ಮದಥಣಿ ಮುರಘೇಂದ್ರ ಶಿವಯೋಗಿಗಳ 94ನೇ ಜಾತ್ರೆ ಸಂಪನ್ನ

| Published : Feb 15 2024, 01:34 AM IST

ಸಾರಾಂಶ

ಮುರಘಾಮಠದಿಂದ ಹೊರಟ ರಥ ಹಾವೇರಪೇಠ ವೃತ್ತಕ್ಕೆ ತೆರಳಿ ಮರಳಿ ಶ್ರೀ ಮಠಕ್ಕೆ ಆಗಮಿಸಿತು. ಭಕ್ತರು ಮಾರ್ಗದುದ್ದಕ್ಕೂ ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಸಮರ್ಪಿಸಿ ಭಕ್ತಿಯಲ್ಲಿ ಮಿಂದೆದ್ದರು.

ಧಾರವಾಡ: ಶ್ರೀ ಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳ 94ನೇ ಜಾತ್ರಾ ಮಹೋತ್ಸವ ಬುಧವಾರ ಸಂಭ್ರಮ, ಸಡಗರ ಹಾಗೂ ಅದ್ಧೂರಿಯಿಂದ ನೆರವೇರಿತು.

ಮುರಘಾಮಠದ ಪೀಠಾಧ್ಯಕ್ಷ ಡಾ. ಮಲ್ಲಿಕಾರ್ಜನ ಸ್ವಾಮೀಜಿ ನೇತೃತ್ವದಲ್ಲಿ ಲಿಂಗದೀಕ್ಷೆ, ರಥೋತ್ಸವ ಕಾರ್ಯಕ್ರಮ ಬುಧವಾರ ನೆರವೇರಿತು. ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ ಲಿಂಗದೀಕ್ಷೆ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ನೂರಕ್ಕೂ ಹೆಚ್ಚು ವಟುಗಳಿಗೆ ದೀಕ್ಷೆ ನೀಡಿದರು. ಸಂಜೆ 4ಕ್ಕೆ ಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳವರ ರಥೋತ್ಸವಕ್ಕೆ ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಚಾಲನೆ ನೀಡಿದರು.

ಮಠದ ಸದ್ಭಕ್ತರು ಶ್ರದ್ಧಾಭಕ್ತಿಯಿಂದ ರಥೋತ್ಸವದಲ್ಲಿ ಭಾಗವಹಿಸಿ ಜೈ ಮುರಘೇಶ, ಜೈ ಮೃತ್ಯುಂಜಯ, ಜೈ ಬಸವವೇಶ, ಜೈ ಮಹಾಂತೇಶ ಜಯಘೋಷಣೆ ಕೂಗಿದರು.

ಮುರಘಾಮಠದಿಂದ ಹೊರಟ ರಥ ಹಾವೇರಪೇಠ ವೃತ್ತಕ್ಕೆ ತೆರಳಿ ಮರಳಿ ಶ್ರೀ ಮಠಕ್ಕೆ ಆಗಮಿಸಿತು. ಭಕ್ತರು ಮಾರ್ಗದುದ್ದಕ್ಕೂ ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಸಮರ್ಪಿಸಿ ಭಕ್ತಿಯಲ್ಲಿ ಮಿಂದೆದ್ದರು. ಈ ಸಂದರ್ಭದಲ್ಲಿ ಚಂದ್ರಶೇಖರ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಮಹಾಂತ ಸ್ವಾಮಿಜಿ ಮತ್ತಿತರರು ಇದ್ದರು. ಶ್ರೀ ಬಸವಲಿಂಗ ಸ್ವಾಮೀಜಿ, ಶ್ರೀ ವಿರುಪಾಕ್ಷ ಸ್ವಾಮೀಜಿ, ಶ್ರೀ ಬಸವಶಾಂತಲಿಂಗ ಸ್ವಾಮೀಜಿ, ಶ್ರೀ ಸ್ವಾಮಿನಾಥ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಇದ್ದರು.

ಪ್ರಶಸ್ತಿ ಪ್ರದಾನ

ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಸಂಜೆ ಶ್ರೀಮಠದಲ್ಲಿ 2024ನೇ ಮೃತ್ಯುಂಜಯ -ಮಹಾಂತ ಪ್ರಶಸ್ತಿಯನ್ನು ಹಾರಕೂಡ ಸಂಸ್ಥಾನಮಠದ ಶ್ರೀ ಡಾ. ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಗದಗ ತೊಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಪ್ರದಾನ ಮಾಡಿದರು. ಮಠಾಧೀಶರು ಗುಡಿ-ಗುಂಡಾರ ಕಟ್ಟಿದವವರಲ್ಲ. ಬದಲಾಗಿ ಹಸಿದವನಿಗೆ ಉಣಬಡಿಸಿ ಆತನಿಗೆ ಅಕ್ಷರದ ಜೊತೆಗೆ ಜ್ಞಾನ ನೀಡಿದ್ದಾರೆ. ಮೃತ್ಯುಂಜಯಪ್ಪಗಳು ಈ ಕಾರ್ಯ ಮಾಡಿದವರಲ್ಲಿ ಮೊದಲಿಗರಾಗಿದ್ದಾರೆ. ಇದಕ್ಕೆ ಕರ್ನಾಟಕದಲ್ಲಿ ಅನೇಕ ಮಠಗಳು ಸಾಕ್ಷಿಯಾಗಿವೆ ಎಂದರು.

ಪ್ರಶಸ್ತಿ ಸ್ವೀಕರಿಸಿದ ಡಾ.ಚನ್ನವೀರ ಸ್ವಾಮೀಜಿ, ಅಥಣಿ ಶಿವಯೋಗಿಗಳು ಇಷ್ಟಲಿಂಗದ ಪರಿಕಲ್ಪನೆ ಹಾಗೂ ಮಾನವೀಯ ಸಿದ್ದಾಂತವನ್ನು ಜನಮನಕ್ಕೆ ತಲುಪಿಸಿದರು. ಇಲ್ಲಿ ಯಾವುದೇ ಒಂದು ಜಾತಿ, ಒಬ್ಬ ವ್ಯಕ್ತಿಗೆ ಮೀಸಲಾಗಿಸದೆ ಸಕಲರಿಗೆ ಲೇಸಬಯಸಿದರು. ಮುರಘಾಮಠದಲ್ಲಿ ಧರ್ಮ, ಜಾತಿ ವರ್ಗ, ವರ್ಣ ಭೇದವಿಲ್ಲದೆ ಸಂಸ್ಕಾರದಿಂದ ಎಲ್ಲರನ್ನೂ ಒಂದುಗೂಡಿಸಿ ಸಮಾನತೆಯನ್ನು ತರುವ ಕೆಲಸ ಮಾಡುತ್ತದೆ. ಮೃತ್ಯುಂಜಯಪ್ಪಗಳು, ಮಹಾಂತಪ್ಪಗಳು ನಾಡಿಗೆ ಮಾದರಿಯಾಗಿದ್ದಾರೆ. ಅವರ ಹೆಸರಿನ ಪ್ರಶಸ್ತಿ ಮನಸ್ಸಿಗೆ ಸಮಾಧಾನ ತಂದಿದೆ ಎಂದರು. ತೋಂಟದಾರ್ಯದ ನಿಜಗುಣ ಪ್ರಭು ಸಮ್ಮುಖ ವಹಿಸಿದ್ದರು.