ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸಲು ತುಮ್ಮಿನಕಟ್ಟಿಯಲ್ಲಿ ಜವಳಿ ಪಾರ್ಕ್ ಸ್ಥಾಪಿಸುವ ಯೋಜನೆ ರೂಪಿಸಲಾಗಿತ್ತು. ಆದರೆ ಭರವಸೆಗಳ ಮಹಾಪೂರದ ನಡುವೆಯೂ ಈ ಯೋಜನೆ ಇನ್ನೂ ಕಾಗದದ ಮೇಲೆಯೇ ಉಳಿದಿದ್ದು, ಟೇಕಾಫ್ ಆಗುವ ಲಕ್ಷಣಗಳು ಕಾಣುತ್ತಿಲ್ಲ.
ಬಸವರಾಜ ಸರೂರ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರುತಾಲೂಕಿನ ತುಮ್ಮಿನಕಟ್ಟಿ ಗ್ರಾಮವು ದಶಕಗಳಿಂದ ಕೈಮಗ್ಗ ಮತ್ತು ವಿದ್ಯುತ್ ಮಗ್ಗಗಳ ನೇಕಾರಿಕೆಗೆ ರಾಜ್ಯದಲ್ಲೇ ಹೆಸರುವಾಸಿಯಾಗಿದೆ. ಇಲ್ಲಿನ ಸಾವಿರಾರು ಕುಟುಂಬಗಳ ಜೀವನಾಧಾರವಾಗಿರುವ ಜವಳಿ ಉದ್ಯಮಕ್ಕೆ ಆಧುನಿಕ ಸ್ಪರ್ಶ ನೀಡಲು ಮತ್ತು ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸಲು ತುಮ್ಮಿನಕಟ್ಟಿಯಲ್ಲಿ ಜವಳಿ ಪಾರ್ಕ್ ಸ್ಥಾಪಿಸುವ ಯೋಜನೆ ರೂಪಿಸಲಾಗಿತ್ತು. ಆದರೆ ಭರವಸೆಗಳ ಮಹಾಪೂರದ ನಡುವೆಯೂ ಈ ಯೋಜನೆ ಇನ್ನೂ ಕಾಗದದ ಮೇಲೆಯೇ ಉಳಿದಿದ್ದು, ಟೇಕಾಫ್ ಆಗುವ ಲಕ್ಷಣಗಳು ಕಾಣುತ್ತಿಲ್ಲ.
ಯೋಜನೆಯ ಹಿನ್ನೆಲೆ ಮತ್ತು ಉದ್ದೇಶ:ರಾಣಿಬೆನ್ನೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹತ್ತಿ ಬೆಳೆಗಾರರು ಹಾಗೂ ನೇಕಾರರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಈ ಹಿಂದೆ ಹನುಮನಮಟ್ಟಿಯಲ್ಲಿ 16 ಎಕರೆ ಜಾಗವನ್ನು ಜವಳಿ ಪಾರ್ಕಗಾಗಿ ಗುರುತಿಸಲಾಗಿತ್ತು. ಆದರೆ, ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳಿಂದ ಆ ಯೋಜನೆ ನನೆಗುದಿಗೆ ಬಿದ್ದಿತು. ನಂತರ ನೇಕಾರರ ಪ್ರಮುಖ ಕೇಂದ್ರವಾದ ತುಮ್ಮಿನಕಟ್ಟಿಯಲ್ಲಿ 16 ಎಕರೆ ಜಾಗವನ್ನು ಗುರುತಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಶೇ. 60:40ರ ಸಹಭಾಗಿತ್ವದಲ್ಲಿ ಜವಳಿ ಪಾರ್ಕ್ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷಿ ಪ್ರಸ್ತಾವನೆಯನ್ನು ಮುಂದಿಡಲಾಯಿತು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿನ ಶಾಸಕ ಅರುಣಕುಮಾರ ಪೂಜಾರ ಜವಳಿ ಪಾರ್ಕ್ ಸ್ಥಾಪಿಸಲು ಹೆಚ್ಚಿನ ಮುತುವರ್ಜಿ ವಹಿಸಿದ್ದರು.ಯೋಜನೆಯ ಪ್ರಮುಖ ಉದ್ದೇಶಗಳು: ಸ್ಥಳೀಯ ನೇಕಾರರಿಗೆ ಒಂದೇ ಸೂರಿನಡಿ ಆಧುನಿಕ ಮಗ್ಗಗಳು, ಡೈಯಿಂಗ್ (ಬಣ್ಣ ಹಾಕುವ) ಘಟಕ ಮತ್ತು ಸಂಸ್ಕರಣಾ ಸೌಲಭ್ಯಗಳನ್ನು ಒದಗಿಸುವುದು. ಸಿದ್ಧ ಉಡುಪು ತಯಾರಿಕಾ ಘಟಕಗಳನ್ನು ಸ್ಥಾಪಿಸಿ ಸ್ಥಳೀಯ ಯುವಕರು ಮತ್ತು ಮಹಿಳೆಯರಿಗೆ ಉದ್ಯೋಗ ಸೃಷ್ಟಿಸುವುದು. ನೇಕಾರರ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಮತ್ತು ರಫ್ತು ಅವಕಾಶಗಳನ್ನು ಕಲ್ಪಿಸುವುದು ಜವಳಿ ಪಾರ್ಕನ ಪ್ರಮುಖ ಉದ್ದೇಶವಾಗಿದೆ.
ವಿಳಂಬದ ಪರಿಣಾಮ:ತುಮ್ಮಿನಕಟ್ಟಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ನೇಕಾರರು ಇಂದಿಗೂ ಸಾಂಪ್ರದಾಯಿಕ ವಿಧಾನಗಳನ್ನೇ ಅವಲಂಬಿಸಿದ್ದಾರೆ. ಕಚ್ಚಾ ನೂಲಿನ ಬೆಲೆ ಏರಿಕೆ ಮತ್ತು ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿಯಿಂದ ನೇಕಾರರಿಗೆ ಸೂಕ್ತ ಲಾಭ ಸಿಗುತ್ತಿಲ್ಲ. ಸ್ಥಳೀಯವಾಗಿ ಆಧುನಿಕ ಜವಳಿ ಘಟಕಗಳಿಲ್ಲದ ಕಾರಣ ಯುವ ಪೀಳಿಗೆ ನೇಕಾರಿಕೆಯಿಂದ ವಿಮುಖವಾಗಿ ಉದ್ಯೋಗ ಅರಸಿ ಬೆಂಗಳೂರು, ಮುಂಬೈ ಅಥವಾ ಗುಜರಾತ್ನಂತಹ ನಗರಗಳಿಗೆ ವಲಸೆ ಹೋಗುವಂತಾಗಿದೆ.ಚಿಗುರಿದ ಕನಸು: ತುಮ್ಮಿನಕಟ್ಟಿಯಲ್ಲಿ ಟೆಕ್ಸಟೈಲ್ ಪಾರ್ಕ್ ಪ್ರಾರಂಭಿಸುವ ಕುರಿತು ಇತ್ತೀಚಿಗೆ ಹಾವೇರಿಯಲ್ಲಿ ಜಾಗತಿಕ ಮಾರುಕಟ್ಟೆಗೆ ಜವಳಿ ಉತ್ಪನ್ನಗಳ ರಫ್ತು ಕುರಿತು ಏರ್ಪಡಿಸಿದ್ದ ಸಮಾರಂಭದಲ್ಲಿ ಜವಳಿ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಮುನ್ಸೂಚನೆ ನೀಡಿದ್ದಾರೆ. ಇದರಿಂದ ಯೋಜನೆ ಸಾಕಾರಗೊಳ್ಳುವ ಹೊಸ ಆಶಾಭಾವನೆ ಮೂಡಿದೆ.
ಯೋಜನೆಗೆ ಜಾರಿಗೆ ಸೂಕ್ತ ಕ್ರಮ ಅಗತ್ಯ: ಕೇವಲ ಘೋಷಣೆಗಳಿಗೆ ಸೀಮಿತವಾಗದೆ ಸರ್ಕಾರವು ತುಮ್ಮಿನಕಟ್ಟಿಯಲ್ಲಿ ಗುರುತಿಸಲಾದ 16 ಎಕರೆ ಜಾಗದಲ್ಲಿ ತಕ್ಷಣವೇ ಮೂಲಸೌಕರ್ಯ ಕಾಮಗಾರಿಗಳಿಗೆ ಚಾಲನೆ ನೀಡಬೇಕಿದೆ. ಈ ಯೋಜನೆ ಕಾರ್ಯಗತಗೊಂಡರೆ ರಾಣೆಬೆನ್ನೂರು ತಾಲೂಕಿನ ಆರ್ಥಿಕ ಚಿತ್ರಣವೇ ಬದಲಾಗುವುದರಲ್ಲಿ ಸಂಶಯವಿಲ್ಲ.