ನಾಗಮಂಗಲ ತಾಲೂಕಿನ ಹೊಣಕೆರೆ ಹೋಬಳಿ ಮಣ್ಣಹಳ್ಳಿ ಗ್ರಾಮದಲ್ಲಿ ಜವಳಿ ಪಾರ್ಕ್ ನಿರ್ಮಾಣ ಮಾಡಲು ನಿರ್ಧರಿಸಲಾಗಿದ್ದು, ಅದಕ್ಕೆ ಗ್ರಾಮದ ಸರ್ವೇ ನಂ.೨೯೮ರಲ್ಲಿರುವ ೨೮.೨೦ ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಾಗಮಂಗಲ ತಾಲೂಕಿನ ಹೊಣಕೆರೆ ಹೋಬಳಿ ಮಣ್ಣಹಳ್ಳಿ ಗ್ರಾಮದಲ್ಲಿ ಜವಳಿ ಪಾರ್ಕ್ ನಿರ್ಮಾಣ ಮಾಡಲು ನಿರ್ಧರಿಸಲಾಗಿದ್ದು, ಅದಕ್ಕೆ ಗ್ರಾಮದ ಸರ್ವೇ ನಂ.೨೯೮ರಲ್ಲಿರುವ ೨೮.೨೦ ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಸಾರ್ವಜನಿಕ ಉದ್ದೇಶಕ್ಕಾಗಿ ಜವಳಿ ಪಾರ್ಕ್ ನಿರ್ಮಿಸುವ ಸಂಬಂಧ ಜವಳಿ ಅಭಿವೃದ್ಧಿ ಆಯುಕ್ತರು ಕಂದಾಯ ಇಲಾಖೆ ಸಿಬ್ಬಂದಿಯರೊಂದಿಗೆ ಸರ್ವೇ ನಂ. ೨೯೮ರ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಸರ್ಕಾರಿ ಸ್ವಾಮ್ಯದಲ್ಲಿ ಸಿದ್ಧ ಉಡುಪು ಘಟಕಗಳನ್ನು ನಿರ್ಮಿಸಲು ಪ್ರಶಸ್ತವಾದ ಸ್ಥಳವಾಗಿರುವುದು ಕಂಡುಬಂದಿದೆ. ಈ ಪ್ರದೇಶ ಮಳೆಯಾಶ್ರಿತ ಪ್ರದೇಶವಾಗಿರುವುದರಿಂದ ಮಾನವ ಸಂಪನ್ಮೂಲಕ್ಕೆ ಯಾವುದೇ ಕೊರತೆ ಇಲ್ಲ. ಹಾಗಾಗಿ ಭೂಮಿಯನ್ನು ಮಂಜೂರು ಮಾಡುವಂತೆ ಜವಳಿ ಅಭಿವೃದ್ಧಿ ಆಯುಕ್ತರು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಮಣಹಳ್ಳಿ ಗ್ರಾಮದ ಸರ್ವೇ ನಂ.೨೯೮ರ ಸ್ಥಳವು ನಾಗಮಂಗಲ ತಾಲೂಕು ಕೇಂದ್ರದಿಂದ ೧೩ ಕಿ.ಮೀ. ದೂರದಲ್ಲಿದೆ. ಈ ಪ್ರದೇಶ ಗುಡ್ಡ ಮತ್ತು ಇಳಿಜಾರಿನಿಂದ ಕೂಡಿದ್ದು ಪಶ್ಚಿಮಕ್ಕೆ ನೀರಿನ ಕೆರೆ ಇದೆ. ೩ ಕಿ.ಮೀ. ಅಂತರದಲ್ಲಿ ಚಾಮರಾಜನಗರ-ಜೇವರ್ಗಿ ಹೆದ್ದಾರಿ ಸಂಪರ್ಕ ರಸ್ತೆ ಇದೆ. ೩೦ ಕಿ.ಮೀ. ಅಂತರದಲ್ಲಿ ಬೆಂಗಳೂರು-ಮಂಗಳೂರು ಹೆದ್ದಾರಿ ಸಂಪರ್ಕಿಸುವ ರಸ್ತೆ ಇದೆ. ಬೆಂಗಳೂರು ನಗರಕ್ಕೆ ೧೦೦ ಕಿ.ಮೀ. ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ೧೫೫ ಕಿ.ಮೀ., ರೈಲ್ವೆ ನಿಲ್ದಾಣಕ್ಕೆ ೩೦ ಕಿ.ಮೀ. ಅಂತರದಲ್ಲಿದೆ ಎಂದು ತಿಳಿಸಲಾಗಿದೆ.

ನಾಗಮಂಗಲ ಅತಿ ಹಿಂದುಳಿದ ಪ್ರದೇಶವಾಗಿದ್ದು, ತಾಲೂಕಿನಲ್ಲಿ ಯಾವುದೇ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಈ ಪ್ರದೇಶದಲ್ಲಿ ಜವಳಿ ಪಾರ್ಕ್‌ನ್ನು ಸರ್ಕಾರಿ ಒಡೆತನದ ಆ್ಯಂಕರ್ ಯೂನಿಟ್ ಮಾದರಿಯಲ್ಲಿ ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗ ನೀಡುವುದರಿಂದ ಜೀವನಮಟ್ಟ ಸುಧಾರಿಸುವುದಲ್ಲದೆ, ಜನರು ವಲಸೆ ಹೋಗುವುದನ್ನು ತಪ್ಪಿಸಬಹುದು. ಆರ್ಥಿಕ ಬೆಳವಣಿಗೆಯಾಗುವ ದೃಷ್ಟಿಯಿಂದ ಹಾಗೂ ಆ ಭಾಗವು ಅಭಿವೃದ್ಧಿ ಪೂರಕವಾಗಲಿದೆ. ಹಾಗಾಗಿ ಜವಳಿ ಪಾರ್ಕ್ ಸ್ಥಾಪನೆಗೆ ಭೂಮಿಯನ್ನು ಮಂಜೂರು ಮಾಡಿ ಕೈಮಗ್ಗ ಮತ್ತು ಜವಳಿ ಇಲಾಖೆಗೆ ಹಸ್ತಾಂತರಿಸುವಂತೆ ಸರ್ಕಾರವನ್ನು ಕೋರಲಾಗಿದೆ.