಂಡಿದ್ದಾರೆ.

ಒಟ್ಟಾರೆಯಾಗಿ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದು ಒಂದು ಚಿಂತೆಯಾದರೆ, ಮಕ್ಕಳಿಗೆ ನೋಟ್‌ಬುಕ್‌ ಸೇರಿದಂತೆ ಪಠ್ಯ ಸಾಮಗ್ರಿ ಖರೀದಿಸುವುದೇ ಒಂದು ದೊಡ್ಡ ಚಿಂತೆಯಾಗಿ ಮಾರ್ಪಟ್ಟಿರುವುದಂತೂ ಸುಳ್ಳಲ್ಲ.ನೋಟ್‌ಬುಕ್‌ ತಯಾರಿಕಾ ಫ್ಯಾಕ್ಟರಿ ಬಂದ್‌

ಹುಬ್ಬಳ್ಳಿ- ಧಾರವಾಡದಲ್ಲಿ ನಾಲ್ಕೈದ ವರ್ಷಗಳ ಹಿಂದೆ 40ಕ್ಕೂ ಅಧಿಕ ನೋಟ್‌ಬುಕ್‌ ತಯಾರಿಸುವ ಫ್ಯಾಕ್ಟರಿಗಳಿದ್ದವು. ಕೊರೋನಾದ ವೇಳೆ ಹಾಗೂ ಕಚ್ಚಾ ಸಾಮಗ್ರಿ ಕೊರತೆಯ ಹಿನ್ನೆಲೆಯಲ್ಲಿ ಈಗ 30ಕ್ಕೂ ಅಧಿಕ ಫ್ಯಾಕ್ಟರಿ ಬಂದ್‌ ಆಗಿವೆ. ಮೊದಲು ಫ್ಯಾಕ್ಚರಿ ಹೆಚ್ಚಾಗಿರುವುದು ಹಾಗೂ ಸ್ಥಳೀಯವಾಗಿಯೇ ನೋಟ್‌ಬುಕ್‌ ದೊರೆಯುತ್ತಿದ್ದವು. ಸಹಜವಾಗಿಯೇ ಬೆಲೆಗಳು ಸಹ ಕಡಿಮೆಯಾಗಿರುತ್ತಿದ್ದವು. ಆದರೆ, ಈಗ ಗ್ರಾಹಕರ ಬೇಡಿಕೆಗಳ ಅನುಗುಣವಾಗಿ ಬೇರೆ ಜಿಲ್ಲೆ, ಬೇರೆ ರಾಜ್ಯಗಳಿಂದ ನೋಟ್‌ಬುಕ್‌ ತಂದು ಮಾರಾಟ ಮಾಡಲಾಗುತ್ತಿದೆ. ಸಾರಿಗೆ ವೆಚ್ಚ ಕೊಂಚ ಏರಿಕೆಯಾಗುವುದು ಸಹಜ. ಇದರಿಂದಾಗಿಯೂ ಬೆಲೆಗಳಲ್ಲಿ ಅಲ್ಪಪ್ರಮಾಣದ ಏರಿಕೆಯಾಗಿದೆ ಎಂದು ಹುಬ್ಬಳ್ಳಿಯ ವಿನಾಯಕ ಟ್ರೇಡರ್ಸ್‌ನ ಕೈಲಾಶ ಶರ್ಮಾ ಕನ್ನಡಪ್ರಭಕ್ಕೆ ತಿಳಿಸಿದರು.ಅಂಗಡಿಗಳಿಗೆ ತೆರಳಿ ನೋಟ್‌ಬುಕ್‌ಗಳ ಬೆಲೆ ಕೇಳಿದರೆ ಶಾಕ್‌ ಆಗುತ್ತದೆ. ಹಿಂದೆ ₹ 300ರಿಂದ ₹350ಕ್ಕೆ ಡಜನ್‌(12) ನೋಟಬುಕ್‌ ದೊರೆಯುತ್ತಿದ್ದವು. ಈಗ ₹500, ₹550 ನೀಡಬೇಕಿದೆ ಎಂದು ದೇವರಾಜ ಬಳ್ಳಾರಿ ಹೇಳಿದರು.