ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ ಅನ್ನು ಗುಜರಾತ ಮೂಲದ ಹಾರ್ಡ್‌ವೇರ್ ಟೂಲ್ಸ್‌ ಆ್ಯಂಡ್‌ ಮಷಿನರಿ ಪ್ರಾಜೆಕ್ಟ್‌ ಕಂಪನಿ ಗದಗದಲ್ಲಿ ತಯಾರಿಸಿ ಶನಿವಾರ ಡ್ಯಾಂಗೆ ಬೃಹತ್‌ ಗಾತ್ರದ ಟ್ರಕ್‌ನಲ್ಲಿ ತಂದಿದೆ.

ಹೊಸಪೇಟೆ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ ಅನ್ನು ಗುಜರಾತ ಮೂಲದ ಹಾರ್ಡ್‌ವೇರ್ ಟೂಲ್ಸ್‌ ಆ್ಯಂಡ್‌ ಮಷಿನರಿ ಪ್ರಾಜೆಕ್ಟ್‌ ಕಂಪನಿ ಗದಗದಲ್ಲಿ ತಯಾರಿಸಿ ಶನಿವಾರ ಡ್ಯಾಂಗೆ ಬೃಹತ್‌ ಗಾತ್ರದ ಟ್ರಕ್‌ನಲ್ಲಿ ತಂದಿದೆ.

ಈಗ ಜಲಾಶಯದ ಒಳ ಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಗೇಟ್‌ಅನ್ನು ಅಕ್ಟೋಬರ್‌ ಇಲ್ಲವೇ ನವೆಂಬರ್‌ನಲ್ಲಿ ಅಳವಡಿಕೆ ಮಾಡಲು ಈಗಾಗಲೇ ತುಂಗಭದ್ರಾ ಮಂಡಳಿ ಅಧಿಕಾರಿಗಳು ನಿರ್ಧಾರ ತೆಗೆದುಕೊಂಡಿದ್ದಾರೆ.

ತುಂಗಭದ್ರಾ ಜಲಾಶಯದ 19ನೇ ಗೇಟ್ 2024ರ ಆಗಸ್ಟ್‌ 10ರ ರಾತ್ರಿ ಕಳಚಿ ಬಿದ್ದಿತ್ತು. ಇದರಿಂದ 40 ಟಿಎಂಸಿಯಷ್ಟು ನೀರು ನದಿ ಪಾಲಾಗಿತ್ತು. ಆಗ ಪರಿಣತ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಸ್ಟಾಪ್‌ ಲಾಗ್‌ ಅಳವಡಿಕೆ ಮಾಡಲಾಗಿತ್ತು.

ಜಲಾಶಯದಿಂದ ನದಿಗೆ ನೀರು ಹರಿದು ಹೋಗುವುದನ್ನು ನಿಲ್ಲಿಸಿ, ರೈತರಿಗೆ ನೀರು ಉಳಿಸಲು ಕನ್ನಯ್ಯ ನಾಯ್ಡು ಅವರ ಬಳಿ ಚರ್ಚಿಸಿದ್ದರು. ಬಳಿಕ 19ನೇ ಗೇಟ್‌ಗೆ ಸ್ಟಾಪ್‌ ಲಾಗ್‌ ಅಳವಡಿಕೆ ಮಾಡಲಾಗಿತ್ತು. ಈಗ ಸ್ಟಾಪ್‌ ಲಾಗ್‌ ತೆಗೆದು ಕ್ರಸ್ಟ್‌ ಗೇಟ್‌ ಅಳವಡಿಕೆಗೆ ಒಳ ಹರಿವು ಅಡ್ಡಿಯಾಗಿದೆ. ಈಗಾಗಲೇ ಜಲಾಶಯದಲ್ಲಿ 41.856 ಟಿಎಂಸಿಯಷ್ಟು ನೀರು ಕೂಡ ಸಂಗ್ರಹವಾಗಿದೆ. ಈಗ ಕ್ರಸ್ಟ್‌ ಗೇಟ್‌ ಅಳವಡಿಕೆ ಸಾಧ್ಯಾಸಾಧ್ಯತೆ ಕುರಿತೂ ಚರ್ಚೆ ನಡೆದು ಅಂತಿಮವಾಗಿ ಅಕ್ಟೋಬರ್‌ ಇಲ್ಲವೇ ನವೆಂಬರ್‌ನಲ್ಲಿ ಅಳವಡಿಕೆ ಮಾಡಲು ತುಂಗಭದ್ರಾ ಮಂಡಳಿ ಅಧಿಕಾರಿಗಳು ನಿರ್ಧಾರ ತೆಗೆದುಕೊಂಡಿದೆ.

ತುಂಗಭದ್ರಾ ಜಲಾಶಯ ರಾಜ್ಯದ 10 ಲಕ್ಷ ಎಕರೆ ಹಾಗೂ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ 3 ಲಕ್ಷ ಎಕರೆ ಪ್ರದೇಶಕ್ಕೆ ನೀರು ಒದಗಿಸುತ್ತದೆ. ರಾಜ್ಯದ ವಿಜಯನಗರ, ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಜೀವನಾಡಿ ಆಗಿರುವ ತುಂಗಭದ್ರಾ ಜಲಾಶಯ ರೈತರ ಪಾಲಿನ ಆಶಾಕಿರಣ ಆಗಿದೆ.

ಪರಿಣತರ ಸಲಹೆ: ತುಂಗಭದ್ರಾ ಜಲಾಶಯದ 19ನೇ ಗೇಟ್‌ಗೆ ಕ್ರಸ್ಟ್‌ ಗೇಟ್‌ ನಿರ್ಮಾಣಕ್ಕಾಗಿ ಎ.ಕೆ. ಬಜಾಜ್‌ ನೇತೃತ್ವದ ತಾಂತ್ರಿಕ ಸಮಿತಿ, ಪಾಂಡೆ ನೇತೃತ್ವದ ಸಲಹಾ ಸಮಿತಿ, ಎನ್‌.ಡಿ.ಟಿ. ಸರ್ವಿಸ್‌ ಸಂಸ್ಥೆಯ ತಂಡ, ಪರಿಣತ ತಜ್ಞ ಕನ್ನಯ್ಯ ನಾಯ್ಡು ಪರಿಶೀಲನೆ ನಡೆಸಿದ ಬಳಿಕವಷ್ಟೇ ತುಂಗಭದ್ರಾ ಮಂಡಳಿ ಹಾಗೂ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇಂದ್ರ ಸರ್ಕಾರದ ಜಲ ಸಂಪನ್ಮೂಲ ಇಲಾಖೆಗಳ ಅಧಿಕಾರಿಗಳು ಸುದೀರ್ಘ ಚರ್ಚಿಸಿ ಇ- ಟೆಂಡರ್‌ ಕರೆದಿದ್ದರು. ಗುಜರಾತ ಮೂಲದ ಹಾರ್ಡ್‌ವೇರ್ ಟೂಲ್ಸ್‌ ಆ್ಯಂಡ್‌ ಮಷಿನರಿ ಪ್ರಾಜೆಕ್ಟ್‌ ಕಂಪನಿಗೆ ಟೆಂಡರ್‌ ಆಗಿತ್ತು. ಈ ಕಂಪನಿ ಗದಗದಲ್ಲಿ 20 ನುರಿತ ಕಾರ್ಮಿಕರನ್ನು ಬಳಸಿಕೊಂಡು 15 ದಿನದ ಅಂತರದಲ್ಲಿ ಕ್ರಸ್ಟ್‌ ಗೇಟ್‌ ನಿರ್ಮಾಣ ಮಾಡಿದೆ.

ಗೇಟ್‌ ಅಳತೆ: ಈ ಗೇಟನ್ನು ವೈಜಾಗ್‌ ಸ್ಟೀಲ್‌ ಬಳಕೆ ಮಾಡಿ ನಿರ್ಮಾಣ ಮಾಡಲಾಗಿದೆ. ಈ ಕ್ರಸ್ಟ್‌ ಗೇಟ್‌ ಅಂದಾಜು 48 ಟನ್‌ ಭಾರವಾಗಿದೆ. 20 ಅಡಿ ಉದ್ದ ಹಾಗೂ 60 ಅಡಿ ಅಗಲ ವಿಸ್ತೀರ್ಣ ಹೊಂದಿದೆ. ಈ ಗೇಟ್‌ನ ಒಂಬತ್ತು ಬಿಡಿ ಭಾಗಗಳನ್ನು ಗದಗದಿಂದ ತುಂಗಭದ್ರಾ ಜಲಾಶಯಕ್ಕೆ ತರಲಾಗಿದೆ.

ಡ್ಯಾಂನಲ್ಲೇ 32 ಗೇಟ್‌ ತಯಾರಿಕೆ: ತುಂಗಭದ್ರಾ ಮಂಡಳಿ ಆವರಣದಲ್ಲೇ ಉಳಿದ 32 ಕ್ರಸ್ಟ್‌ ಗೇಟ್‌ಗಳ ನಿರ್ಮಾಣ ಮಾಡುವ ಕಾರ್ಯವನ್ನು ಗುಜರಾತ ಮೂಲದ ಹಾರ್ಡ್‌ವೇರ್ ಟೂಲ್ಸ್‌ ಆ್ಯಂಡ್‌ ಮಷಿನರಿ ಪ್ರಾಜೆಕ್ಟ್‌ ಕಂಪನಿ ಶೀಘ್ರವೇ ಕೈಗೊಳ್ಳಲಿದೆ. ಈಗಾಗಲೇ ತುಂಗಭದ್ರಾ ಮಂಡಳಿ ಹಾಗೂ ಕಂಪನಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆದಿದ್ದು, ಗದಗನಲ್ಲಿ ಗೇಟ್‌ಗಳನ್ನು ತಯಾರು ಮಾಡದೇ ಹೊಸಪೇಟೆಯಲ್ಲಿರುವ ಮಂಡಳಿ ಕಚೇರಿ ಆವರಣದಲ್ಲೇ ತಯಾರು ಮಾಡಲು ಎಲ್ಲ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಮಂಡಳಿ ಅಧಿಕಾರಿಗಳು ವಾಗ್ದಾನ ನೀಡಿದ್ದಾರೆ. ಹಾಗಾಗಿ 32 ಕ್ರಸ್ಟ್‌ ಗೇಟ್‌ಗಳ ನಿರ್ಮಾಣ ಕಾರ್ಯ ಹೊಸಪೇಟೆಯಲ್ಲಿ ನಡೆಯಲಿದೆ.

ತುಂಗಭದ್ರಾ ಜಲಾಶಯದಲ್ಲಿ ಈಗ 41.856 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಇನ್ನೂ ಒಳ ಹರಿವು ಕೂಡ 40 ಸಾವಿರ ಕ್ಯುಸೆಕ್‌ ಆಸುಪಾಸಿನಲ್ಲಿದೆ. ಪರಿಣತ ತಜ್ಞ ಕನ್ನಯ್ಯ ನಾಯ್ಡು ಕೂಡ ಒಳ ಹರಿವು ಹಾಗೂ ಜಲಾಶಯದಲ್ಲಿ ನೀರು ಕಡಿಮೆ ಆದ ಬಳಿಕವೇ ಗೇಟ್‌ ಅಳವಡಿಕೆ ಮಾಡಲು ಸಲಹೆ ನೀಡಿದ್ದಾರೆ. 19ನೇ ಗೇಟ್‌ನ ಸ್ಟಾಪ್‌ ಲಾಗ್‌ ಕೂಡ ಗಟ್ಟಿಯಾಗಿದೆ. ಹಾಗಾಗಿ ಅಕ್ಟೋಬರ್‌ ಇಲ್ಲವೇ ನವೆಂಬರ್‌ನಲ್ಲಿ 19ನೇ ಗೇಟ್‌ಗೆ ಕ್ರಸ್ಟ್‌ ಗೇಟ್‌ ಅಳವಡಿಕೆ ಮಾಡಲಾಗುವುದು ಎಂದು ತುಂಗಭದ್ರಾ ಮಂಡಳಿ ಅಧೀಕ್ಷಕ ಎಂಜಿನಿಯರ್‌ ನಾರಾಯಣ ನಾಯ್ಕ ಹೇಳಿದರು.