ಮತ ನೀಡಿ ಗೆಲ್ಲಿಸಿದ ಜನರಿಗೆ ಕೃತಜ್ಞತೆ: ಡಾ.ಪ್ರಭಾ

| Published : Jun 05 2024, 12:31 AM IST

ಸಾರಾಂಶ

ದಾವಣಗೆರೆ ಅಭಿವೃದ್ಧಿಗೆ ಕಳೆದ 25 ವರ್ಷದಿಂದ ಕಂಡಿದ್ದ ಕನಸ್ಸನ್ನು ಈಗ ನಿಜವಾಗಿಸಲು ಕ್ಷೇತ್ರದ ಮತದಾರರು ನನಗೆ ಗೆಲ್ಲಿಸಿದ್ದಾರೆ. ಹಲವಾರು ತಿಂಗಳಿನಿಂದ ಪಟ್ಟ ಶ್ರಮವನ್ನು ಅರ್ಥ ಮಾಡಿಕೊಂಡು ಸ್ಪಂದಿಸಿದ ಸಮಸ್ತ ಮತದಾರರಿಗೆ ಕೃತಜ್ಞತೆ ಅರ್ಪಿಸುವೆ ಎಂದು ದಾವಣಗೆರೆ ಕ್ಷೇತ್ರದ ಪ್ರಥಮ ಮಹಿಳಾ ಸಂಸದೆಯಾಗಿ ಆಯ್ಕೆಯಾದ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ.

- ದಾವಣಗೆರೆ ಲೋಕಸಭಾ ಕ್ಷೇತ್ರ ಅಭಿವೃದ್ಧಿಗೆ ಪ್ರಾಮಾಣಿಕ ಶ್ರಮದ ಭರವಸೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಅಭಿವೃದ್ಧಿಗೆ ಕಳೆದ 25 ವರ್ಷದಿಂದ ಕಂಡಿದ್ದ ಕನಸ್ಸನ್ನು ಈಗ ನಿಜವಾಗಿಸಲು ಕ್ಷೇತ್ರದ ಮತದಾರರು ನನಗೆ ಗೆಲ್ಲಿಸಿದ್ದಾರೆ. ಹಲವಾರು ತಿಂಗಳಿನಿಂದ ಪಟ್ಟ ಶ್ರಮವನ್ನು ಅರ್ಥ ಮಾಡಿಕೊಂಡು ಸ್ಪಂದಿಸಿದ ಸಮಸ್ತ ಮತದಾರರಿಗೆ ಕೃತಜ್ಞತೆ ಅರ್ಪಿಸುವೆ ಎಂದು ದಾವಣಗೆರೆ ಕ್ಷೇತ್ರದ ಪ್ರಥಮ ಮಹಿಳಾ ಸಂಸದೆಯಾಗಿ ಆಯ್ಕೆಯಾದ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ತಾಲೂಕಿನ ಶಿವಗಂಗೋತ್ರಿಯ ದಾವಿವಿಯ ಚುನಾವಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಮಧ್ಯಾಹ್ನ ಫಲಿತಾಂಶ ಪ್ರಕಟಗೊಂಡ ನಂತರ ವಿಜಯಿ ಅಭ್ಯರ್ಥಿಯಾಗಿ ಪ್ರಮಾಣಪತ್ರ ಸ್ವೀಕರಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಕ್ಷೇತ್ರದ ಜನರ ವಿಶ್ವಾಸಕ್ಕೆ ತಕ್ಕಂತೆ ಮುಂದಿನ 5 ವರ್ಷಗಳ ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡುವ ಜವಾಬ್ದಾರಿ ನನ್ನ ಮೇಲಿದೆ ಎಂದರು.

ಜನರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇವೆ. ಇಡೀ ಕ್ಷೇತ್ರದ ಅಭಿವೃದ್ಧಿ ಚಿಂತನೆಯೇ ನನ್ನ ಗೆಲುವಿಗೆ ಕಾರಣವಾಗಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್‌ನ ಕೈ ಹಿಡಿದಿವೆ. ಜೊತೆ ಎಂಟೂ ವಿಧಾನಸಭಾ ಕ್ಷೇತ್ರಗಳ ಶಾಸಕರ ಶ್ರಮ, ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳ ಶ್ರಮವೂ ಗೆಲುವಿಗೆ ಕಾರಣ‍ವಾಗಿದೆ. ಈ ಎಲ್ಲರ ಶ್ರಮವೂ ಸಾರ್ಥಕವಾಗಿದೆ ಎಂದು ತಿಳಿಸಿದರು.

ಕೈಗಾರಿಕೆ, ಶಾಶ್ವತ ನೀರಿನ ಯೋಜನೆಗಳು, ಕೃಷಿ ವಲಯಕ್ಕೆ ಆದ್ಯತೆ ಇದನ್ನೆಲ್ಲಾ ಯೋಚಿಸಿಯೇ ಮತದಾರರು ಕಾಂಗ್ರೆಸ್‌ ಪಕ್ಷಕ್ಕೆ ಆಶೀರ್ವದಿಸಿದ್ದಾರೆ. ನಮ್ಮೆಲ್ಲಾ ಶಾಸಕರ ಬಲ ಹಾಗೂ ರಾಜ್ಯ ಸರ್ಕಾರದ ಬಲದ ಜೊತೆಗೆ ಇಡೀ ಕ್ಷೇತ್ರದ ಅಭಿವೃದ್ಧಿ ಕೆಲಸದ ಬಗ್ಗೆ ಯೋಚನೆ ಮಾಡಿಯೇ ಮತದಾರರು ತಮ್ಮನ್ನು ಕ್ಷೇತ್ರದಲ್ಲಿ ಗೆಲ್ಲಿಸಿದ್ದಾರೆ. ಜನರ ಆಶೋತ್ತರಕ್ಕೆ ಸ್ಪಂದಿಸಿ, ಕೆಲಸ ಮಾಡುವೆ ಎಂದು ಡಾ.ಪ್ರಭಾ ಪ್ರತಿಕ್ರಿಯಿಸಿದರು.

- - - -(ಫೋಟೋ ಬರಲಿದೆ)