ಉಡುಪಿ: ನಿಯಾಮವಳಿಗಳ ಪ್ರಕಾರ ಯಾವುದೇ ರಾಜ್ಯದಲ್ಲಿ ಸ್ಥಳೀಯಾಡಳಿತ ಸಂಸ್ಥೆ (ಗ್ರಾಪಂ, ತಾಪಂ ಮತ್ತು ಜಿಪಂ) ಗಳಲ್ಲಿ ಚುನಾಯಿತ ಆಡಳಿತ ಅಧಿಕಾರದಲ್ಲಿದ್ದರೆ ಮಾತ್ರ ಕೇಂದ್ರ ಸರ್ಕಾರವು ಹಣಕಾಸು ಆಯೋಗದ ಅನುದಾನ ಬಿಡುಗಡೆ ಮಾಡಲು ಅವಕಾಶವಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ 2021ರಿಂದ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಚುನಾವಣೆ ನಡೆಸದೆ, ಚುನಾಯಿತ ಆಡಳಿತ ವ್ಯವಸ್ಥೆ ಇಲ್ಲದಿರುವುದರಿಂದ, ಈ ಪಂಚಾಯಿತಿಗಳಿಗೆ 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆ ಮಾಡಲು ಅವಕಾಶವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ

ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಲೋಕಸಭೆಯಲ್ಲಿ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಇಲಾಖೆ ಲಿಖಿತ ಉತ್ತರ ನೀಡಿದೆ.ಆದರೆ 2020 - 21ರಿಂದ 2024 - 25ರವರೆಗೆ ಕರ್ನಾಟಕದಲ್ಲ್ಲ ಎಲ್ಲ ಗ್ರಾಪಂಗಳಿಗೆ 15ನೇ ಹಣಕಾಸು ಆಯೋಗವು ಅನುದಾನದ ಎಲ್ಲಾ ಕಂತುಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ ಕರ್ನಾಟಕ ರಾಜ್ಯ ಸರ್ಕಾರ ಈ ಅನುದಾನವನ್ನು ಗ್ರಾಪಂಗಳಿಗೆ ವಿಳಂಬವಾಗಿ ಹಾಗೂ ಅಪೂರ್ಣವಾಗಿ ಬಿಡುಗಡೆ ಮಾಡಿದ್ದು, ಇದಕ್ಕೆ ರಾಜ್ಯ ಸರ್ಕಾರ ದಂಡ ಬಡ್ಡಿಯನ್ನು ಪಾವತಿಸಬೇಕಾಗಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.ಹಣಕಾಸಿನ ಆಯೋಗದ ನಿಯಮದಂತೆ ಪ್ರತಿ ಹಣಕಾಸು ವರ್ಷದಲ್ಲಿ 2 ಕಂತುಗಳ ಮೂಲಕ ರಾಜ್ಯಗಳಿಗೆ ಗ್ರಾಮೀಣ ಸ್ಥಳೀಯ ಆಡಳಿತ ಅನುದಾನ ಬಿಡುಗಡೆ ಮಾಡುತ್ತಿದೆ. ಹಾಗೆ ಬಿಡುಗಡೆ ಮಾಡಿದ ಕಂತುಗಳಿಗೆ ನಿಗದಿತ ನಮೂನೆಯಲ್ಲಿ ಅನುದಾನ ವರ್ಗಾವಣೆ ಪ್ರಮಾಣ ಪತ್ರ (ಗ್ರ್ಯಾಂಟ್ ಟ್ರಾನ್ಸಫರ್ ಸರ್ಟಿಫಿಕೇಟ್) ವನ್ನು ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಸಲ್ಲಿಸುವ ಅಗತ್ಯವಿದೆ, ಹೊರತು ಯಾವುದೇ ನಿರಾಪೇಕ್ಷಣ ಪತ್ರ ಸಲ್ಲಿಕೆ ಅವಶ್ಯಕವಿಲ್ಲ ಎಂದು ಸಂಸದ ಕೋಟ ಅವರ ಪ್ರಶ್ನೆಗೆ ಸ್ಪಷ್ಟೀಕರಣ ನೀಡಲಾಗಿದೆ.