ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶ ಕೊಟ್ಟು ಪುಣ್ಯಕಟ್ಕೊಳ್ಳಿ..!

| Published : Jun 18 2024, 12:45 AM IST

ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶ ಕೊಟ್ಟು ಪುಣ್ಯಕಟ್ಕೊಳ್ಳಿ..!
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಕಂದಾಯ ಇಲಾಖೆಯಡಿ ಬರೋಬ್ಬರಿ 10 ಸಾವಿರ ಗ್ರಾಮ ಆಡಳಿತಾಧಿಕಾರಿಗಳು ಇದ್ದಾರೆ. ಇವರಲ್ಲಿ ಕನಿಷ್ಠವೆಂದರೂ 2 ಸಾವಿರಕ್ಕೂ ಅಧಿಕ ನೌಕರರು ಅಂತರಜಿಲ್ಲಾ ವರ್ಗಾವಣೆ ಬಯಸುತ್ತಿದ್ದಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಅಂತರ್‌ ಜಿಲ್ಲಾ ವರ್ಗಾವಣೆಗೆ ಅವಕಾಶ ಕೊಟ್ಟು ಪುಣ್ಯಕಟ್ಕೊಳ್ಳಿ.. ಕನಿಷ್ಠ ಪಕ್ಷ ಪತಿ-ಪತ್ನಿಯರ ಪ್ರಕರಣದಲ್ಲಾದರೂ ವರ್ಗ ಮಾಡಿ..!ಇದು ರಾಜ್ಯದ ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆ. ಈ ಬೇಡಿಕೆಯನ್ನಿಟ್ಟುಕೊಂಡು ಕೆಲ ವರ್ಷಗಳಿಂದ ಮನವಿ ಸಲ್ಲಿಸಿದರೂ ಸರ್ಕಾರ ಮಾತ್ರ ಸ್ಪಂದಿಸಿಲ್ಲ. ಪತಿ-ಪತ್ನಿಯರ ಪ್ರಕರಣದಲ್ಲಿ ಕೆಎಟಿ ಆದೇಶವಿದ್ದರೂ ಸರ್ಕಾರದ ಡೋಂಟ್‌ ಕೇರ್‌ ಧೋರಣೆ. ಹೀಗೆ ಪರಿಸ್ಥಿತಿ ಮುಂದುವರಿದರೆ ದಯಾಮರಣದ ಬೇಡಿಕೆ ಇಡುವುದೊಂದೇ ಬಾಕಿ ಎಂಬುದು ಗ್ರಾಮ ಆಡಳಿತಾಧಿಕಾರಿಗಳ ಅಂಬೋಣ.

ಆಗಿರುವುದೇನು?:

ರಾಜ್ಯದಲ್ಲಿ ಕಂದಾಯ ಇಲಾಖೆಯಡಿ ಬರೋಬ್ಬರಿ 10 ಸಾವಿರ ಗ್ರಾಮ ಆಡಳಿತಾಧಿಕಾರಿಗಳು ಇದ್ದಾರೆ. ಇವರನ್ನು ಮೊದಲು ಗ್ರಾಮ ಲೆಕ್ಕಾಧಿಕಾರಿಗಳು (ತಲಾಟಿ) ಎಂದು ಕರೆಯಲಾಗುತ್ತಿದೆ. ಆದರೆ ಸರ್ಕಾರ ಕಳೆದ ಎರಡು ವರ್ಷದ ಹಿಂದೆ ಹುದ್ದೆಯ ನಾಮಕರಣ ಬದಲಿಸಿ ಗ್ರಾಮ ಆಡಳಿತಾಧಿಕಾರಿಗಳು ಎಂದು ಮಾಡಿದೆ. ಈ 10 ಸಾವಿರ ಜನರಲ್ಲಿ ಕನಿಷ್ಠವೆಂದರೂ 2 ಸಾವಿರಕ್ಕೂ ಅಧಿಕ ನೌಕರರು ಅಂತರಜಿಲ್ಲಾ ವರ್ಗಾವಣೆ ಬಯಸುತ್ತಿದ್ದಾರೆ.

ಮೊದಲು ಇವರಿಗೆ ಅಂತರ್‌ ಜಿಲ್ಲಾ ವರ್ಗಾವಣೆಗೆ ಅವಕಾಶವಿತ್ತು. ಆದರೆ ನಾಲ್ಕು ವರ್ಷದ ಹಿಂದೆ ಅಂತರ್‌ ಜಿಲ್ಲಾ ವರ್ಗಾವಣೆ ರದ್ದುಪಡಿಸಿ, ಯಾವ ಜಿಲ್ಲೆಯಲ್ಲಿ ಕೆಲಸಕ್ಕೆ ನೇಮಕ ಆಗಿರುತ್ತಾರೋ ಅದೇ ಜಿಲ್ಲೆಯಲ್ಲಿ ನಿವೃತ್ತಿ ವರೆಗೂ ಇರಬೇಕು ಎಂದು ಸರ್ಕಾರ ಆದೇಶಿಸಿದೆ. ಆಗಿನಿಂದಲೂ ಇವರು ಇದೇ ಬೇಡಿಕೆಯನ್ನಿಟ್ಟುಕೊಂಡು ಹೋರಾಟ ನಡೆಸುತ್ತಿದ್ದಾರೆ. ಸಚಿವರು, ಹಿರಿಯ ಅಧಿಕಾರಿ ವರ್ಗಕ್ಕೆಲ್ಲ ಮನವಿ ಕೊಟ್ಟರೂ ಪ್ರಯೋಜನ ಮಾತ್ರ ಶೂನ್ಯ.

ಪತಿ- ಪತ್ನಿ:

ಪತಿ ಅಥವಾ ಪತ್ನಿ ಇಬ್ಬರು ಸರ್ಕಾರಿ ನೌಕರರಾಗಿದ್ದರೆ, ಪತಿ ಅಥವಾ ಪತ್ನಿ ಗ್ರಾಮ ಆಡಳಿತಾಧಿಕಾರಿಗಳಾಗಿ ಇರುತ್ತಾರೆ. ಅವರ ಸಂಗಾತಿ ಎಲ್ಲಿ ಕೆಲಸ ಮಾಡುತ್ತಿರುತ್ತಾರೋ ಅಲ್ಲಿಗೆ ವರ್ಗ ಮಾಡಬೇಕೆಂಬ ನಿಯಮವೂ ಹೌದು. ಕೆಲವರು ನಿಯಮದಡಿ ಕೆಎಟಿಗೆ ಹೋಗಿ ಆದೇಶ ಕೂಡ ಮಾಡಿಸಿಕೊಂಡು ಬಂದಿದ್ದಾರೆ. ಆದರೂ ಸರ್ಕಾರ ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಪ್ರತಿ ಸಲ ಮನವಿ ಕೊಟ್ಟಾಗ ಪರಿಶೀಲಿಸಿ ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದು ಹೇಳುತ್ತಿದೆ ಹೊರತು ಕ್ರಮವಹಿಸುತ್ತಿಲ್ಲ ಎಂಬುದು ಪತಿ-ಪತ್ನಿಯರ ಕೇಸ್‌ನಲ್ಲಿ ವರ್ಗಾವಣೆ ಬಯಸಿ ಕೆಎಟಿಯಿಂದ ಆದೇಶ ಪಡೆದವರ ಗೋಳು. ಈ ರೀತಿ ಕೇಸ್‌ನಲ್ಲಿ 800ಕ್ಕೂ ಅಧಿಕ ಜನ ವರ್ಗಾವಣೆ ಬಯಸುತ್ತಿದ್ದಾರೆ. ಇದರಲ್ಲಿ ಕನಿಷ್ಠವೆಂದರೂ 50ಕ್ಕೂ ಹೆಚ್ಚು ಜನ ಕೆಎಟಿಗೆ ಹೋಗಿ ಆದೇಶ ಮಾಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕುಟುಂಬ ಬೇರೆಡೆ ಇದೆ, ಪಾಲಕರಿಗೆ ವಯಸ್ಸಾಗಿದೆ, ಸಣ್ಣ ಮಕ್ಕಳಿವೆ ಎಂಬ ಕಾರಣ ನೀಡಿದರೂ ಸರ್ಕಾರ ವರ್ಗಾವಣೆಗೆ ಕಿವಿಗೋಡುತ್ತಿಲ್ಲ. ಪೊಲೀಸರು ಅಂತರ್‌ ಜಿಲ್ಲಾ ವರ್ಗಾವಣೆ ಬಯಸಿ ಮನವಿ ಕೊಟ್ಟರೂ ಸ್ಪಂದಿಸದಿದ್ದಾಗ ದಯಾಮರಣಕ್ಕೂ ಅರ್ಜಿ ಸಲ್ಲಿಸಿದ್ದಾರೆ. ಆ ಬಳಿಕವೇ ಸರ್ಕಾರ ಕಣ್ತೆರೆದು ಅಂತರ್‌ ಜಿಲ್ಲಾ ವರ್ಗಾವಣೆಗೆ ಅಸ್ತು ಎಂದಿತ್ತು. ಇದೀಗ ಅದೇ ರೀತಿ ಗ್ರಾಮ ಆಡಳಿತಾಧಿಕಾರಿಗಳ ಸಂಘವು ದಯಾಮರಣಕ್ಕೆ ಅರ್ಜಿ ಸಲ್ಲಿಸುವ ಜತೆಗೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಇದೀಗ ಗ್ರಾಮ ಆಡಳಿತಾಧಿಕಾರಿಗಳು ವ್ಯಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿಕೊಂಡು ಈ ಬಗ್ಗೆ ಚರ್ಚೆ ನಡೆಸುತ್ತಿದೆ. ಹೋರಾಟಕ್ಕೆ ಅವಕಾಶ ನೀಡದೆ ಅಂತರ್ ಜಿಲ್ಲೆಗೆ ವರ್ಗಾವಣೆ ರದ್ದುಪಡಿಸಿರುವುದನ್ನು ಹಿಂಪಡೆಯಬೇಕು. ಮೊದಲಿಗೆ ಪತಿ-ಪತ್ನಿಯರ ಕಾರಣ ಮುಂದಿಟ್ಟುಕೊಂಡು ವರ್ಗ ಬಯಸಿರುವವರೆಗೂ ಆದ್ಯತೆ ನೀಡಬೇಕೆಂದು ಒಕ್ಕೊರಲಿನಿಂದ ಆಗ್ರಹಿಸಿದೆ. ಸರ್ಕಾರ ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!

ನಾಲ್ಕು ವರ್ಷದ ಹಿಂದೆ ಗ್ರಾಮ ಆಡಳಿತಾಧಿಕಾರಿಗಳ ಅಂತರ್‌ ಜಿಲ್ಲಾ ವರ್ಗಾವಣೆ ರದ್ದುಪಡಿಸಿದೆ. ಪತಿ-ಪತ್ನಿಯರ ಕೇಸ್‌ಗಳಲ್ಲೂ ಕೆಎಟಿ ಆದೇಶವಿದ್ದರೂ ಸರ್ಕಾರ ಮಾತ್ರ ಸ್ಪಂದಿಸುತ್ತಿಲ್ಲ. ಇನ್ನು ಮೇಲಾದರೂ ಸರ್ಕಾರ ಸ್ಪಂದಿಸಬೇಕು. ಇಲ್ಲದಿದ್ದಲ್ಲಿ ನಾವು ದಯಾಮರಣಕ್ಕೆ ಬೇಡಿಕೆ ಇಡಬೇಕಾಗುತ್ತದೆ ಎಂದು ಗ್ರಾಮ ಆಡಳಿತಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಎಸ್‌. ಮಹೇಶ ಹೇಳಿದರು.