ನಾಳೆಯಿಂದ ಸೋಸಲೆ ಶ್ರೀಗಳ 8ನೇ ಚಾತುರ್ಮಾಸ ವ್ರತ ಆರಂಭ

| Published : Aug 01 2024, 12:17 AM IST

ನಾಳೆಯಿಂದ ಸೋಸಲೆ ಶ್ರೀಗಳ 8ನೇ ಚಾತುರ್ಮಾಸ ವ್ರತ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಸೋಸಲೆ ಶ್ರೀ ವ್ಯಾಸರಾಜರ ಮಹಾ ಸಂಸ್ಥಾನದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅವರ 8ನೇ ಚಾತುರ್ಮಾಸ್ಯ ವ್ರತವು ಟಿ. ನರಸೀಪುರ ಸಮೀಪದ ಸೋಸಲೆ ಗ್ರಾಮದಲ್ಲಿ ಆ.2ರಿಂದ ಚಾಲನೆಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಸೋಸಲೆ ಶ್ರೀ ವ್ಯಾಸರಾಜರ ಮಹಾ ಸಂಸ್ಥಾನದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅವರ 8ನೇ ಚಾತುರ್ಮಾಸ್ಯ ವ್ರತವು ಟಿ. ನರಸೀಪುರ ಸಮೀಪದ ಸೋಸಲೆ ಗ್ರಾಮದಲ್ಲಿ ಆ.2ರಿಂದ ಚಾಲನೆಗೊಳ್ಳಲಿದೆ.

ಇದರ ಅಂಗವಾಗಿ ಆ. 1 ರ ಸಂಜೆ 4:30ಕ್ಕೆ ಬನ್ನೂರು ವೃತ್ತದಿಂದ ಸೋಸಲೆ ಗ್ರಾಮದ ಶ್ರೀ ವ್ಯಾಸರಾಜರ ಮಹಾ ಮಠದ ವರೆಗೆ ವೈಭವಯುತ ಮೆರವಣಿಗೆ, ಶ್ರೀಗಳ ಪುರ ಪ್ರವೇಶ ಕಾರ್ಯಕ್ರಮವನ್ನು ಆಯೋಜಿಸಿದೆ.

ಮೆರವಣಿಗೆಯಲ್ಲಿ ವಿವಿಧ ಭಜನಾ ಮಂಡಳಿಗಳಿಂದ ದಾಸ ಪದ ಸಂಕೀರ್ತನೆ, ಕೋಲಾಟ ವಿದ್ವಾಂಸರಿಂದ ವೇದ ಘೋಷ, ಶ್ರೀ ವ್ಯಾಸ ತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಮಂತ್ರಘೋಷ , ಜಾನಪದ ಕಲಾತಂಡಗಳ ಪ್ರದರ್ಶನ ಇತ್ಯಾದಿಗಳನ್ನು ಆಯೋಜಿಸಿದೆ.

ಮೆರವಣಿಗೆ ನಂತರ ಸಂಜೆ 6ಕ್ಕೆ ಸೋಸಲೆ ಗ್ರಾಮದ ವ್ಯಾಸರಾಜರ ಮಠದಲ್ಲಿ ಹಮ್ಮಿಕೊಂಡಿರುವ ಗುರುಗಳ ಸ್ವಾಗತ ಕಾರ್ಯಕ್ರಮದಲ್ಲಿ ಸೋಸಲೆ ಮಠದ ಮುಖ್ಯಸ್ಥರಾದ ಡಿ.ಪಿ. ಅನಂತಚಾರ್ಯ, ವ್ಯಾಸತೀರ್ಥ ವಿದ್ಯಾಪೀಠದ ಗೌರವ ಕಾರ್ಯದರ್ಶಿ, ಡಾ. ಡಿ.ಪಿ. ಮಧುಸೂಧನಾಚಾರ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಗೋ. ಮಧುಸೂದನ್, ಟಿ. ನರಸೀಪುರ ತಹಸೀಲ್ದಾರ್ ಸುರೇಶ ಆಚಾರ್ಯ, ತಾಪಂ ಇಒ ಕೃಷ್ಣ , ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಧನಂಜಯ ಮತ್ತು ಮನೋಜ ಕುಮಾರ್, ಜಿಪಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚರಿತಾ, ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೀರೇಶ ಮತ್ತು ಬನ್ನೂರು ಗ್ರಾಮದ ನಾಡಗೌಡರಾದ ಪಾರ್ಥಸಾರಥಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಂತರ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಲಿದ್ದಾರೆ.

ಪ್ರತಿನಿತ್ಯದ ಕಾರ್ಯಕ್ರಮಗಳು:

ಸೋಸಲೆ ಶ್ರೀಗಳ ಚಾತುರ್ಮಾಸ್ಯ ವ್ರತದ ಅಂಗವಾಗಿ ಆ.2ರಿಂದ ಸೆ. 17ರವರೆಗೆ ಪ್ರತಿನಿತ್ಯವೂ ಶ್ರೀ ಮಠದಲ್ಲಿ ನಿತ್ಯ ಜ್ಞಾನ ಯಜ್ಞ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಪ್ರತಿದಿನವೂ ಬೆಳಗ್ಗೆ 7ಕ್ಕೆ ಸ್ವಾಮೀಜಿ ಅವರಿಂದ ಅಣು ಭಾಷ್ಯ ಶಾಸ್ತ್ರ ಪಾಠ , ವಿದ್ವಾಂಸರಿಂದ ಗೃಹಸ್ಥರಿಗೆ ಸೂತ್ರ ದೀಪಿಕಾ ಗ್ರಂಥದ ಪಾಠ , ಮಾತೆಯರಿಗೆ ಶ್ರೀ ವ್ಯಾಸರಾಜರ ಕೃತಿಗಳ ವಿಶೇಷ ಅಧ್ಯಯನ ಕಾರ್ಯಕ್ರಮಗಳು ನಡೆಯಲಿದೆ .

ಶ್ರೀಕೃಷ್ಣ ಜನ್ಮಾಷ್ಟಮಿಯಂದು ಸಂಸ್ಥಾನ ಪ್ರತಿಮಾ ಶ್ರೀ ಗೋಪಾಲಕೃಷ್ಣ ದೇವರಿಗೆ ಲಕ್ಷ ತುಳಸಿ ಅರ್ಚನೆ ಹಾಗೂ ಭವ್ಯ ಮೆರವಣಿಗೆ, ಉತ್ಸವ ನಡೆಯಲಿದೆ. ಚಾತುರ್ಮಾಸ್ಯ ಪರ್ಯಂತ ಬರುವ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ , ಶ್ರೀ ಲಕ್ಷ್ಮಿಕಾಂತ ತೀರ್ಥರ ಆರಾಧನೆ , ಶ್ರೀ ಲಕ್ಷ್ಮೀನಾಥ ತೀರ್ಥರ ಆರಾಧನೆ, ಶ್ರೀ ವಿದ್ಯಾ ಪೂರ್ಣತೀರ್ಥರ ಆರಾಧನೆಗಳನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತದೆ.

ಇವುಗಳೊಂದಿಗೆ ಪ್ರತಿನಿತ್ಯವೂ ಶಾಸ್ತ್ರಾರ್ಥ ಗೋಷ್ಠಿ, ವ್ಯಾಸತ್ರಯ ವಿಷಯಗಳಲ್ಲಿ ವಿದ್ವದ್ಗೋಷ್ಠಿ ಹಾಗೂ ಯುವ ಜನರಿಗಾಗಿ ವಿಶೇಷ ಕಾರ್ಯಾಗಾರ ಆಯೋಜನೆಗೊಂಡಿದೆ.

ಪ್ರವಚನ: ಪ್ರತಿದಿನವೂ ಸಂಜೆ 6ಕ್ಕೆ ನಾಡಿನ ಪ್ರಖ್ಯಾತ ವಿದ್ವಾಂಸರಿಂದ ಹರಿವಂಶ ಗ್ರಂಥದ ಪ್ರವಚನ, ಸಮಾಜಕ್ಕೆ ಅಗತ್ಯವೆನಿಸಿದ, ಧರ್ಮ ಪಾಲನೆಯಲ್ಲಿ ಮುಖ್ಯ ಪಾತ್ರ ವಹಿಸುವ ವಿಷಯಗಳ ಬಗ್ಗೆ ಕಾರ್ಯಾಗಾರ, ಎಲ್ಲ ವಯೋಮಾನದವರಿಗೂ ಧಾರ್ಮಿಕ ಮತ್ತು ನೈತಿಕ ಶಿಕ್ಷಣ ಶಿಬಿರ ನೆರವೇರಲಿದೆ.

ಗೋ ಸೇವೆ: ಶ್ರೀ ಮಠದಲ್ಲಿರುವ ಗೋಶಾಲೆಗೆ ಭಕ್ತರು ಗೋಗ್ರಾಸ ಮತ್ತು ಗೋದಾನಗಳನ್ನು ನೀಡುವ ಮೂಲಕ ಸಂಸ್ಥಾನ ಪ್ರತಿಮಾ ಶ್ರೀ ಗೋಪಾಲಕೃಷ್ಣನ ಸೇವೆಯನ್ನು ಮಾಡಬಹುದು ಎಂದು ಚಾತುರ್ಮಾಸ ಮುಖ್ಯ ಆಯೋಜಕರಾದ ಡಾ. ಮಧುಸೂದನ ಆಚಾರ್ಯ ತಿಳಿಸಿದ್ದಾರೆ.

ವಿವರಗಳಿಗೆ ಮೊ. 95385 16791 ಅಥವಾ 94811 88054 ಸಂಪರ್ಕಿಸಬಹುದು.