ಹೂವಿನಹಡಗಲಿಯಲ್ಲಿ ಗ್ರಾಮ ಆಡಳಿತಾಧಿಕಾರಿಗಳ 2ನೇ ಹಂತದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭ

| Published : Feb 12 2025, 12:31 AM IST

ಹೂವಿನಹಡಗಲಿಯಲ್ಲಿ ಗ್ರಾಮ ಆಡಳಿತಾಧಿಕಾರಿಗಳ 2ನೇ ಹಂತದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಹೂವಿನಹಡಗಲಿಯಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಸಂಘ ಕಚೇರಿಯ ಕರ್ತವ್ಯ ಸ್ಥಗಿತಗೊಳಿಸಿ 2ನೇ ಹಂತದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದೆ.

ಹೂವಿನಹಡಗಲಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಗ್ರಾಮ ಆಡಳಿತಾಧಿಕಾರಿಗಳ ಸಂಘ ಕಚೇರಿಯ ಕರ್ತವ್ಯ ಸ್ಥಗಿತಗೊಳಿಸಿ 2ನೇ ಹಂತದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದೆ.

ಇಲ್ಲಿನ ತಾಲೂಕು ಕಚೇರಿ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ. ಕೊಟ್ರಗೌಡ ಮಾತನಾಡಿ, ಸರ್ಕಾರ ಕಂದಾಯ ಇಲಾಖೆಯ ಮುಖೇನ ನಿತ್ಯ ಹತ್ತಾರು ಸುತ್ತೋಲೆಗಳನ್ನು ಹೊರಡಿಸುತ್ತಿದೆ. ಕೆಳ ಹಂತದಲ್ಲಿ ಕರ್ತವ್ಯ ನಿರ್ವಹಿಸುವ ಗ್ರಾಮ ಆಡಳಿತಾಧಿಕಾರಿಗಳು ಅತಿಯಾದ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲಾಖೆಯ ಸಚಿವರು ಪ್ರಗತಿಯನ್ನು ಕೇಳುತ್ತಾರೆಯೇ ಹೊರತು ಅವರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎಂದರು.

ಗ್ರಾಮ ಆಡಳಿತಾಧಿಕಾರಿಗಳು ಹಳ್ಳಿಗಳಲ್ಲಿ ಕರ್ತವ್ಯ ನಿರ್ವಹಿಸಲು ಕೊಠಡಿ ಸೇರಿದಂತೆ ಯಾವ ಸೌಲಭ್ಯಗಳಿಲ್ಲ. ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಕೆಲಸದ ಒತ್ತಡದಲ್ಲಿ ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಇಂತಹ ಹಲವಾರು ಸಮಸ್ಯೆಗಳನ್ನು ಕೂಡಲೇ ಸರ್ಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಎಂ.ಪಿ.ಎಂ. ಅಶೋಕ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಕೆಳ ಹಂತದ ನೌಕರರು ವೆಬ್‌, ಮೊಬೈಲ್‌ ತಂತ್ರಾಂಶಗಳಾದ ಸಂಯೋಜನೆ, ಇ-ಆಫೀಸ್‌, ಆಧಾರ್‌ ಸೀಡ್‌, ಲ್ಯಾಂಡ್‌ ಬೀಟ್‌, ಬಗರ್‌ ಹುಕುಂ, ಹಕ್ಕು ಪತ್ರ, ನಮೂನೆ-1 ವೆಬ್‌ ಅಪ್ಲಿಕೇಷನ್‌, ಪೌತಿ ಆಂದೋಲನ ಆ್ಯಪ್‌, ಸಂರಕ್ಷಣೆ, ಸಿ-ವಿಜಲ್‌ ಆ್ಯಪ್‌, ನವೋದಯ, ಗರುಡ ಆ್ಯಪ್‌, ಭೂಮಿ, ಎಲೆಕ್ಟ್‌-1, ವೋಟರ್‌ ಹೆಲ್ಪ್‌ ಲೈನ್‌, ಬೆಳೆ ಸಮೀಕ್ಷೆ, ಬೆಳೆ ಸಮೀಕ್ಷೆಯ ಅನುಮೋದನೆ ವೆಬ್‌ ಆ್ಯಪ್‌, ಪಿಎಂ ಕಿಸಾನ್‌ ವೆಬ್‌ ಆ್ಯಪ್‌, ಕೃಷಿ ಗಣತಿ, ನೀರಾವರಿ ಗಣತಿ ಹಾಗೂ ದಿಶಾಂಕ್‌ ಸೇರಿದಂತೆ, 21 ವೆಬ್‌ ಆ್ಯಪ್‌ಗಳ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದು, ಸಿ-ವೃಂದದ ನೌಕರರ ಹತ್ತು ಪಟ್ಟು ಕೆಲಸಗಳ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಈ ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ಶ್ರೇಣಿಯನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಗ್ರಾಮ ಆಡಳಿತ ಅಧಿಕಾರಿ ಸಂಘದ ಅಧ್ಯಕ್ಷ ಮಲ್ಲೇಶನಾಯ್ಕ ಮಾತನಾಡಿ, ಕಂದಾಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಎಲ್ಲ ವೃಂದಗಳನ್ನು ಒಳಗೊಂಡಂತೆ ನೀಡುತ್ತಿರುವ ಅನುಕಂಪದ ನೇಮಕಾತಿ ಹುದ್ದೆ ವೃಂದ ಮತ್ತು ನೇಮಕಾತಿ ತಿದ್ದುಪಡಿ ಮಾಡಬೇಕಿದೆ ಎಂದರು.

ಗ್ರಾಮೀಣ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಮಗೆ ಯಾವ ಸೌಲಭ್ಯಗಳಿಲ್ಲ, ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಸಂಘದ ವಿವಿಧ 23 ಬೇಡಿಕೆಗಳನ್ನು ಕೂಡಲೇ, ಸರ್ಕಾರ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಪಿಡಿಒ ಹಾಗೂ ಸಿಬ್ಬಂದಿ, ಗ್ರಾಮ ಆಡಳಿತಾಧಿಕಾರಿಗಳು, ಪ್ರಗತಿಪರ ಸಂಘಟನೆಯ ಸುರೇಶ ಹಲಗಿ, ಕಂದಾಯ ನಿರೀಕ್ಷಕರು, ಗ್ರಾಮ ಸಹಾಯಕರು ತಹಸೀಲ್ದಾರ್‌ ಜಿ. ಸಂತೋಷಕುಮಾರ ಅವರಿಗೆ ಮನವಿ ಸಲ್ಲಿಸಿದರು.ಮುಷ್ಕರ ನಿರತರಿಗೆ ಬಿಸಿ: ರಾಜ್ಯಾದ್ಯಂತ ಮುಷ್ಕರ ನಡೆಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ವಿರುದ್ಧದ ಶಿಸ್ತುಕ್ರಮ ಪ್ರಕರಣಗಳ ಕುರಿತು ಜರೂರು ಮಾಹಿತಿ ನೀಡಬೇಕು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ರವಾನಿಸಿದ್ದಾರೆ. ಈ ಮೂಲಕ ಮುಷ್ಕರ ಮಾಡುವವರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ವಿರುದ್ಧ ಹೊರಡಿಸಲಾಗಿರುವ ಶಿಸ್ತು ಪ್ರಕರಣ (ಜಂಟಿ ಇಲಾಖಾ ವಿಚಾರಣೆಗಳು ಒಳಗೊಂಡಂತೆ) ತಾಲೂಕುವಾರು ಮಾಹಿತಿಯನ್ನು ಅತಿ ಜರೂರು ನೀಡಬೇಕು ಎಂದು ಡಿಸಿಗಳಿಗೆ ಪತ್ರದಲ್ಲಿ ಸೂಚಿಸಲಾಗಿದೆ.