ಸಾರಾಂಶ
ಹುಬ್ಬಳ್ಳಿ: ಕಳೆದ ಆರೇಳು ತಿಂಗಳಿಂದ ಒಂದಿಲ್ಲೊಂದು ಪ್ರಕರಣದಲ್ಲಿ ಗರ್ಜಿಸುತ್ತಿರುವ ಪೊಲೀಸ್ ಬಂದೂಕು, ವರ್ಷದ ಕೊನೆ ದಿನವೂ ಸದ್ದು ಮಾಡಿದೆ. ಮಹಜರು ಮಾಡಲು ಕರೆದುಕೊಂಡು ಹೋದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಪೊಲೀಸರ ಗುಂಡೇಟು ತಿಂದು ಗಾಯಗೊಂಡಿರುವ ಆರೋಪಿಯನ್ನು ಕೆಎಂಸಿಆರ್‌ಐನಲ್ಲಿ ದಾಖಲಿಸಲಾಗಿದೆ.
ಇಲ್ಲಿನ ಹಳೇಹುಬ್ಬಳ್ಳಿ ಘೋಡಕೆ ಪ್ಲಾಟ್‌ನ ನಿವಾಸಿ ಮುಜಮಿಲ್ ಮಗಮಿ (28) ಎಂಬಾತನೇ ಪೊಲೀಸರ ಗುಂಡೇಟು ತಿಂದವ.ಈತ ಅದೇ ಘೋಡಕೆ ಪ್ಲಾಟ್‌ನ ನಿವಾಸಿಗಳಾದ ಆತನ ಚಿಕ್ಕಂಪಂದಿರಾದ ಜಾವೀದ್ ಶೇಖ್ (32), ಸಮೀರ್ ಶೇಖ್ ಎಂಬವರೊಂದಿಗೆ ಹಳೇ ವೈಷಮ್ಯ ಹೊಂದಿದ್ದ. ಸೋಮವಾರ ರಾತ್ರಿ ಜಗಳ ತೆಗೆದು ತನ್ನ ಸಹಚರರೊಂದಿಗೆ ಸೇರಿಕೊಂಡು ಚಾಕುವಿನಿಂದ ಇರಿದಿದ್ದ. ಅಲ್ಲದೇ, ತನ್ನ ವಿರುದ್ಧ ಪೊಲೀಸರಿಗೆ ದೂರು ಕೊಟ್ಟರೆ ನಿಮ್ಮ ಹಾಗೂ ನಿಮ್ಮ ಮನೆಯಲ್ಲಿರುವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಕೂಡ ಹಾಕಿದ್ದ. ಬಳಿಕ ಹೊರವಲಯಕ್ಕೆ ತೆರಳಿ ಚಾಕು ತೋರಿಸಿ ವಾಹನ ನಿಲ್ಲಿಸಿ ದರೋಡೆ ಕೂಡ ಮಾಡಿದ್ದ.
ಈತನನ್ನು ಸೋಮವಾರವೇ ಬಂಧಿಸಿದ್ದ ಪೊಲೀಸರು, ಮಂಗಳವಾರ ಬೆಳಗ್ಗೆ ಮಹಜರು ಮಾಡಲು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆಗ ಹಳೇಹುಬ್ಬಳ್ಳಿ ಠಾಣೆಯ ಪಿಐ ಸುರೇಶ ಯಳ್ಳೂರ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಎಚ್ಚರಿಸಿದ್ದಾರೆ. ಆದರೂ ಈತ ತಪ್ಪಿಸಿಕೊಳ್ಳುವ ತನ್ನ ಯತ್ನವನ್ನು ಮುಂದುವರಿಸಿದ್ದಾನೆ. ಆಗ ಬಲಗಾಲಿಗೆ ಗುಂಡು ಹೊಡೆದು ಗಾಯಗೊಳಿಸಿದ್ದಾರೆ. ಬಳಿಕ ಬಂಧಿಸಿ ಕೆಎಂಸಿ ಆರ್‌ಐಗೆ ಕರೆದುಕೊಂಡು ಬಂದಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖಚಿತ ಮಾಹಿತಿ ಮೇರೆಗೆ ಆರೋಪಿ ಮುಜಮಿಲ್‌ನನ್ನು ಸೋಮವಾರ ರಾತ್ರಿ ವಶಕ್ಕೆ ಪಡೆಯಲಾಗಿತ್ತು. ಮಂಗಳವಾರ ಬೆಳಗ್ಗೆ ತನ್ನ ಸಹಚರರ ಜಾಗ ತಿಳಿಸುವುದಾಗಿ ಹೇಳಿ ಪೊಲೀಸರನ್ನು ಕರೆದುಕೊಂಡು ಹೋದ ವೇಳೆ ತಪ್ಪಿಸುವಕೊಳ್ಳುವ ಪ್ರಯತ್ನ ಮಾಡಿದಾಗ ಗುಂಡೇಟು ತಿಂದಿದ್ದಾನೆ. ಈ ಘಟನೆಯಲ್ಲಿ ಇನ್‌ಸ್ಪೆಕ್ಟರ್ ಹಾಗೂ ಓರ್ವ ಸಿಬ್ಬಂದಿಗೆ ಗಾಯವಾಗಿದೆ. ಆರೋಪಿ ಹಾಗೂ ಗಾಯಾಳು ಪೊಲೀಸರನ್ನು ಕೆಎಂಸಿಆರ್‌ಐನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾಹಿತಿ ನೀಡಿದರು.
ಈ ಕುರಿತು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ. ಈ ವೇಳೆ ಡಿಸಿಪಿಗಳಾದ ಮಹಾನಿಂಗ್ ನಂದಗಾವಿ, ರವೀಶ ಸಿ.ಆರ್ ಸೇರಿದಂತೆ ಹಲವರಿದ್ದರು.